
ಹಾವೇರಿ (ಜೂ. 26): ನೆರೆಸಂತ್ರಸ್ತರ ವಸತಿ ಯೋಜನೆಯಡಿ ಬಿಲ್ ಮಂಜೂರಿಗೆ ಸರ್ಕಾರಿ ನೌಕರನೊಬ್ಬ ಲಂಚ ಬೇಡಿಕೆಯಿಟ್ಟಿದ್ದು, ಸಂಕಷ್ಟದಲ್ಲಿದ್ದ ಸಂತ್ರಸ್ತನು ತನ್ನ ಪತ್ನಿಯ ಮಾಂಗಲ್ಯ ಸರವನ್ನೇ ಅಡವಿಟ್ಟು ಹಣ ನೀಡಿದ ಮನಕಲುಕುವ ಘಟನೆ ಹಾವೇರಿ ತಾಲ್ಲೂಕಿನ ಬೆಳವಗಿ ಗ್ರಾಮದಲ್ಲಿ ನಡೆದಿದೆ.
ಸಂತ್ರಸ್ತ ಮಹಾಂತೇಶ್ ಬಡಿಗೇರ್ ಎಂಬವರು ಕಳೆದ ವರ್ಷ ಭಾರಿ ಮಳೆಯಿಂದಾಗಿ ತಮ್ಮ ಮನೆ ಕಳೆದುಕೊಂಡಿದ್ದರು. ಸರ್ಕಾರದ ವಸತಿ ಯೋಜನೆಯಡಿ ಮನೆ ನಿರ್ಮಿಸಲು ಮಂಜೂರಾತಿ ದೊರಕಿದರೂ, ಮನೆ ನಿರ್ಮಾಣದ ಬಿಲ್ ಅನ್ನು ಮಂಜೂರು ಮಾಡಲು ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಮದನ್ ಮೋಹನ್ ಅವರು ₹20,000 ಲಂಚವನ್ನು ಬೇಡಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಬರಬೇಕಾದ ಬಿಲ್ ಅನಿವಾರ್ಯವಾಗಿತ್ತು. ಈಗಾಗಲೇ ಸಾಲ ಮಾಡಿ ಮನೆ ಕಟ್ಟಿದ್ದೆ. ನೌಕರರು ಹಣ ಕೇಳಿದ ಕಾರಣ, ನನ್ನ ಪತ್ನಿಯ ಮಾಂಗಲ್ಯ ಸರವನ್ನು ಅಡವಿಟ್ಟು ಕಚೇರಿಯ ಕ್ಯಾಂಟೀನ್‌ಲ್ಲಿ ಮದನ್ ಮೋಹನ್ ಅವರಿಗೆ ₹20,000 ನೀಡಿದ್ದೇನೆ ಎಂದು ಮಹಾಂತೇಶ್ ತಹಸೀಲ್ದಾರ್ ಶರಣಮ್ಮ ಅವರಿಗೆ ನೋವಿನಿಂದಲೇ ಹೇಳಿದ್ದಾರೆ. ಇದನ್ನೇ ಆಧಾರವಿಟ್ಟುಕೊಂಡು ಮಹಾಂತೇಶ್ ಅವರು ಕೆಆರ್‌ಎಸ್ ಪಕ್ಷದ ಕಾರ್ಯಕರ್ತರೊಂದಿಗೆ ತಹಶೀಲ್ದಾರ್ ಶರಣಮ್ಮ ಅವರನ್ನು ಭೇಟಿಯಾಗಿ ಅಹವಾಲು ಸಲ್ಲಿಸಿದರು.
ತಕ್ಷಣ ಸ್ಪಂದಿಸಿದ ತಹಶೀಲ್ದಾರ್ ಶರಣಮ್ಮ, 'ಹಣ ನೀಡಿದ ದಾಖಲೆಗಳನ್ನು ನನಗೆ ನೀಡಿ. ನಾವು ಈ ಕುರಿತಾಗಿ ಸೂಕ್ತ ತನಿಖೆ ನಡೆಸುತ್ತೇವೆ. ನೌಕರನ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಉನ್ನತಾಧಿಕಾರಿಗಳಿಗೆ ಶಿಫಾರಸು ಮಾಡುತ್ತೇನೆ' ಎಂದು ಭರವಸೆ ನೀಡಿದರು. ಮಹಾಂತೇಶ್ ಬಡಿಗೇರ್ ಕಳೆದ ಎರಡು ವರ್ಷಗಳಿಂದ ತಹಶೀಲ್ದಾರ್ ಕಚೇರಿಗೆ ಅಲೆದಾಡುತ್ತಿದ್ದರೂ, ಬಿಲ್ ಮಂಜೂರಾಗದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ. ಸಂತ್ರಸ್ತರು ಹಣ ನೀಡಿದ ನಂತರ ಮಾತ್ರ ಬಿಲ್ ಮಂಜೂರು ಮಾಡಲಾಗುತ್ತದೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ.
ಇಂತಹ ಘಟನೆಗಳು ಸರಕಾರದ ವಸತಿ ಯೋಜನೆಯ ನೈತಿಕತೆಯನ್ನೇ ಪ್ರಶ್ನಿಸುತ್ತಿದ್ದು, ದೀನ ದಲಿತರ ನೋವಿಗೆ ಕಾರಣವಾಗುತ್ತಿದೆ. ಅಧಿಕಾರಿಗಳು ಕೂಡಲೇ ಕ್ರಮ ತೆಗೆದು ನಿಷ್ಠುರ ನೌಕರರನ್ನು ದುಡಿಯುವ ಸ್ಥಾನದಿಂದ ತೆರವುಗೊಳಿಸಬೇಕು ಎಂಬ ಬೇಡಿಕೆ ನೆರೆ ಸಂತ್ರಸ್ತರಿಂದ ಕೇಳಿಬರುತ್ತಿದೆ.