
ಬೆಂಗಳೂರು (ಅ.22): ಬೆಂಗಳೂರಿನ ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುನೀಲ್ ವಿರುದ್ಧದ ಅತ್ಯಾ*ಚಾರ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯ ಹೇಳಿಕೆ ಮತ್ತು ಅವರ ನಡುವೆ ನಡೆದ ಚಾಟಿಂಗ್ ವಿವರಗಳು ಈಗ ಬಹಿರಂಗಗೊಂಡಿದ್ದು, ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿವೆ. ಇನ್ಸ್‌ಪೆಕ್ಟರ್ ಸುನೀಲ್ ಅವರು ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬ ಸಂತ್ರಸ್ತೆಯ ದೂರಿನ ಸತ್ಯಾಂಶಗಳನ್ನು ಈ ಚಾಟ್‌ಗಳು ಬಿಚ್ಚಿಟ್ಟಿವೆ.
ತಮ್ಮ ಹೇಳಿಕೆಯಲ್ಲಿ ಸಂತ್ರಸ್ತ ಯುವತಿ, ಇನ್ಸ್‌ಪೆಕ್ಟರ್ ಸುನೀಲ್ ಅವರ ಪರಿಚಯವಾದ ನಂತರ ತಮ್ಮ ಜೀವನದ ದಿಕ್ಕೇ ಬದಲಾಯಿತು ಎಂದು ಹೇಳಿದ್ದಾರೆ. 'ಮೊದಲು ಇನ್ಸ್‌ಪೆಕ್ಟರ್ ಪರಿಚಯವಾಯಿತು. ಆಮೇಲೆ ಯಾರ ಕಾಂಟ್ಯಾಕ್ಟ್‌ನಲ್ಲೂ ಇರಬಾರದು ಎಂದು ಹೇಳಿದರು. ರಿಜಿಸ್ಟ್ರೇಷನ್ ಮ್ಯಾರೇಜ್ ಆಗುತ್ತೇನೆ, ಜೊತೆಯಲ್ಲೇ ಇರುತ್ತೇನೆ, ಇಬ್ಬರೂ ವಾಸಕ್ಕಿರಲು ಅನುಕೂಲ ಆಗುವಂತೆ ಒಂದು ಫ್ಲ್ಯಾಟ್ ನೋಡೋಣ, ಅಲ್ಲೇ ಇರೋಣ ಎಂದು ಹೇಳಿದರು. ಮದುವೆಯಾಗುತ್ತೇನೆ ಎಂದು ಹೇಳಿ ಸತಾಯಿಸುತ್ತಿದ್ದರು' ಎಂದು ವಿವರಿಸಿದ್ದಾರೆ.
ಪೊಲೀಸ್ ಇಲಾಖೆಯ ಎಎಸ್ಐ ಪ್ರಕಾಶ್ ಅವರಿಗೂ ಹಾಗೂ ತನಗೆ ಆಗುತ್ತಿರಲಿಲ್ಲ. ಪ್ರಕಾಶ್ ಅವರ ಮೇಲೆ ದೂರು ನೀಡಲು ನಾನು ಇನ್ಸ್‌ಪೆಕ್ಟರ್ ಕಾಂಟ್ಯಾಕ್ಟ್ ಮಾಡಿದೆ. ಕಂಪ್ಲೇಂಟ್ ಕೊಡಲು ಹೋದಾಗ ಇನ್ಸ್‌ಪೆಕ್ಟರ್ ಪರಿಚಯವಾಯಿತು ಎಂದಿದ್ದಾರೆ. ಆರಂಭದಲ್ಲಿ ಮೆಸೇಜ್‌ಗಳು ಶುರುವಾಗಿದ್ದು, 'ಸರ್ ನಾನು ಒಬ್ಬರನ್ನು ಲವ್ ಮಾಡ್ತಿದ್ದೆ, ಅದು ಬ್ರೇಕ್ ಅಪ್ ಆಗಿತ್ತು' ಎಂದು ಇನ್ಸ್‌ಪೆಕ್ಟರ್‌ಗೆ ಹೇಳಿದ್ದಾಗಿ ಯುವತಿ ತಿಳಿಸಿದ್ದಾರೆ.
ಇನ್ಸ್‌ಪೆಕ್ಟರ್ ಸುನೀಲ್ ಅವರು ವಂಚನೆ ಮಾಡಿದ ವಿಧಾನವನ್ನು ವಿವರಿಸಿದ ಸಂತ್ರಸ್ತೆ, 'ನಮ್ಮ ವೈಫ್ ಇಲ್ಲ, ಊರಿಗೆ ಹೋಗಿದ್ದಾರೆ, ಮನೆಗೆ ಬನ್ನಿ' ಎಂದು ಲೋಕೇಶನ್ ಕಳುಹಿಸಿದ್ದರು. ಮನೆಗೆ ಹೋದಾಗ ಅಲ್ಲಿ ಡ್ರಿಂಕ್ಸ್ ಎಲ್ಲ ಇಟ್ಟಿದ್ದರು ಎಂದು ಹೇಳುವ ಮೂಲಕ, ದೌರ್ಜನ್ಯ ನಡೆದಿರುವ ಸಂದರ್ಭವನ್ನು ಹೇಳಿಕೊಂಡಿದ್ದಾರೆ.
ಇನ್ಸ್‌ಪೆಕ್ಟರ್ ಸುನೀಲ್ ಮತ್ತು ಸಂತ್ರಸ್ತ ಯುವತಿ ನಡುವೆ ನಡೆದ ಚಾಟಿಂಗ್ ಸಂಭಾಷಣೆಗಳು ಪೊಲೀಸರಿಗೆ ಲಭ್ಯವಾಗಿದ್ದು, ಇಬ್ಬರ ನಡುವಿನ ಸಂಬಂಧದ ಸ್ವರೂಪವನ್ನು ಇದು ಬಯಲು ಮಾಡಿದೆ. ಚಾಟಿಂಗ್ ವಿವರಗಳ ಪ್ರಕಾರ, ಇನ್ಸ್‌ಪೆಕ್ಟರ್ ಸುನೀಲ್ ಅವರು ತಮ್ಮ ಮನೆ ಲೊಕೇಶನ್ ಅನ್ನು ಶೇರ್ ಮಾಡಿ, 'ಮನೆಯಲ್ಲಿ ಹೆಂಡತಿ-ಮಕ್ಕಳಿಲ್ಲ, ಬಾ' ಎಂದು ಮೆಸೇಜ್ ಕಳುಹಿಸಿರುವುದಕ್ಕೆ ಪುರಾವೆಗಳಿವೆ. ಇದಕ್ಕೆ ಪ್ರತಿಕ್ರಿಯಿಸಿದ ಯುವತಿಯೂ ಸಹ, 'ಯೂ ಆರ್ ಲವ್ ಮೈ ಸ್ವೀಟ್ ಹಾರ್ಟ್' ಎಂದು ಮೆಸೇಜ್ ಮಾಡಿದ್ದು ಕಂಡುಬಂದಿದೆ.
ಹಾಗೆಯೇ, ಯುವತಿಯು 'ಚಿನ್ನಿ ಮಿಸ್ ಯೂ' ಎಂದು ಮೆಸೇಜ್ ಕಳುಹಿಸಿದಾಗ, ಇನ್ಸ್‌ಪೆಕ್ಟರ್ 'ಮೀ ಟೂ' ಎಂದು ರಿಪ್ಲೈ ಮಾಡಿರುವುದು ದಾಖಲಾಗಿದೆ. ಇವರಿಬ್ಬರ ನಡುವೆ ವೀಡಿಯೋ ಕಾಲ್ ಮೂಲಕವೂ ಮಾತುಕತೆ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಲ್ಲಿ ಇಬ್ಬರೂ ಪರಸ್ಪರ ಚಾಟಿಂಗ್ ಮಾಡಿರುವುದು ಕಂಡುಬಂದಿದ್ದು, ಮದುವೆಗೆ ನಿರಾಕರಿಸಿದ್ದಕ್ಕೆ ಪ್ರಕರಣ ಬಯಲಿಗೆ ಬಂದಿದೆ.
ಒಟ್ಟಾರೆ, ಇನ್ಸ್‌ಪೆಕ್ಟರ್ ಸುನೀಲ್ ಅವರು ಮದುವೆಯಾಗುವ ಭರವಸೆ ನೀಡಿ ಪ್ರೀತಿಯ ಮಾತುಗಳ ಮೂಲಕ ನಂಬಿಸಿ, ಮಹಿಳೆಯನ್ನು ತಮ್ಮ ಮನೆಗೆ ಕರೆಸಿಕೊಂಡು ದೌರ್ಜನ್ಯ ಎಸಗಿದ್ದಾರೆ ಎಂಬ ಸಂತ್ರಸ್ತೆಯ ಆರೋಪಕ್ಕೆ ಈ ಚಾಟಿಂಗ್ ವಿವರಗಳು ಪುಷ್ಟಿ ನೀಡಿದಂತಿವೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಡಿಜಿ ಮತ್ತು ಐಜಿಪಿ ಕಚೇರಿಯು ಈ ದೂರಿನ ಬಗ್ಗೆ ಸಂಪೂರ್ಣ ತನಿಖೆ ನಡೆಸಿ, ಸತ್ಯಾಂಶವನ್ನು ಬಯಲಿಗೆ ತರಬೇಕಿದೆ.