ಬೆಂಗಳೂರಲ್ಲಿ ಭೂಗಳ್ಳರಿಗೆ JCB ಶಾಕ್ ಕೊಟ್ಟ ಜಿಲ್ಲಾಧಿಕಾರಿ ಜಗದೀಶ್: ₹8 ಕೋಟಿ ಮೌಲ್ಯದ ಆಸ್ತಿ ಸರ್ಕಾರದ ವಶ!

Published : Feb 27, 2026, 09:42 PM IST
Bengaluru JCB Demolish

ಸಾರಾಂಶ

ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ನೇತೃತ್ವದಲ್ಲಿ, ಜಿಲ್ಲೆಯಾದ್ಯಂತ ಒತ್ತುವರಿಯಾಗಿದ್ದ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ. ಈ ತೆರವು ಕಾರ್ಯಾಚರಣೆಯಲ್ಲಿ, ಸುಮಾರು 8.20 ಕೋಟಿ ರೂಪಾಯಿ ಮೌಲ್ಯದ 6 ಎಕರೆಗೂ ಅಧಿಕ ಜಮೀನನ್ನು ಸರ್ಕಾರಿ ಸ್ವತ್ತೆಂದು ಘೋಷಿಸಲಾಗಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರಿ ಭೂಮಿಯನ್ನು ನುಂಗಿ ನೀರು ಕುಡಿಯುತ್ತಿರುವ ಒತ್ತುವರಿದಾರರ ವಿರುದ್ಧ ಜಿಲ್ಲಾಡಳಿತ ಸಮರ ಸಾರಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ಅವರ ನೇತೃತ್ವದಲ್ಲಿ ಇಂದು ಜಿಲ್ಲೆಯಾದ್ಯಂತ ಬೃಹತ್ ಕಾರ್ಯಾಚರಣೆ ನಡೆದಿದ್ದು, ಬರೋಬ್ಬರಿ 8.20 ಕೋಟಿ ರೂಪಾಯಿ ಮೌಲ್ಯದ 6 ಎಕರೆ 0.35 ಗುಂಟೆ ಸರ್ಕಾರಿ ಜಮೀನನ್ನು ಒತ್ತುವರಿಯಿಂದ ಮುಕ್ತಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.

ವಿವಿಧ ತಾಲ್ಲೂಕುಗಳಲ್ಲಿ ಮಿಂಚಿನ ಕಾರ್ಯಾಚರಣೆ:

ಶುಕ್ರವಾರ ಬೆಳ್ಳಂಬೆಳಗ್ಗೆ ವಿವಿಧ ತಾಲ್ಲೂಕುಗಳ ತಹಶೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸರ್ಕಾರಿ ಗೋಮಾಳ, ಕುಂಟೆ, ರಾಜಕಾಲುವೆ ಹಾಗೂ ಬಂಡಿದಾರಿ ಜಾಗಗಳ ಮೇಲೆ ದಾಳಿ ನಡೆಸಿದರು. ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಸೂಚನೆಯಂತೆ ಈ ತೆರವು ಕಾರ್ಯಾಚರಣೆ ನಡೆದಿದೆ.

ಆನೇಕಲ್ ತಾಲ್ಲೂಕಿನಲ್ಲಿ ಅತಿ ಹೆಚ್ಚು ಜಮೀನು ವಶ:

ಆನೇಕಲ್ ತಾಲ್ಲೂಕಿನಾದ್ಯಂತ ಹಲವು ಕಡೆಗಳಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ.

ಯಡವನಹಳ್ಳಿ: ಅತ್ತಿಬೆಲೆ ಹೋಬಳಿಯ ಯಡವನಹಳ್ಳಿ ಗ್ರಾಮದ ಸರ್ವೇ ನಂಬರ್ 63ರಲ್ಲಿ ಒತ್ತುವರಿಯಾಗಿದ್ದ 2 ಎಕರೆ ಗೋಮಾಳವನ್ನು ವಶಕ್ಕೆ ಪಡೆಯಲಾಗಿದೆ. ಇದರ ಅಂದಾಜು ಮೌಲ್ಯ 3.00 ಕೋಟಿ ರೂ.

ಬಗ್ಗನದೊಡ್ಡಿ: ಕಸಬಾ-1 ಹೋಬಳಿಯ ಈ ಗ್ರಾಮದಲ್ಲಿ 1 ಕೋಟಿ ರೂ. ಮೌಲ್ಯದ 1 ಎಕರೆ ಗೋಮಾಳ ತೆರವುಗೊಳಿಸಲಾಗಿದೆ.

ಕೂಗೂರು: ಸರ್ಜಾಪುರ ಹೋಬಳಿಯಲ್ಲಿ 20 ಗುಂಟೆ ಸರ್ಕಾರಿ ಕುಂಟೆ ಜಾಗವನ್ನು (ಮೌಲ್ಯ 70 ಲಕ್ಷ ರೂ.) ವಶಪಡಿಸಿಕೊಳ್ಳಲಾಗಿದೆ.

ಮಾರಗೊಂಡನಹಳ್ಳಿ: ಜಿಗಣಿ ಹೋಬಳಿಯ ಈ ಗ್ರಾಮದಲ್ಲಿ 1 ಎಕರೆ 20 ಗುಂಟೆ ರಾಜಕಾಲುವೆ ಹಾಗೂ ಅಷ್ಟೇ ವಿಸ್ತೀರ್ಣದ ಬಂಡಿದಾರಿ ಜಾಗವನ್ನು ತೆರವುಗೊಳಿಸಲಾಗಿದ್ದು, ಇವುಗಳ ಒಟ್ಟು ಮೌಲ್ಯ ತಲಾ 1 ಕೋಟಿ ರೂ. ಆಗಿದೆ.

ಬೆಂಗಳೂರು ಉತ್ತರದಲ್ಲೂ ಕಾರ್ಯಾಚರಣೆ:

ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಕುದುರೆಗೆರೆ ಗ್ರಾಮದಲ್ಲಿ ಸರ್ವೇ ನಂಬರ್ 18ರಲ್ಲಿದ್ದ 15 ಗುಂಟೆ ಸರ್ಕಾರಿ ಗೋಮಾಳವನ್ನು ತೆರವುಗೊಳಿಸಲಾಗಿದೆ. ಅಚ್ಚರಿಯೆಂದರೆ, ಈ ಸಣ್ಣ ಜಾಗದ ಮೌಲ್ಯವೇ ಬರೋಬ್ಬರಿ 1.50 ಕೋಟಿ ರೂಪಾಯಿಗಳಾಗಿವೆ.

ಒತ್ತುವರಿದಾರರಿಗೆ ಎಚ್ಚರಿಕೆ:

‘ಸರ್ಕಾರಿ ಜಮೀನು, ರಾಜಕಾಲುವೆ ಹಾಗೂ ಸಾರ್ವಜನಿಕ ಆಸ್ತಿಗಳನ್ನು ಒತ್ತುವರಿ ಮಾಡುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಜಿಲ್ಲೆಯಾದ್ಯಂತ ಇಂತಹ ಕಾರ್ಯಾಚರಣೆಗಳು ನಿರಂತರವಾಗಿ ನಡೆಯಲಿವೆ’ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ಅವರು ಎಚ್ಚರಿಕೆ ನೀಡಿದ್ದಾರೆ.

ಕಾರ್ಯಾಚರಣೆಯ ವೇಳೆ ವಿವಿಧ ತಾಲ್ಲೂಕುಗಳ ತಹಶೀಲ್ದಾರ್‌ಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಹಾಜರಿದ್ದರು. ವಶಪಡಿಸಿಕೊಂಡ ಭೂಮಿಯಲ್ಲಿ ಸರ್ಕಾರದ ನಾಮಫಲಕಗಳನ್ನು ಅಳವಡಿಸಲಾಗಿದೆ.

PREV
Read more Articles on
click me!

Recommended Stories

ಹಳ್ಳಿಮೇಷ್ಟ್ರು ಕಾಮಪುರಾಣಕ್ಕೆ ಜೀವಾವಧಿ ಶಿಕ್ಷೆ ಕೊಟ್ಟ ಕೋರ್ಟ್; ಅಂಗವಿಕಲ ಯುವತಿ ಹುರಿದುಮುಕ್ಕಿದವ ಜೈಲುಪಾಲು!
ಉತ್ತರಕನ್ನಡ: ಬ್ರಾಹ್ಮಣ ಸಮುದಾಯದ ಅವಹೇಳನ; ಸಿಗಂದೂರು ಧರ್ಮದರ್ಶಿ ರಾಮಪ್ಪ ವಿರುದ್ಧ ಎಫ್‌ಐಆರ್