
ಬೆಂಗಳೂರು: ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳವುಗಳು ಹೆಚ್ಚಾಗುತ್ತಿರುವ ನಡುವೆ, ಹಾಡಹಗಲೇ ರಾಜರೋಷವಾಗಿ ನಿಲ್ಲಿಸಲಾಗಿದ್ದ ಸ್ಕೂಟಿಯನ್ನು ಕಳವು ಮಾಡಲಾಗಿದೆ. ಉತ್ತರಹಳ್ಳಿ ಪ್ರದೇಶದಲ್ಲಿ ನಡೆದ ಹೊಸ ಕಳ್ಳತನ ಪ್ರಕರಣ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮನೆ ಮುಂದೆ ನಿಲ್ಲಿಸಲಾಗಿದ್ದ ಸ್ಕೂಟರ್‌ನ್ನು ಕೇವಲ ಕೆಲವೇ ಸೆಕೆಂಡುಗಳಲ್ಲಿ ಕಳವು ಮಾಡಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಘಟನೆ ಎರಡು ದಿನಗಳ ಹಿಂದೆ ನಡೆದಿದೆ. ಸ್ಕೂಟರ್ ಮಾಲೀಕನು ವಾಹನದಲ್ಲಿ ಕೀ ಮರೆತು ಮನೆಗೆ ತೆರಳಿದ್ದಾನೆ. ಈ ನಡುವೆ ನಾಲ್ವರು ಯುವಕರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅವರಲ್ಲಿ ಒಬ್ಬನು ಸ್ಕೂಟರ್‌ನಲ್ಲಿ ಕೀ ಬಿಟ್ಟು ಹೋಗಿರುವುದನ್ನು ಗಮನಿಸಿದ್ದಾನೆ. ಯಾವುದೇ ಅನುಮಾನ ಮೂಡದಂತೆ, ತನ್ನದೇ ವಾಹನ ಎಂಬಂತೆ ನೇರವಾಗಿ ಸ್ಕೂಟರ್ ಅನ್ನು ಸ್ಟಾರ್ಟ್ ಮಾಡಿ ರಾಜರೋಷವಾಗಿ ಪರಾರಿಯಾಗಿದ್ದಾನೆ.
ಸ್ಕೂಟರ್ ಕಳೆದುಕೊಂಡ ನಂತರ, ಮಾಲೀಕ ಬಾಲಾಜಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾರೆ. ಆದರೆ, ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲು ಪೊಲೀಸ್ ಸಿಬ್ಬಂದಿ ಹಿಂದೇಟು ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಾಹನದ ದಾಖಲೆಗಳನ್ನು ತರಲು ಹೇಳಿ ಬಾಲಾಜಿಯನ್ನು ವಾಪಸು ಕಳುಹಿಸಿರುವುದಾಗಿ ತಿಳಿದು ಬಂದಿದೆ.
ಮತ್ತೊಂದೆಡೆ, ಬಾಲಾಜಿ ಈ ಸ್ಕೂಟರ್‌ನ್ನು ಸುಮಾರು ಐದು ತಿಂಗಳ ಹಿಂದೆ 23,000 ರೂ. ಕೊಟ್ಟು ಬೇರೆಯೊಬ್ಬರಿಂದ ಖರೀದಿಸಿದ್ದರೂ, ಇನ್ನೂ ತನ್ನ ಹೆಸರಿಗೆ ಟ್ರಾನ್ಸ್‌ಫರ್ ಮಾಡಿಕೊಂಡಿರಲಿಲ್ಲ. ಈ ಕಾರಣದಿಂದಾಗಿ, ಪೊಲೀಸ್ ದೂರು ದಾಖಲಿಸುವಲ್ಲಿ ಕೂಡ ಮಾಲೀಕರಿಗೇ ಸಂಕಷ್ಟ ಉಂಟಾಗಿದೆ.
ಈ ಘಟನೆ ದ್ವಿಚಕ್ರ ವಾಹನ ಕಳವು ಪ್ರಕರಣಗಳ ಮೇಲಿನ ಪೊಲೀಸರ ಸ್ಪಂದನೆ, ವಾಹನ ಮಾಲೀಕರ ಜಾಗೃತಿ ಮತ್ತು ನೋಂದಣಿ ಪಕ್ರಿಯೆಯ ಮಹತ್ವದ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ. ವಾಹನವನ್ನು ಕ್ಷಣಮಾತ್ರ ಬಿಟ್ಟರೂ ಕಳ್ಳರಿಗೆ ಅದು ಸಾಕು ಎಂದು ಈ ಪ್ರಕರಣ ಮತ್ತೊಮ್ಮೆ ಸಾಬೀತುಪಡಿಸಿದೆ. ಸಿಸಿಟಿವಿ ಲಭ್ಯವಾಗಿರುವುದಿಂದ ಆರಾಮವಾಗಿ ಕಳ್ಳರನ್ನು ಹಿಡಿಯಬಹುದು. ಈ ಮೂಲಕವಾದರೂ ಕಳ್ಳತನ ಪ್ರಕರಣ ಕಡಿಮೆ ಆಗಬಹುದು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.