
ಬೆಂಗಳೂರು: ಅವರೆಲ್ಲ ಸ್ನೇಹಿತರು ಏಸಿ ಸರ್ವಿಸ್ ಮಾಡಿಕೊಂಡು ಒಂದೇ ರೂಮ್‌ನಲ್ಲಿ ಎಲ್ಲರೂ ವಾಸಿಸುತ್ತಿದ್ದರು. ಆದ್ರೆ ಆಗಾಗ ಅವರ ಮಧ್ಯೆ ಜಗಳ ಆಗುತ್ತಿತ್ತು. ಮರುದಿನ ಎಲ್ಲವೂ ಸರಿಯಾಗುತ್ತಿತ್ತು. ಆದರೆ ಒಂದು ದಿನ ಮಾತ್ರ ಗಲಾಟೆ ವಿಕೋಪಕ್ಕೆ ತಿರುಗಿ ಒಬ್ಬನ ಕೊಲೆಯಾಗಿದೆ. ಸ್ನೇಹಿತನನ್ನೇ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ ಹೃದಯವಿದ್ರಾವಕ ಘಟನೆ ನಗರದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅತ್ತಿಮರ ಗೊರವಿನಗೆರೆಯಲ್ಲಿ ನಡೆದಿದೆ.
ಮೃತ ಯುವಕನನ್ನು 22 ವರ್ಷದ ಕುನಾಲ್ ಕುಮಾರ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು 24 ವರ್ಷದ ಮೊಹಮ್ಮದ್ ನಸ್ರುಲ್ಲಾ ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಇಬ್ಬರೂ ಸೇರಿದಂತೆ ಮೂವರು ಸ್ನೇಹಿತರು ಏಸಿ (AC) ಸರ್ವಿಸ್ ಕೆಲಸ ಮಾಡಿಕೊಂಡು, ಒಂದೇ ಕೊಠಡಿಯಲ್ಲಿ ವಾಸಿಸುತ್ತಿದ್ದರು.
ಪೊಲೀಸ್ ಮೂಲಗಳ ಪ್ರಕಾರ, ಕುನಾಲ್ ಕುಮಾರ್ ಮತ್ತು ಮೊಹಮ್ಮದ್ ನಸ್ರುಲ್ಲಾ ನಡುವೆ ಆಗಾಗ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತಿರುತ್ತಿದ್ದವು. ಇದೇ ವೈಷಮ್ಯ ಮಧ್ಯರಾತ್ರಿ ಮತ್ತೊಮ್ಮೆ ಭುಗಿಲೆದ್ದಿದ್ದು, ರಾತ್ರಿ ಸುಮಾರು 12.30ರ ಸುಮಾರಿಗೆ ಇವರಿಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಕೋಪಗೊಂಡ ಮೊಹಮ್ಮದ್ ನಸ್ರುಲ್ಲಾ, ಸುತ್ತಿಗೆಯನ್ನು ಬಳಸಿಕೊಂಡು ಕುನಾಲ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾನೆ. ತಲೆಯ ಭಾಗಕ್ಕೆ ಭಾರಿಯಾಗಿ ಹೊಡೆದ ಪರಿಣಾಮ ಕುನಾಲ್ ಕುಮಾರ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಆವಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆರೋಪಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಈ ಘಟನೆ ಸ್ನೇಹದ ಹೆಸರಿನಲ್ಲಿ ಒಂದೇ ರೂಮಿನಲ್ಲಿ ವಾಸಿಸುತ್ತಿದ್ದವರ ನಡುವೆ ಉಂಟಾದ ವೈಷಮ್ಯ ಎಷ್ಟು ಭೀಕರ ಪರಿಣಾಮಗಳಿಗೆ ಕಾರಣವಾಗಬಹುದು ಎಂಬುದಕ್ಕೆ ಉದಾಹರಣೆಯಾಗಿದೆ.