*ಮದುವೆಗೆ ಒಪ್ಪದ ನಾದಿನಿಯನ್ನೇ ಕಿಡ್ನಾಪ್ ಮಾಡಿದ!
*ಹೆಂಡತಿಯ ತಂಗಿಯನ್ನೇ ಪ್ರೇಮದ ಬಲೆಗೆ ಬೀಳಿಸಿದ್ದ ಭಾವ
*ಇಬ್ಬರ ಪ್ರೀತಿಗೆ ಪೋಷಕರ ತೀವ್ರ ವಿರೋಧ
ಬೆಂಗಳೂರು (ಜ. 25): ಮದುವೆ ಮಾಡಿಕೊಳ್ಳಲು ತನ್ನ 20 ವರ್ಷದ ನಾದಿನಿಯನ್ನು(ಪತ್ನಿ ತಂಗಿ) ಅಪಹರಿಸಿದ್ದ ಭಾವ ಹಾಗೂ ಆತನ ಇಬ್ಬರು ಸಂಬಂಧಿಕರನ್ನು ಕೊಡಿಗೇಹಳ್ಳಿ (Kodigehalli) ಠಾಣೆ ಪೊಲೀಸರು ಬಂಧಿಸಿದ್ದಾರೆ. ತುಮಕೂರು (Tumkur) ಜಿಲ್ಲೆ ಕುಣಿಗಲ್ ತಾಲೂಕಿನ ಹೆಬ್ಬೂರು ಹೋಬಳಿಯ ದೇವರಾಜ್, ಆತನ ಸಂಬಂಧಿಕರಾದ ನವೀನ್ ಹಾಗೂ ಕುಮಾರ್ ಬಂಧಿತರು. ಆರೋಪಿಗಳಿಂದ ಕಾರು ಜಪ್ತಿ ಮಾಡಲಾಗಿದೆ. ಅಪಹೃತಳನ್ನು ರಕ್ಷಿಸಿ ಆಕೆಯ ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೊಡಿಗೇಹಳ್ಳಿ ಸಮೀಪದ ಸಂಜೀವಿನಿ ನಗರದಿಂದ ಕೆಲಸ ಮುಗಿಸಿಕೊಂಡು ಮನೆಗೆ ಮರಳುವಾಗ ಶನಿವಾರ ತನ್ನ ನಾದಿನಿಯನ್ನು ದೇವರಾಜ್ ಅಪಹರಿಸಿದ್ದ. ಬಳಿಕ ಸಕಲೇಶಪುರಕ್ಕೆ ಕರೆದೊಯ್ದಿದ್ದ ಆತ, ಅಲ್ಲಿಂದ ಮರಳುವಾಗ ಅರಸಿಕೆರೆಯ ಗಡಸಿ ಸಮೀಪ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Chintamani Crime ಮನೆಯಿಂದ ಮಗನನ್ನು ಹೊರಹಾಕಲು ಕೇಸ್ ಹಾಕಿ ಗೆದ್ದ ತಂದೆ, ಸೇಡಿಗೆ ಸೇಡು!
ಪ್ರೇಮಕ್ಕೆ ಪೋಷಕರ ವಿರೋಧ: ಎಂಟು ವರ್ಷಗಳ ಹಿಂದೆ ತನ್ನೂರಿನ ನೆರೆ ಗ್ರಾಮದ ಸಂತ್ರಸ್ತೆಯ ಸೋದರಿ ಜತೆ ದೇವರಾಜ್ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹೆಬ್ಬೂರು ಹೋಬಳಿಯಲ್ಲಿ ಕೋಳಿ ಅಂಗಡಿಗಳಿಗೆ ಕೋಳಿ ಪೂರೈಸುವ ಕೆಲಸವನ್ನು ದೇವರಾಜ್ ಮಾಡುತ್ತಿದ್ದ. ಕೆಲ ತಿಂಗಳ ಹಿಂದೆ ನಾದಿನಿ ಜತೆ ಆತನಿಗೆ ಪ್ರೇಮಾಂಕುರವಾಗಿತ್ತು. ಕೊನೆಗೆ ಮದುವೆ ಮಾಡಿಕೊಳ್ಳಲು ಇಬ್ಬರು ಮುಂದಾಗಿದ್ದರು. ಆದರೆ, ಸಂತ್ರಸ್ತೆಯ ಪೋಷಕರು ಪ್ರೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಮನೆ ಬಿಟ್ಟು ಪರಾರಿ: ಹೀಗಿರುವಾಗ ಕೆಲ ತಿಂಗಳ ಹಿಂದೆ ಮನೆ ಬಿಟ್ಟು ನಾದಿನಿ ಮತ್ತು ಭಾವ ಓಡಿ ಹೋಗಿದ್ದರು. ಆಗ ಹೆಬ್ಬೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅಂತಿಮವಾಗಿ ಇಬ್ಬರನ್ನು ಪತ್ತೆ ಹಚ್ಚಿದ ಪೊಲೀಸರು, ರಾಜಿ ಸಂಧಾನ ಮೂಲಕ ಸಂತ್ರಸ್ತೆಗೆ ಮನೆಗೆ ಕಳುಹಿಸಿದ್ದರು. ಬಳಿಕ ನಿನ್ನ ಅಕ್ಕನ ಸಂಸಾರವನ್ನು ಏಕೆ ಹಾಳು ಮಾಡುತ್ತೀಯಾ. ನಿನ್ನಿಂದ ಇಬ್ಬರು ಮಕ್ಕಳು ಬೀದಿ ಪಾಲಾಗುತ್ತವೆ ಎಂದು ಆಕೆಗೆ ಪೋಷಕರು ಬುದ್ಧಿಮಾತು ಹೇಳಿದ್ದರು. ಈ ಮಾತಿಗೆ ಒಪ್ಪಿದ ಆಕೆ, ಭಾವನಿಂದ ದೂರವಾಗಲು ಯತ್ನಿಸಿದ್ದಳು. ಆಗ ಊರಿನಲ್ಲೇ ಇದ್ದರೆ ನಾದಿನಿಗೆ ಭಾವ ಕಾಟ ಕೊಡಬಹುದು ಎಂದು ಆಕೆಯ ಪೋಷಕರು, ಎರಡು ತಿಂಗಳ ಹಿಂದೆ ಕೊಡಿಗೇಹಳ್ಳಿ ಸಮೀಪದ ಸಂಜೀವಿನಿ ನಗರದಲ್ಲಿರುವ ಆಕೆಯ ದೊಡ್ಡಪ್ಪನ ಮನೆಗೆ ಕರೆತಂದು ಬಿಟ್ಟಿದ್ದರು.
ಇದನ್ನೂ ಓದಿ: West Bengal: ಪರ್ಮಿಷನ್ ಇಲ್ಲದೇ ಫೋನ್ ಖರೀದಿಸಿದ ಹೆಂಡತಿ ಕೊಲ್ಲಲು ಸುಪಾರಿ ಕೊಟ್ಟ ಗಂಡ!
ಇದರಿಂದ ಕೆರಳಿದ ದೇವರಾಜ್, ನಾದಿನಿ ಮನವೊಲಿಸಲು ಯತ್ನಿಸಿ ವಿಫಲವಾಗಿದ್ದ. ಮನೆಯಲ್ಲಿ ಕುಳಿತು ಬೇಸರವಾಗುತ್ತದೆ ಎಂದು ಸಂತ್ರಸ್ತೆ, ಹದಿನೈದು ದಿನಗಳ ಹಿಂದೆ ತನ್ನ ದೊಡ್ಡಪ್ಪ ಮನೆ ಸಮೀಪದ ರಾಯಲ್ ಮಾರ್ಟ್‌ನಲ್ಲಿ ಸೇಲ್ಸ್ ಗಲ್‌ರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಈ ಮಾಹಿತಿ ತಿಳಿದ ದೇವರಾಜ್, ನಾದಿನಿಯನ್ನು ಅಪಹರಿಸಿ ಮದುವೆಯಾಗಲು ಸಂಚು ರೂಪಿಸಿದ್ದ. ಈ ಕೃತ್ಯಕ್ಕೆ ಆತನ ಇಬ್ಬರ ಬಂಧುಗಳ ಸಾಥ್ ಸಿಕ್ಕಿದೆ.
ಅಂತೆಯೇ ಶನಿವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ನಾದಿನಿಯನ್ನು ಅಡ್ಡಗಟ್ಟಿದ್ದ ದೇವರಾಜ್, ಬಳಿಕ ಆಕೆಯನ್ನು ಬಲವಂತವಾಗಿ ಕಾರಿಗೆ ಹತ್ತಿಸಿಕೊಂಡು ಅಪಹರಿಸಿದ್ದ. ನಗರದಿಂದ ಸಕಲೇಶಪುರಕ್ಕೆ ರಾತ್ರಿ ಕರೆದೊಯ್ದು ಅಲ್ಲಿ ಸುತ್ತಾಡಿ ಭಾನುವಾರ ಸಂಜೆ ಊರಿಗೆ ಮರಳುತ್ತಿದ್ದರು. ಈ ಅಪಹರಣ ವಿಚಾರ ಗೊತ್ತಾಗಿ ಆಕೆ ಪೋಷಕರು, ಕೊಡಿಗೇಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಅರಸಿಕೆರೆಯ ಗಡಸಿ ಸಮೀಪ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಸಂತ್ರಸ್ತೆಯನ್ನು ಸುರಕ್ಷಿತವಾಗಿ ಆಕೆಯ ಕುಟುಂಬದವರಿಗೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.