ಇಂದಿನಿಂದ ಕೊರೋನಾ ಸೋಂಕಿತರ ಕೈಗೆ ಸೀಲ್‌..!

By Kannadaprabha News  |  First Published Apr 17, 2021, 7:07 AM IST

ಕೊರೋನಾ ಹರಡುವಿಕೆಗೆ ಕಡಿವಾಣ ಹಾಕಲು ಬಿಬಿಎಂಪಿ ಕ್ರಮ| ಸೋಂಕಿತರ ಸಾರ್ವಜನಿಕ ಓಡಾಟಕ್ಕೆ ಬ್ರೇಕ್‌| ಕೋವಿಡ್‌ ಸಲುವಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ| ಆ್ಯಂಬುಲೆನ್ಸ್‌ಗಳ ವ್ಯವಸ್ಥೆ, ಲಸಿಕೆ ಮತ್ತು ಸೋಂಕಿತ ಸಂಪರ್ಕಿತರ ಪತ್ತೆ ಹೆಚ್ಚಿಸಲು ಸೂಕ್ತ ಕ್ರಮ| 


ಬೆಂಗಳೂರು(ಏ.17): ಕೊರೋನಾ ಹರಡುವಿಕೆಗೆ ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿ, ಕೋವಿಡ್‌ ಸೋಂಕು ದೃಢಪಟ್ಟಿರುವವರ ಕೈಗಳಿಗೆ ಶನಿವಾರದಿಂದಲೇ ಅಳಿಸಲಾಗದ ಶಾಹಿಯಿಂದ ಕೋವಿಡ್‌ ದೃಢಪಟ್ಟಿದೆ ಎಂಬ ಮುದ್ರೆ(ಸೀಲ್‌)ಯನ್ನು ಹಾಕಲು ನಿರ್ಧರಿಸಿದೆ.

ಶುಕ್ರವಾರ ಪಾಲಿಕೆ ಮುಖ್ಯ ಆಯುಕ್ತ ಗೌರವ್‌ ಗುಪ್ತಾ, ಬಿಬಿಎಂಪಿ ಎಂಟು ವಲಯ ಮಟ್ಟದಲ್ಲಿ ಕೋವಿಡ್‌ ಸೋಂಕು ದೃಢಪಟ್ಟವರಿಗೆ ಸೀಲ್‌, ಹಾಸಿಗೆ ವ್ಯವಸ್ಥೆ ಕುರಿತು ವರ್ಚುಯಲ್‌ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್‌ ಸೋಂಕು ಉಲ್ಬಣಗೊಳ್ಳುತ್ತಿದೆ. ಆದ್ದರಿಂದ ಕೋವಿಡ್‌ ಸೋಂಕು ದೃಢಪಟ್ಟವರಿಗೆ ಶನಿವಾರ(ಏ.17) ಕೈಗಳಿಗೆ ಸೀಲ್‌ ಹಾಕುವ ಕಾರ್ಯ ಪ್ರಾರಂಭಿಸಬೇಕು. ಈ ಕುರಿತು ಎಲ್ಲಾ ವಲಯಗಳಲ್ಲಿಯೂ ಕೂಡಲೇ ಕ್ರಮ ಕೈಗೊಳ್ಳಬೇಕು. ಅದಕ್ಕೆ ಬೇಕಾದ ಶಾಹಿಯನ್ನು(ಇಂಕ್‌) ಎಲ್ಲಾ ವಲಯಗಳಿಗೂ ಕೂಡಲೇ ವ್ಯವಸ್ಥೆ ಮಾಡಬೇಕು ಎಂದು ಮುಖ್ಯ ಆರೋಗ್ಯಾಧಿಕಾರಿ ವಿಜೇಂದ್ರಗೆ ಸೂಚನೆ ನೀಡಿದರು.

Latest Videos

undefined

ಮುಖ್ಯವಾಗಿ ಲಕ್ಷಣ ರಹಿತ ಸೋಂಕು ಕಂಡು ಬಂದು (ಎ-ಸಿಮ್ಟಮ್ಯಾಟಿಕ್‌) ಮನೆಯಲ್ಲೇ ಐಸೋಲೇಟ್‌ ಆಗಿರುವವರು ಹೊರಗೆ ಸಂಚರಿಸದಂತೆ ಮುದ್ರೆ ಹಾಕಬೇಕು. ಒಂದು ವೇಳೆ ಮುದ್ರೆ ಹಾಕಿಸಿಕೊಂಡವರು ತಿರುಗಾಡುವುದನ್ನು ಕಂಡರೆ ಮಾರ್ಷಲ್‌ಗಳು, ಪೊಲೀಸರು, ಗೃಹರಕ್ಷಕರು, ಸಾರ್ವಜನಿಕರು ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

CM ಬಿಎಸ್‌ವೈಗೆ ಪಾಸಿಟೀವ್; ಕೊರೋನಾ ಸರ್ವ ಪಕ್ಷ ಸಭೆ ಮುಂದೂಡಿಕೆ!

ಕೋವಿಡ್‌ ಸೋಂಕು ದೃಢಪಟ್ಟು ಹೋಮ್‌ ಐಸೋಲೇಷನ್‌ನಲ್ಲಿದ್ದವರ ಮನೆಗೆ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರ ಮೇಲೆ ನಿಗಾವಹಿಸಬೇಕು. ನಗರದಲ್ಲಿ ಸದ್ಯ ಗುರುತಿಸಿರುವ ಕೋವಿಡ್‌ ಆರೈಕೆ ಕೇಂದ್ರಗಳನ್ನು ತ್ವರಿತವಾಗಿ ತೆರೆಯಬೇಕು. ಕೋವಿಡ್‌ ಸಲುವಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡು ಸೋಂಕು ನಿಯಂತ್ರಿಸಲು ಕ್ರಮ ವಹಿಸಬೇಕು. ಎಲ್ಲಾ ವಲಯಗಳಲ್ಲೂ ಕಂಟೈನ್ಮೆಂಟ್‌ ವಲಯ ಒಂದೇ ಮಾದರಿಯಲ್ಲಿರಬೇಕು. ಆ್ಯಂಬುಲೆನ್ಸ್‌ಗಳ ವ್ಯವಸ್ಥೆ, ಲಸಿಕೆ ಮತ್ತು ಸೋಂಕಿತ ಸಂಪರ್ಕಿತರ ಪತ್ತೆ ಹೆಚ್ಚಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಹಾಸಿಗೆ ಹಂಚಿಕೆ ವ್ಯವಸ್ಥೆಯನ್ನು ವಿಕೇಂದ್ರೀಕರಣಗೊಳಿಸಿದ್ದು, ಎಲ್ಲಿಯೂ ಹಾಸಿಗೆಗಳ ಕೊರತೆ ಕಂಡುಬರದಂತೆ ಕ್ರಮಕೈಗೊಳ್ಳಲಾಗಿದೆ. ಅಲ್ಲದೆ ಲ್ಯಾಬ್‌ಗಳಲ್ಲಿ ತ್ವರಿತವಾಗಿ ಪರೀಕ್ಷೆ ವರದಿ ಬರುವಂತೆ ಮಾಡಲಾಗಿದೆ. ಬೂತ್‌ ಮಟ್ಟದ ಅಧಿಕಾರಿಗಳನ್ನು ಸರಿಯಾಗಿ ಬಳಸಿಕೊಂಡು ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಿ ಕೋವಿಡ್‌ ಪರೀಕ್ಷೆ ಮಾಡಬೇಕೆಂದು ತಿಳಿಸಿದರು.
 

click me!