ಬೆಂಗಳೂರು ಟ್ರಾಫಿಕ್ ಪೊಲೀಸರು ಇನ್ನಷ್ಟು ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳನ್ನು ತಡೆಯಲು ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಬೆಂಗಳೂರು [ನ.28] : ಸಂಚಾರ ನಿಯಮ ಉಲ್ಲಂಘನೆ ತಡೆಗೆ ವಿನೂತನ ಪ್ರಯೋಗಕ್ಕೆ ಮುಂದಾಗಿರುವ ಸಂಚಾರ ಪೊಲೀಸರು ಕೆಲ ಜಂಕ್ಷನ್‌ಗಳಲ್ಲಿ ‘ಗೊಂಬೆ ಪೊಲೀಸ್’ ನಿಲ್ಲಿಸಲು ಮುಂದಾಗಿದ್ದಾರೆ.
ರಸ್ತೆಯಲ್ಲಿ ಸಂಚಾರ ಪೊಲೀಸರು ನಿಂತಿದ್ದರೆ, ದೂರದಿಂದಲೇ ಪೊಲೀಸರನ್ನು ಗಮನಿಸುವ ಸಾರ್ವಜನಿಕರು ನಿಯಮ ಪಾಲಿಸುತ್ತಾರೆ. ಒಂದು ವೇಳೆ ಪೊಲೀಸರು ಇಲ್ಲದಿದ್ದಲ್ಲಿ ಸಂಚಾಯ ನಿಯಮ ಉಲ್ಲಂಘಿಸುತ್ತಾರೆ. ಇಂತಹ ಪ್ರಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರಂತೆಯೇ ಕಾಣುವ ಗೊಂಬೆ ಪೊಲೀಸರನ್ನು ನಿಲ್ಲಿಸಲಿದ್ದಾರೆ.
ಬಟ್ಟೆಅಂಗಡಿಗಳಲ್ಲಿ ಬಟ್ಟೆಗಳ ಪ್ರದರ್ಶನಕ್ಕೆ ಗೊಂಬೆಗಳಿಗೆ ತೊಡಿಸಿರುವಂತೆ ಚರ್ಮ ಬಣ್ಣದ ಗೊಂಬೆಗಳು ಇದೀಗ ರಸ್ತೆ, ಜಂಕ್ಷನ್‌ಗಳಲ್ಲಿ ಕಾಣಿಸಲಿವೆ. ಈಗಾಗಲೇ ಚಿಕ್ಕಪೇಟೆ ವೃತ್ತದಲ್ಲಿ ಹೊಚ್ಚ ಹೊಸ ಗೊಂಬೆ ಪೊಲೀಸ್ ನಿಲ್ಲಿಸಲಾಗಿದೆ. ಗೊಂಬೆ ಹತ್ತಿರ ಹೋಗುವ ವಾಹನ ಸವಾರರು ಕುತೂಹಲದಿಂದ ನೋಡುತ್ತಿದ್ದಾರೆ. ದೂರದಿಂದ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಪೊಲೀಸರೇ ನಿಂತಿದ್ದಾರೆಂಬ ಭಯ ಆರಂಭವಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪ್ರತಿಯೊಬ್ಬ ವಾಹನ ಸವಾರ ಕೂಡ ಸಂಚಾರ ನಿಯಮ ಪಾಲಿಸುವುದು ಕಡ್ಡಾಯ. ಆದರೆ, ಬಹಳಷ್ಟು ಸವಾರರು ತಮ್ಮ ಕರ್ತವ್ಯ ಮರೆಯುತ್ತಾರೆ. ರಸ್ತೆಗಳಲ್ಲಿ ಪೊಲೀಸರು ಕಣ್ಣಿಗೆ ಕಾಣಿಸುತ್ತಿದ್ದಾರೆಂದರೆ ಮಾತ್ರ ನಿಯಮ ಪಾಲಿಸುತ್ತಾರೆ. ಇಲ್ಲದಿದ್ದರೆ ಬೇಕಾಬಿಟ್ಟಿಚಾಲನೆ ಮಾಡುತ್ತಾರೆ. ಅಂತಹವರ ಮೇಲೆ ನಿಗಾ ಇರಿಸಲು ಮತ್ತು ಅವರು ಕೂಡ ಸಂಚಾರ ನಿಯಮ ಪಾಲಿಸಲೆಂಬ ಉದ್ದೇಶದಿಂದ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಗೊಂಬೆಗಳನ್ನು ಅಳವಡಿಸಲಾಗುತ್ತಿದೆ ಎಂದು ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.