ಆನೆಗೊಂದಿ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ: ಡಿಸಿ

By Web Desk  |  First Published Nov 28, 2019, 8:07 AM IST

ಆನೆಗೊಂದಿಯಲ್ಲಿ 2020ರ ಜ. 9 ಮತ್ತು 10ರಂದು ನಡೆಯಲಿರುವ ಆನೆಗೊಂದಿ ಉತ್ಸವ| ಕಲೆ, ಸಾಹಿತ್ಯ, ಸಂಗೀತ, ನೃತ್ಯ ಕಾರ್ಯಕ್ರಮಗಳಿಗೆ ಆದ್ಯತೆ| ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದ ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ| ಪ್ರತಿಯೊಬ್ಬ ಕಲಾವಿದರಿಗೆ ಆನೆಗೊಂದಿ ಉತ್ಸವದ ಶೋಭಾಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು|


ಕೊಪ್ಪಳ(ನ.28): ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ 2020ರ ಜ. 9 ಮತ್ತು 10ರಂದು ನಡೆಯಲಿರುವ ‘ಆನೆಗೊಂದಿ ಉತ್ಸವ’ದಲ್ಲಿ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವ ಜತೆಗೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಉತ್ಸವ ಸಮಿತಿ ಅಧ್ಯಕ್ಷ ಪಿ. ಸುನೀಲ್‌ ಕುಮಾರ ಅವರು ಹೇಳಿದ್ದಾರೆ.

ಆನೆಗೊಂದಿ ಉತ್ಸವ ಆಚರಣೆ ಕುರಿತು ಉಪವಿಭಾಗಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. '

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಲೆ, ಸಾಹಿತ್ಯ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯ್ಕೆಗಾಗಿ ಪ್ರತ್ಯೇಕ ಸಮಿತಿಗಳನ್ನು ರಚಿಸಿ ಉತ್ತಮ ಪ್ರದರ್ಶನ ತೋರುವ ತಂಡಗಳಿಗೆ ಆಯಾ ಸಮಿತಿ ಮುಖ್ಯಸ್ಥರು ಆಯ್ಕೆ ಮಾಡುತ್ತಾರೆ. ಅಂತಹ ತಂಡಗಳು ಉತ್ಸವದಲ್ಲಿ ತಮ್ಮ ಪ್ರತಿಭೆ ತೋರಲಿವೆ. ಕುಸ್ತಿ, ಗುಂಡು ಎತ್ತುವಿಕೆ, ಶಿಲ್ಪಕಲಾ, ಜಲಕ್ರೀಡೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಸಾಹಸ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗುವುದು. ಉತ್ಸವದ ಸಂದರ್ಭದಲ್ಲಿ ಆನೆಗೊಂದಿ ಗ್ರಾಮದಲ್ಲಿನ ಉತ್ತಮ ರೀತಿಯಲ್ಲಿ ಶೃಂಗಾರಗೊಳಿಸಿದ ಮನೆಗಳಿಗೆ ಉತ್ಸವ ಸಮಿತಿ ವತಿಯಿಂದ ಬಹುಮಾನ ವಿತರಿಸಲಾಗುವುದು. ಉತ್ತಮ ಆಹಾರ ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಿದ್ದು, ಇದರಲ್ಲಿ ವಿಜಯನಗರ ಸಾಮ್ರಾಜ್ಯದ ವೈವಭವನ್ನು ನೆನಪಿಸುವ ಆಹಾರ ಪದಾರ್ಥಗಳಿಗೆ ಬಹುಮಾನ ನೀಡಲಾಗುವುದು ಎಂದರು.

ಪ್ರವಾಸೋದ್ಯಮ ಇಲಾಖೆ ವತಿಯಿಂದ ಆನೆಗೊಂದಿ ಇತಿಹಾಸದ ಕುರಿತು ಪ್ರಚಾರ ಫಲಕಗಳನ್ನು ಜಿಲ್ಲೆಯಾದ್ಯಂತ ಪ್ರದರ್ಶಿಸಲಾಗುವುದು. ಗಗನ ಮಹಲ್‌ ಹತ್ತಿರ ತೋಟಗಾರಿಕೆ ಇಲಾಖೆ ವತಿಯಿಂದ ಫಲ-ಪುಷ್ಪ ಪ್ರದರ್ಶನ ನಡೆಯಲಿದೆ. ಈ ಉತ್ಸವದಲ್ಲಿ ಜಿಲ್ಲೆಯ ಕಲಾವಿದರಿಗೆ ಕೆಲವೊಂದು ಮಾನದಂಡಗಳನ್ನು ಅನುಸರಿಸಿ ರಾಜ್ಯ, ರಾಷ್ಟ್ರ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತರಿಗೆ ಮತ್ತು ಹಲವಾರು ಪುಸ್ತಕಗಳನ್ನು ಪ್ರಕಟಿಸಿದ ಸಾಹಿತಿಗಳಿಗೆ ಆದ್ಯತೆ ನೀಡುವ ಕುರಿತು ಸಮಿತಿಗಳನ್ನು ರಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರತಿಯೊಬ್ಬ ಕಲಾವಿದರಿಗೆ ಆನೆಗೊಂದಿ ಉತ್ಸವದ ಶೋಭಾಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು. ಜಿಲ್ಲೆಯಲ್ಲಿರುವ ಕಲೆ, ಸಾಹಿತ್ಯ, ಸಂಗೀತ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಪ್ರಖ್ಯಾತಿ ಪಡೆದವರನ್ನು ಸಮಿತಿಗಳು ಗುರುತಿಸಿ, ಆಯಾ ಸಮಿತಿಗಳು ಅವರನ್ನು ಉತ್ಸವದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ. ರಂಗಣ್ಣನವರ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ಸಾಹಿತಿಗಳಾದ ಎಚ್‌.ಎಸ್‌. ಪಾಟೀಲ, ಅಲ್ಲಮಪ್ರಭು ಬೆಟ್ಟದೂರ, ಗಣ್ಯರಾದ ಬಸವರಾಜ ಆಕಳವಾಡಿ, ಸಿ.ಬಿ. ಜಡಿಯವರ ಸೇರಿದಂತೆ ಜಿಲ್ಲೆಯ ವಿವಿಧ ಸಾಹಿತಿಗಳು, ಕಲಾವಿದರು ಉಪಸ್ಥಿತರಿದ್ದರು.
 

click me!