ಬೆಂಗಳೂರು: ಶೋಕಿ ಜೀವನ, ಹಣಕ್ಕಾಗಿ ಸ್ನೇಹಿತನನ್ನೇ ಅಪಹರಿಸಿದ ವಿದ್ಯಾರ್ಥಿಗಳು! ಪೊಲೀಸರು ಟ್ರ್ಯಾಕ್ ಮಾಡಿದ್ದೇ ರೋಚಕ!

Published : Apr 12, 2026, 06:07 PM IST
car

ಸಾರಾಂಶ

ಬೆಂಗಳೂರಿನಲ್ಲಿ ಐಷಾರಾಮಿ ಜೀವನಕ್ಕಾಗಿ ಪ್ರತಿಷ್ಠಿತ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ತಮ್ಮ ಸ್ನೇಹಿತನನ್ನೇ ಅಪಹರಿಸಿದ್ದಾರೆ. ಹಣಕ್ಕಾಗಿ ಬೇಡಿಕೆಯಿಟ್ಟ ಆರೋಪಿಗಳನ್ನು, ಸಂತ್ರಸ್ತನ ಸ್ನೇಹಿತರು ನೀಡಿದ ದೂರಿನ ಮೇರೆಗೆ ಮಡಿವಾಳ ಪೊಲೀಸರು ಕೇವಲ ಎರಡು ಗಂಟೆಗಳಲ್ಲಿ ಬಂಧಿಸಿ ವಿದ್ಯಾರ್ಥಿಯನ್ನು ರಕ್ಷಿಸಿದ್ದಾರೆ. 

ಬೆಂಗಳೂರು ನಗರದಲ್ಲಿ ನಡೆದ ಈ ಘಟನೆ ಶಾಕ್ ಆಗಿದೆ. ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳೇ ತಮ್ಮ ಸ್ನೇಹಿತನನ್ನು ಅಪಹರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಐಷಾರಾಮಿ ಜೀವನಕ್ಕಾಗಿ ಹಣದ ಮೂಲ ಹುಡುಕುತ್ತಿದ್ದ ವಿದ್ಯಾರ್ಥಿಗಳು ಸ್ನೇಹಿತನನ್ನೇ ಗುರಿಯಾಗಿಸಿಕೊಂಡು ಕಿಡ್ನಾಪ್ ಮಾಡಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಸ್ನೇಹಿತನನ್ನೇ ಅಪಹರಿಸಿದ ವಿದ್ಯಾರ್ಥಿಗಳು

ಅದೇ ಕಾಲೇಜಿನಲ್ಲಿ ಓದುತ್ತಿದ್ದ ಒರಿಸ್ಸಾ ಮೂಲದ ವಿದ್ಯಾರ್ಥಿಯನ್ನು ನಾಲ್ವರು ವಿದ್ಯಾರ್ಥಿಗಳು ಪ್ಲ್ಯಾನ್ ಮಾಡಿ ಅಪಹರಿಸಿದ್ದಾರೆ. ಬಿಹಾರ, ಜೇಮ್‌ಶೆಡ್‌ಪುರ, ಕೇರಳ ಮತ್ತು ಬೆಂಗಳೂರಿನ ಮೂಲದ ವಿದ್ಯಾರ್ಥಿಗಳೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಸ್ನೇಹಿತನನ್ನೇ ಹಣದ ಮೂಲವನ್ನಾಗಿ ಬಳಸುವ ಉದ್ದೇಶದಿಂದ ಈ ಪ್ಲಾನ್ ರೂಪಿಸಿದ್ದರು.

ಹಾಸ್ಟೆಲ್‌ನಿಂದ ಕರೆಸಿ ಕಿಡ್ನಾಪ್

ಆರೋಪಿಗಳು ಮೊದಲು ಸ್ನೇಹಿತನನ್ನು ಹಾಸ್ಟೆಲ್‌ನಿಂದ ಹೊರಗೆ ಬರುವಂತೆ ಹೇಳಿ, ಕಾರಿನಲ್ಲಿ ಕೂರಿಸಿಕೊಂಡು ಅಪಹರಿಸಿದ್ದಾರೆ. ನಂತರ ತಮ್ಮಲ್ಲೊಬ್ಬರ ರೂಮ್‌ಗೆ ಕರೆದೊಯ್ದು ಅಲ್ಲಿ ಬಂಧಿಸಿಟ್ಟಿದ್ದಾರೆ. ಈ ವೇಳೆ ನಕಲಿ ಮೆಟಲ್ ಗನ್ ಮತ್ತು ಚಾಕುವನ್ನು ಬಳಸಿ ಬೆದರಿಕೆ ಹಾಕಲಾಗಿದೆ.

ಹಣಕ್ಕಾಗಿ ಬೆದರಿಕೆ, 50 ಸಾವಿರ ಡಿಮ್ಯಾಂಡ್

ಅಪಹರಣ ಮಾಡಿದ ಬಳಿಕ, ಆರೋಪಿಗಳು ಪೀಡಿತ ವಿದ್ಯಾರ್ಥಿಯ ಸ್ನೇಹಿತರಿಗೆ ಕರೆ ಮಾಡಿ ₹50,000 ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಈ ನಡುವೆ ಭಯಗೊಂಡ ಸ್ನೇಹಿತರು ಮೊದಲು ₹10,000 ಹಣವನ್ನು ಕಳುಹಿಸಿದ್ದಾರೆ. ನಂತರ ಆರೋಪಿಗಳು ಚಿಕ್ಕ ಚಿಕ್ಕ ಮೊತ್ತಗಳಲ್ಲಿ ಹಣ ಕಳುಹಿಸುವಂತೆ ಹೇಳುತ್ತಾ, ತಮ್ಮ ಮೊಬೈಲ್‌ಗಳನ್ನು ಆಕ್ಟಿವ್ ಆಗಿ ಇಟ್ಟುಕೊಂಡಿದ್ದರು.

ಪೊಲೀಸರ ಚಾತುರ್ಯಕ್ಕೆ ಸಿಕ್ಕಿಬಿದ್ದ ಆರೋಪಿಗಳು

ಅಪಹರಣಗೊಂಡ ವಿದ್ಯಾರ್ಥಿಯ ಸ್ನೇಹಿತರು ತಕ್ಷಣ 112 ತುರ್ತು ಸೇವೆಗೆ ಕರೆ ಮಾಡಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಮಡಿವಾಳ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ, ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡುವ ಮೂಲಕ ಆರೋಪಿಗಳು ಇರುವ ಜಾಗ ಪತ್ತೆ ಹಚ್ಚಿದ್ದಾರೆ.

ಆರೋಪಿಗಳು ಹಣ ಪಡೆಯಲು ಬಳಸುತ್ತಿದ್ದ ಮೊಬೈಲ್‌ಗಳನ್ನು ಆಕ್ಟಿವ್ ಇಟ್ಟುಕೊಂಡಿದ್ದರಿಂದ, ಪೊಲೀಸರಿಗೆ ಅವರ ಸ್ಥಳವನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಯಿತು. ಕೇವಲ ಎರಡು ಗಂಟೆಗಳೊಳಗೆ ಪೊಲೀಸರು ಆರೋಪಿಗಳನ್ನು ಬಂಧಿಸಿ, ಅಪಹರಣಗೊಂಡ ವಿದ್ಯಾರ್ಥಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಕಾರು ಮತ್ತು ನಕಲಿ ಆಯುಧ ವಶ

ಈ ಪ್ರಕರಣಕ್ಕೆ ಬಳಸಿದ ಕಾರು, ನಕಲಿ ಗನ್ ಹಾಗೂ ಚಾಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮಡಿವಾಳ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಸ್ನೇಹಿತರೇ ಅಪಹರಣ ಮಾಡಿ ಹಣ ಮಾಡಲು ಅಡ್ಡದಾರಿ ಹಿಡಿದಿರುವುದು ಗಂಭೀರ ಮಾತ್ರವಲ್ಲ ಸಮಾಜದಲ್ಲಿ ಆತಂಕ ಹುಟ್ಟಿಸಿದ್ದು, ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಐಷಾರಾಮಿ ಜೀವನದ ಮೋಹವು ಎಂತಹ ಅಪಾಯಗಳಿಗೆ ದಾರಿ ಮಾಡಿಕೊಡಬಹುದು ಎಂಬುದಕ್ಕೆ ಈ ಘಟನೆ ತೀವ್ರ ಉದಾಹರಣೆಯಾಗಿದೆ.

PREV
Read more Articles on
click me!

Recommended Stories

ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕಕ್ಕೆ ಅಗತ್ಯ ಕ್ರಮ: ಸಚಿವ ಶಿವಾನಂದ ಪಾಟೀಲ ಭರವಸೆ
ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲಿನ ಆಗಮನ ; ಎಷ್ಟು ಸಮಯ ಉಳಿತಾಯ?