ಸಿಲಿಕಾನ್ ಸಿಟಿ ಸಂಪೂರ್ಣವಾಗಿ ಖಾಲಿ ಖಾಲಿಯಾಗಿದೆ. ಎಲ್ಲವೂ ಬಂದ್ ಆಗಿದ್ದು ಜನರು ಮನೆಯಿಂದ ಹೊರ ಬರಲು ಬಯ ಪಡುತ್ತಿದ್ದಾರೆ.
ಬೆಂಗಳೂರು [ಮಾ.16]: ಕೊರೋನಾ ವೈರಸ್ ಭೀತಿ ಬೆಂಗಳೂರಿಗರನ್ನು ಬಹುವಾಗಿ ಕಾಡುತ್ತಿದ್ದು, ವಾರಾಂತ್ಯದಲ್ಲಿ ಸದಾ ಜನರಿಂದ ಗಿಜಿಗುಡುತ್ತಿದ್ದ ಸಿಲಿಕಾನ್ ಸಿಟಿ ಭಾನುವಾರ ನಿದ್ರೆಗೆ ಜಾರಿದಂತಿತ್ತು.
ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಈಗಾಗಲೇ ಮಾಲ್‌ಗಳು, ಸಿನಿಮಾ ಮಂದಿರಗಳು, ಜಾತ್ರೆ, ಉತ್ಸವ, ಮದುವೆ ಸೇರಿದಂತೆ ಪ್ರಮುಖ ಆಚರಣೆಗಳಿಗೆ ಒಂದು ವಾರ ನಿಷೇಧವೇರಿದ್ದು, ಇದು ನಗರದ ವಾಸಿಗಳ ಭೀತಿಯನ್ನು ದುಪ್ಪಟ್ಟುಗೊಳಿಸಿದೆ. ಇದರಿಂದಾಗಿ ಮನೆಗಳಿಂದ ಹೊರಬರಲು ಜನರ ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಾರಾಂತ್ಯ ಬರುತ್ತಿದ್ದಂತೆ ರಂಗೇರುತ್ತಿದ್ದ ಸಿಲಿಕಾನ್ ಸಿಟಿ ಈ ವಾರ ಕಳೆಗುಂದಿದ್ದು, ಶನಿವಾರದಂತೆ ಭಾನುವಾರವೂ ಬಿಕೋ ಎನ್ನುತ್ತಿತ್ತು.
ಕಬ್ಬನ್‌ಪಾರ್ಕ್, ಲಾಲ್‌ಬಾಗ್ ಭಣ ಭಣ:
ಹರಡುವ ಭೀತಿಯಿಂದ ಬೆಂಗಳೂರು ನಗರಕ್ಕೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಪ್ರಮುಖ ಉದ್ಯಾನಗಳಲ್ಲಿ ಜನ ದಟ್ಟಣೆಯಿಲ್ಲದೆ ಬಿಕೋ ಎನ್ನುತ್ತಿದ್ದವು.
ನಗರದ ಪ್ರಮುಖ ಉದ್ಯಾನವನಗಳಾದ ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್‌ನಲ್ಲಿ ವಾರಾಂತ್ಯದಲ್ಲಿ ಹೆಚ್ಚಾಗಿರುವುದು ಸಾಮಾನ್ಯವಾಗಿರುತ್ತದೆ. ಆದರೆ ಭಾನುವಾರ ಸಾರ್ವಜನಿಕರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಕಂಡು ಬಂದರು. ಬೆಳಗಿನ ವಾಯು ವಿಹಾರ ಸೇರಿದಂತೆ ದಿನವಿಡೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾಣಲಿಲ್ಲ. ವಾಯುವಿಹಾರಕ್ಕೆ ಬಂದವರು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಓಡಾಡುತ್ತಿದ್ದರು.
ಒಂದೇ ದಿನ 591 ಕೆಎಸ್ಸಾರ್ಟಿಸಿ ಬಸ್ ಸೇವೆ ಸ್ಥಗಿತ...
ಸಾಮಾನ್ಯವಾಗಿ ಶನಿವಾರ ಮತ್ತು ಭಾನುವಾರ ಪ್ರತಿ ದಿನ ಲಾಲ್‌ಬಾಗ್‌ಗೆ ಸುಮಾರು ಎಂಟು ಸಾವಿರ ಜನ ಬರುತ್ತಿದ್ದರು. ಆದರೆ, ಕೊರೋನಾ ಭೀತಿಯಿಂದಾಗಿ ಸುಮಾರು ಒಂದು ಸಾವಿರದಷ್ಟುಜನ ಮಾತ್ರ ಬಂದಿದ್ದರು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ (ಕಬ್ಬನ್ ಪಾರ್ಕ್) ಚಂದ್ರಶೇಖರ್ ತಿಳಿಸಿದರು.
ನಗರದ ಹೃದಯಭಾಗದ ಕಬ್ಬನ್ ಪಾರ್ಕ್ನಲ್ಲಿ ಪ್ರವಾಸಿಗರ ಸಂಖ್ಯೆ ಅತ್ಯಂತ ಕಡಿಮೆಯಿತ್ತು. ಉದ್ಯಾನವನಕ್ಕೆ ಬಂದಿದ್ದ ಪ್ರವಾಸಿಗರಿಗೆ ಜನರಿಗೆ ಐದಾರು ಜನ ಗುಂಪಾಗಿ ನಿಲ್ಲದಂತೆ ಸೂಚನೆ ನೀಡಲಾಗುತ್ತಿತ್ತು.ಪ್ರತಿ ಭಾನುವಾರ ಉದ್ಯಾನದಲ್ಲಿರುವ ಬ್ಯಾಂಡ್ ಸ್ಟ್ಯಾಂಡ್‌ನಲ್ಲಿ ಹಮ್ಮಿಕೊಳ್ಳುತ್ತಿದ್ದ ಸಂಗೀತ, ಭರತನಾಟ್ಯ ಸೇರಿ ಸಾಂಸ್ಕೃತಿ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಜೊತೆಗೆ, ಉದ್ಯಾನದಲ್ಲಿ ಹಮ್ಮಿಕೊಳ್ಳುತ್ತಿದ್ದ ಮ್ಯಾರಾಥಾನ್‌ಗಳನ್ನು ಮಾಚ್‌ರ್ ಅಂತ್ಯದವರೆವಿಗೂ ರದ್ದು ಮಾಡಿ ಆದೇಶಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ (ಕಬ್ಬನ್ ಪಾರ್ಕ್)ಉಪನಿರ್ದೇಶಕಿ ಜಿ.ಕುಸುಮಾ ತಿಳಿಸಿದರು.
ಮ್ಯೂಸಿಯಂ, ಬಾಲಭವನ ಕ್ಲೋಸ್
ಕಬ್ಬನ್ ಉದ್ಯಾನದ ಆವರಣದಲ್ಲಿರುವ ಬಾಲಭವನಕ್ಕೆ ಸರ್ಕಾರದ ಆದೇಶದಂತೆ ರಜೆ ಘೋಷಣೆ ಮಾಡಲಾಗಿದೆ. ಜೊತೆಗೆ, ಸರ್ ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಫಲಕವನ್ನು ಹಾಕಲಾಗಿದೆ. ಶೇಷಾದ್ರಿ ಐಯ್ಯರ್ ಕೇಂದ್ರ ಗ್ರಂಥಾಲಯಕ್ಕೆ ಬರುವ ಓದುಗರ ಸಂಖ್ಯೆ ಕಡಿಮೆಯಾಗಿತ್ತು.