ಉನ್ನತ ಮಟ್ಟದಲ್ಲೂ ಬೆಂಗಳೂರಿನ ಸಮಸ್ಯೆಗಳಿಗಿಲ್ಲ ಮುಕ್ತಿ

By Kannadaprabha NewsFirst Published Jan 17, 2021, 7:24 AM IST
Highlights

ನಗರದ ಸಮಸ್ಯೆಗಳ ಬಗ್ಗೆ ಸಮನ್ವಯ ಸಾಧಿಸಿ ಪರಿಹರಿಸಲು ರಾಜ್ಯದ ಮುಖ್ಯ ಕಾರ್ಯದರ್ಶಿ ಮಟ್ಟದಲ್ಲಿ ಸಮಿತಿ ರಚನೆ| ಪ್ರತಿ 15 ದಿನಕ್ಕೊಮ್ಮೆ ಸಮಿತಿ ಸಭೆ| ಪರಿಹಾರವಾಗದ ಕಸದ ಸಮಸ್ಯೆ, ಏರ್‌ಪೋರ್ಟ್‌ಗೆ ಪರಾರ‍ಯಯ ರಸ್ತೆ, ಒತ್ತುವರಿ ತೆರವು| 

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಜ.17): ಕಸ ಸಮಸ್ಯೆ ಪರಿಹಾರಕ್ಕೆ ವೇಸ್ಟ್‌ ಟು ಎನರ್ಜಿ ಘಟಕ ಸ್ಥಾಪನೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆ ಅಭಿವೃದ್ಧಿ ಸೇರಿದಂತೆ ರಾಜಧಾನಿ ಬೆಂಗಳೂರಿನ ರಸ್ತೆ ಗುಂಡಿ, ಬೀದಿ ದೀಪ, ಓಎಫ್‌ಸಿ ಕೇಬಲ್‌, ರಾಜಕಾಲುವೆ ಒತ್ತುವರಿ ತೆರವು ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ಉನ್ನತ ಅಧಿಕಾರಿಗಳ ಸಮನ್ವಯ ಸಮಿತಿ ಸಭೆಯಲ್ಲಿಯೂ ಶಾಶ್ವತ ಪರಿಹಾರ ಲಭಿಸದಂತಾಗಿದೆ.

ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿ ಹಾಗೂ ನಾಗರಿಕರ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ಬಿಬಿಎಂಪಿ, ಜಲಮಂಡಳಿ, ಬಿಡಿಎ, ಬೆಸ್ಕಾಂ, ಬಿಎಂಆರ್‌ಸಿಎಲ್‌ ಸೇರಿದಂತೆ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಪ್ರತಿ 15 ದಿನಕ್ಕೊಂದು ಸಮನ್ವಯ ಸಮಿತಿ ಸಭೆ ನಡೆಸುವಂತೆ ನಿರ್ದೇಶಿಸಲಾಗಿತ್ತು. ಅದರಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಭೆ ನಡೆಸಿ ಚರ್ಚೆ ಮಾಡಿ ಹಲವು ನಿರ್ದೇಶನಗಳನ್ನು ನೀಡಿದರೂ ಸಮಸ್ಯೆಗಳಿಗೆ ಮಾತ್ರ ಮುಕ್ತಿ ಸಿಗುತ್ತಿಲ್ಲ.

ಪ್ರತಿ ಸಮನ್ವಯ ಸಮಿತಿ ಸಭೆಯಲ್ಲಿ ಈ ಹಿಂದಿನ ಸಭೆಯಲ್ಲಿ ನೀಡಲಾದ ನಿರ್ದೇಶಗಳು ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಮುಖ್ಯ ಕಾರ್ಯದರ್ಶಿ ಸಂಬಂಧ ಪಟ್ಟಇಲಾಖೆಯ ಅಧಿಕಾರಿಗಳು ವಿವರಣೆ ಪಡೆಯುತ್ತಾರೆ. ಮುಂದಿನ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಕ್ತ ಸಲಹೆ ಮತ್ತು ನಿರ್ದೇಶನಗಳನ್ನು ನೀಡುತ್ತಾರೆ. ಆದರೂ ಬೆಂಗಳೂರಿನ ಅನೇಕ ನಾಗರಿಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ.

ರಾಜ್ಯಪಾಲರ ಅಂಕಿತ, ಜ.11ರಿಂದ ಬಿಬಿಎಂಪಿ ಹೊಸ ಆಡಳಿತ ವ್ಯವಸ್ಥೆ

ಘನತ್ಯಾಜ್ಯ ಸಮಸ್ಯೆ:

ಕಳೆದ ಒಂದು ವರ್ಷದಿಂದ ನಗರದ ತ್ಯಾಜ್ಯ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಕನ್ನಹಳ್ಳಿ ಬಳಿ ಸತಾರಾಂ ಸಂಸ್ಥೆಯ ಸಾವಿರ ಟನ್‌, ಮಾವಳ್ಳಿ ಪುರದಲ್ಲಿ ಫ್ರೀಂ ಗ್ರೀನ್‌ ಹಾಗೂ ಎನ್‌ಇಜಿ ಸಂಸ್ಥೆಯ ತಲಾ 500 ಟನ್‌ ಸಾಮರ್ಥ್ಯದ ವೇಸ್ಟ್‌ ಟು ಎನರ್ಜಿ ಘಟಕ ಸ್ಥಾಪನೆಯ ಕುರಿತು ಇನ್ನೂ ಆಡಳಿತಾತ್ಮಕ ಅನುಮತಿ, ಒಪ್ಪಂದ, ಬಂಡವಾಳ ಹೂಡಿಕೆ ಹಂತದಲ್ಲಿಯೇ ಇದೆ.

ವಿಮಾನ ನಿಲ್ದಾಣ ಪರ್ಯಾಯ ರಸ್ತೆ ಅಭಿವೃದ್ಧಿ:

ಕಳೆದ ಮೂರ್ನಾಲ್ಕು ವರ್ಷದಿಂದ ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆ ಮಾರ್ಗ ಅಭಿವೃದ್ಧಿಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿ ಅನುದಾನವನ್ನು ನೀಡಿದ್ದರು. ಆದರೆ, ಪರ್ಯಾಯ ರಸ್ತೆ ಮಾರ್ಗ ಅಭಿವೃದ್ಧಿ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ಪ್ರತಿ ಸಮನ್ವಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಆದರೂ ರಸ್ತೆ ಅಗಲೀಕರಣ, ಭೂ ಸ್ವಾಧೀನ ಪ್ರಕ್ರಿಯೆ ಬಾಕಿ ಇದೆ.
ಇನ್ನು ನೀಲಸಂದ್ರದ ಆನೆಪಾಳ್ಯ ಜಂಕ್ಷನ್‌ನಲ್ಲಿ ಟ್ರಾಫಿಕ್‌ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಜಂಕ್ಷನ್‌ ಮತ್ತು ರಸ್ತೆ ಅಗಲೀಕರಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೇ ಇಡೀ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ.

ವರ್ಷದಲ್ಲಿ ಕೇವಲ 253 ಒತ್ತುವರಿ ತೆರವು:

ಸುಮಾರು ಮೂರ್ನಾಲ್ಕು ವರ್ಷದ ಹಿಂದೆ ನಗರದ ರಾಜಕಾಲುವೆ ಒತ್ತುವರಿ ಗುರುತಿಸಲಾಗಿತ್ತು. ಈ 2,626 ಒತ್ತುವರಿ ಪ್ರಕರಣಗಳ ಪೈಕಿ ಕಳೆದ 2019ರ ಡಿಸೆಂಬರ್‌ ವರೆಗೆ 1,694 ತೆರವು ಮಾಡಲಾಗಿದೆ. ಇನ್ನೂ 932 ತೆರವು ಬಾಕಿ ಇವೆ ಎಂದು ಸಮನ್ವಯ ಸಮಿತಿಗೆ ವರದಿ ನೀಡಲಾಗಿತ್ತು. ಮಂಗಳವಾರ ನಡೆದ ಸಮನ್ವಯ ಸಮಿತಿಗೆ ಇನ್ನೂ 679 ತೆರವು ಬಾಕಿ ಇದೆ ಎಂದು ಮಾಹಿತಿ ನೀಡಲಾಗಿದೆ. ಈ ಮೂಲಕ ಕಳೆದ ಒಂದು ವರ್ಷದಲ್ಲಿ ಕೇವಲ 253 ಒತ್ತುವರಿ ಪ್ರಕರಣ ಇತ್ಯರ್ಥ ಮಾಡಲಾಗಿದೆ.

ರಾಜಕಾಲುವೆಗೆ ಅನಧಿಕೃತವಾಗಿ ಕೊಳಚೆ ನೀರು ಹರಿಸುವ ಕಟ್ಟಡಗಳಿಗೆ ವಿದ್ಯುತ್‌ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸುವ ಕುರಿತು ಪ್ರತಿ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಇನ್ನು ರಸ್ತೆ ಗುಂಡಿ, ಬೀದಿ ದೀಪ, ಪಾದಚಾರಿ ಮಾರ್ಗ, ಕಸದ ಬ್ಲಾಕ್‌ ಸ್ಪಾಟ್‌, ಮ್ಯಾನ್‌ ಹೋಲ್‌, ಓಎಫ್‌ಸಿ ಕೇಬಲ್‌, ರಸ್ತೆಗೆ ತ್ಯಾಜ್ಯ ನೀರು ಹರಿಯುವುದು ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಪ್ರತಿ ಸಭೆಯಲ್ಲಿಯೂ ಚರ್ಚೆ ಮಾಡಲಾಗುತ್ತಿದೆ. ಆದರೆ, ಸಮಸ್ಯೆಗಳಿಗೆ ಮಾತ್ರ ಮುಕ್ತಿ ಸಿಕ್ಕಿಲ್ಲ.
ಪ್ರತಿ ಸಮನ್ವಯ ಸಭೆಯಲ್ಲಿಯೂ ಸಮಸ್ಯೆಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಲಾಗುತ್ತದೆ. ಜತೆಗೆ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸಿ ಮುಖ್ಯ ಕಾರ್ಯದರ್ಶಿಗಳು ಸೂಕ್ತ ನಿರ್ದೇಶನ ನೀಡುತ್ತಾರæ. ಹಾಗಾಗಿ, ಕೆಲವು ವಿಷಯಗಳು ಸಭೆಯಿಂದ ಸಭೆಗೆ ಮುಂದುವರೆದುಕೊಂಡು ಬರುತ್ತವೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ. 
 

click me!