Bengaluru CID Inspector Robbery : ಎಂಥಾ ಸ್ಥಿತಿಗೆ ಬಂತು ಕರ್ನಾಟಕ, ಬೆಂಗಳೂರಲ್ಲಿ ಕಳ್ಳರಾದ ಪೊಲೀಸ್‌!

Published : Jun 19, 2026, 01:28 PM IST
Seemanth Kumar Singh

ಸಾರಾಂಶ

ಬೆಂಗಳೂರಿನಲ್ಲಿ ಸಿಐಡಿ ಇನ್ಸ್‌ಪೆಕ್ಟರ್ ಒಬ್ಬರು ಖಾಸಗಿ ವ್ಯಕ್ತಿಗಳೊಂದಿಗೆ ಸೇರಿ ಕೇರಳದ ಯುವಕರಿಂದ ₹20 ಲಕ್ಷ ದರೋಡೆ ಮಾಡಿದ್ದಾರೆ. ಈ ಕೃತ್ಯಕ್ಕೆ ಅಧಿಕೃತ ಸಿಐಡಿ ಜೀಪ್ ಬಳಸಲಾಗಿದ್ದು, ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪಿ ಇನ್ಸ್‌ಪೆಕ್ಟರ್ ತಲೆಮರೆಸಿಕೊಂಡಿದ್ದಾನೆ.

ಬೆಂಗಳೂರು: ಇದು ರಕ್ಷಕರೇ ಭಕ್ಷಕರಾದ ಕಥೆ! ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಘನವೆತ್ತ ಪೊಲೀಸರ ದೊಡ್ಡ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಖುದ್ದೂ ಸಿಐಡಿ (CID) ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಖಾಸಗಿ ವ್ಯಕ್ತಿಗಳ ಜೊತೆಗೂಡಿ ಕೇರಳ ಮೂಲದ ಯುವಕರಿಂದ ಬರೋಬ್ಬರಿ 20 ಲಕ್ಷ ರೂಪಾಯಿ ದರೋಡೆ ಮಾಡಿರುವ ಗಂಭೀರ ಪ್ರಕರಣ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತ (CP) ಸಿಮಂತ್ ಕುಮಾರ್ ಅವರು ಅಧಿಕೃತ ಹೇಳಿಕೆ ನೀಡಿದ್ದು, ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಪಾತ್ರ ಇರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ:

ಕೇರಳ ಮೂಲದ ಇಬ್ಬರು ಯುವಕರು ಮನಿ ಟ್ರೇಡಿಂಗ್ (ಹಣದ ವಹಿವಾಟು) ನಡೆಸುವ ಸಲುವಾಗಿ ₹20 ಲಕ್ಷ ನಗದನ್ನು ಇಟ್ಟುಕೊಂಡು ಮಡಿವಾಳದ ಖಾಸಗಿ ಹೋಟೆಲ್ ಒಂದರಲ್ಲಿ ತಂಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಉಪೇಂದ್ರ ಹಾಗೂ ಕುಮಾರ್ ಎಂಬ ಖಾಸಗಿ ವ್ಯಕ್ತಿಗಳು, ಸಿಐಡಿ ಇನ್ಸ್‌ಪೆಕ್ಟರ್ ಸೂಚನೆ ಮೇರೆಗೆ ಹೋಟೆಲ್‌ ಒಳಗಡೆ ಹೋಗಿದ್ದರು. ತಾವು ಪೊಲೀಸರು ಎಂದು ಹೇಳಿ ಐಡಿ ಕಾರ್ಡ್ ತೋರಿಸಿ ಯುವಕರಿಗೆ ಧಮ್ಕಿ ಹಾಕಿದ್ದಾರೆ. ನೀವು ಅಕ್ರಮವಾಗಿ ಮನಿ ಟ್ರೇಡಿಂಗ್ ಮಾಡಲು ಹಣ ತಂದಿದ್ದೀರಾ ಎಂದು ಬೆದರಿಸಿ, ಇಬ್ಬರನ್ನೂ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ನಂತರ ಅವರಿಂದ 20 ಲಕ್ಷ ರೂಪಾಯಿ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ದರೋಡೆಗೆ ಬಳಕೆಯಾಯ್ತು ಅಸಲಿ ಸಿಐಡಿ ಜೀಪ್!

ಈ ದರೋಡೆ ಕೃತ್ಯಕ್ಕೆ ಖದೀಮರು ಸರ್ಕಾರದ ಇಲಾಖಾ ವಾಹನವನ್ನು ಬಳಸಿರುವುದೇ ಈ ಪ್ರಕರಣದ ಟ್ವಿಸ್ಟ್. ಇಡೀ ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಿಐಡಿ ಇನ್ಸ್‌ಪೆಕ್ಟರ್‌ಗೆ ಸೇರಿದ ಅಸಲಿ ಪೊಲೀಸ್ ಜೀಪ್‌ನಲ್ಲೇ ಬಂದಿದ್ದ ಖಾಸಗಿ ವ್ಯಕ್ತಿಗಳು ಈ ಕೃತ್ಯ ಎಸಗಿದ್ದಾರೆ. ಹೋಟೆಲ್ ಬಳಿ ಜೀಪ್ ನಿಲ್ಲಿಸಿದ್ದರು. ಈ ವೇಳೆ ಇನ್ಸ್‌ಪೆಕ್ಟರ್ ಜೀಪಿನ ಒಳಗೇ ಕುಳಿತಿದ್ದು, ಪೊಲೀಸಪ್ಪನ ಆದೇಶದಂತೆ ಉಪೇಂದ್ರ ಮತ್ತು ಕುಮಾರ್ ಮಾತ್ರ ಹೋಟೆಲ್ ರೂಮ್‌ಗೆ ನುಗ್ಗಿ ಹಣ ದೋಚಿದ್ದರು. ಈ ವೇಳೆ ಹಣ ಕಳೆದುಕೊಂಡ ಕೇರಳದ ಯುವಕರು ಸಮಯಪ್ರಜ್ಞೆ ಬಳಸಿ ಇಡೀ ಘಟನೆಯನ್ನು ರಹಸ್ಯವಾಗಿ ವಿಡಿಯೋ ಮಾಡಿಕೊಂಡಿದ್ದರು.

ಟ್ವಿಸ್ಟ್ ಕೊಟ್ಟ ದೂರುದಾರರ ಹಿನ್ನೆಲೆ!

ಆರಂಭದಲ್ಲಿ ಮನಿ ಟ್ರೇಡಿಂಗ್ ಎಂದು ದೂರು ನೀಡಲಾಗಿದ್ದರೂ, ಪ್ರಾಥಮಿಕ ತನಿಖೆಯಲ್ಲಿ ಸಂತ್ರಸ್ತರು ಡ್ರಗ್ ಪೆಡ್ಲರ್‌ಗಳು (ಮಾದಕವಸ್ತು ಮಾರಾಟಗಾರರು) ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೇರಳದ ಯುವಕರು ತಮ್ಮ ಹೆದರಿಕೆಯಿಂದ ದೂರು ನೀಡಲ್ಲ ಎಂದು ಭಾವಿಸಿ ಇನ್ಸ್‌ಪೆಕ್ಟರ್ ಈ ದರೋಡೆಗೆ ಸ್ಕೆಚ್ ಹಾಕಿದ್ದರು ಎನ್ನಲಾಗಿದೆ. ಸದ್ಯ ದೂರುದಾರರ ಹಿನ್ನೆಲೆಯನ್ನು ಪೊಲೀಸರು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.

ಡಿಸಿಪಿ ಸಜೀತ ತನಿಖೆ ಮತ್ತು ಇನ್ಸ್‌ಪೆಕ್ಟರ್ ಎಸ್ಕೇಪ್:

ಹಣ ಕಳೆದುಕೊಂಡ ಯುವಕರು ತಕ್ಷಣವೇ ಮಡಿವಾಳ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ಪ್ರಕರಣದ ಗಂಬೀರತೆಯನ್ನಯ ಅರಿತ ಆಗ್ನೇಯ ವಿಭಾಗದ ಡಿಸಿಪಿ (DCP) ಮೊಹಮ್ಮದ್ ಸಜೀತ ಅವರ ಮಾರ್ಗದರ್ಶನದಲ್ಲಿ ಮಡಿವಾಳ ಪೊಲೀಸರು ತಕ್ಷಣವೇ ಕಾರ್ಯಾಚರಣೆಗೆ ಇಳಿದಿದ್ದಾರೆ. ತನಿಖೆಯ ವೇಳೆ ಪೊಲೀಸರಿಗೆ ಇನ್ಸ್‌ಪೆಕ್ಟರ್ ನಂಟು ಇರುವುದು ಪತ್ತೆಯಾಗಿದೆ. ಪೊಲೀಸರು ತಕ್ಷಣವೇ ಕೃತ್ಯಕ್ಕೆ ಬಳಸಿದ್ದ ಖಾಸಗಿ ವ್ಯಕ್ತಿಗಳಲ್ಲಿ ಒಬ್ಬನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಇನ್ಸ್‌ಪೆಕ್ಟರ್ ಹೆಸರು ಬಾಯಿಬಿಟ್ಟಿದ್ದಾನೆ. ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತ ಸಿಐಡಿ ಇನ್ಸ್‌ಪೆಕ್ಟರ್ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಸದ್ಯ ಪರಾರಿಯಾಗಿದ್ದಾನೆ.

ಕಮಿಷನರ್ ಹೇಳಿಕೆ ಮತ್ತು ರಿಕವರಿ:

ಘಟನೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಸಿಮಂತ್ ಕುಮಾರ್ , "ಮಡಿವಾಳ ಠಾಣೆಗೆ ಬಂದ ದೂರಿನ ಅನ್ವಯ ತನಿಖೆ ಕೈಗೊಳ್ಳಲಾಗಿದೆ. ದರೋಡೆಯಾಗಿದ್ದ ಸಂಪೂರ್ಣ ಹಣವನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ್ದ ಸಿಐಡಿ ಇಲಾಖೆಯ ಜೀಪ್ ಅನ್ನು ಸೀಜ್ ಮಾಡಲಾಗಿದೆ. ಇನ್ಸ್‌ಪೆಕ್ಟರ್ ಪಾತ್ರದ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು, ಸದ್ಯ ಅವರು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ವಿಶೇಷ ತಂಡಗಳಿಂದ ಹುಡುಕಾಟ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಕಾನೂನು ರಕ್ಷಕನೇ ಖದೀಮರ ಜೊತೆ ಸೇರಿ ದರೋಡೆ ನಡೆಸಿರುವ ಈ ಘಟನೆ ಬೆಂಗಳೂರು ಪೊಲೀಸ್ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

PREV
Read more Articles on
click me!

Recommended Stories

Tumkur ghost story: ತುಮಕೂರು ಹೈವೆಯಲ್ಲಿ ಮಟನ್ ಸಾಂಬಾರ್ ಕೇಳಿದ ಅಪರಿಚಿತ ಧ್ವನಿ, ನೀವು ಎಚ್ಚರ!
Chikkamagaluru: ನಡುರಸ್ತೆಯಲ್ಲೇ ತಲ್ವಾರ್‌ನಿಂದ ಕೇಕ್ ಕಟ್! ವೈರಲ್ ವಿಡಿಯೋ ಬೆನ್ನಲ್ಲೇ ಯುವಕನ ವಿರುದ್ಧ FIR