ಬೆಂಗಳೂರು: ದಾರಿಹೋಕನ ಮೊಬೈಲ್ ಕದ್ದವರ ಗಾಡಿ ಮೇಲೆ ಮೂಟೆ ಹಾಕಿದ ಕಾರ್ಮಿಕ, ತಪ್ಪಿಸಿಕೊಳ್ಳಲು ಓಡಿ ಸುಸ್ತಾದ ಕಳ್ಳ ಸಾವು!

Published : Jun 19, 2026, 12:20 PM IST
Bengaluru mobile snatcher dies

ಸಾರಾಂಶ

ಬೆಂಗಳೂರಿನ ಕಬ್ಬನ್‌ಪೇಟೆಯಲ್ಲಿ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಕಳ್ಳನಿಗೆ ಕಾರ್ಮಿಕನೊಬ್ಬ ಮೂಟೆ ಎಸೆದು ಅಡ್ಡಿಪಡಿಸಿದ್ದಾನೆ. ಇದರಿಂದ ಗಾಬರಿಗೊಂಡು ಓಡುವಾಗ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಳ್ಳ ಜುನೈದ್ ಹೃದಯಾಘಾತದಿಂದ ರಸ್ತೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಈ ವಿಲಕ್ಷಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೊಬೈಲ್ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ, ಕಬ್ಬನ್‌ಪೇಟೆಯಲ್ಲಿ ನಡೆದ ಮೊಬೈಲ್ ಸ್ನ್ಯಾಚಿಂಗ್ ಪ್ರಕರಣವೊಂದು ಇಡೀ ನಗರ ಬೆಚ್ಚಿಬೀಳುವಂತಹ ಕ್ಲೈಮ್ಯಾಕ್ಸ್‌ನೊಂದಿಗೆ ಅಂತ್ಯಗೊಂಡಿದೆ. ದಾರಿಯಲ್ಲಿ ನಡೆದು ಬರುತ್ತಿದ್ದವರ ಮೊಬೈಲ್ ಕಸಿದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದ ಕಳ್ಳನೊಬ್ಬ, ಕಾರ್ಮಿಕನೊಬ್ಬನ ಸಮಯಪ್ರಜ್ಞೆಯಿಂದಾಗಿ ಕಂಗಾಲಾಗಿ ಓಡುವಾಗ, ಹೃದಯಾಘಾತದಿಂದ ರಸ್ತೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.

ಜೂನ್ 15ರಂದು ಕಬ್ಬನ್‌ಪೇಟೆಯ 14ನೇ ಕ್ರಾಸ್‌ನಲ್ಲಿ ನಡೆದ ಈ ಇಡೀ ರೋಮಾಂಚನಕಾರಿ ದೃಶ್ಯ ಅಲ್ಲಿನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತಪಟ್ಟ ಮೊಬೈಲ್ ಕಳ್ಳನನ್ನು ಜುನೈದ್ ಎಂದು ಗುರುತಿಸಲಾಗಿದ್ದು, ಆತನ ಸಹಚರ ಅರ್ಬಾಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರ್ಮಿಕನ ‘ಮೂಟೆ’ ತಂತ್ರ!

ಕಳೆದ ಸೋಮವಾರ (ಜೂನ್ 15) ಕಬ್ಬನ್‌ಪೇಟೆಯ ರಸ್ತೆಯಲ್ಲಿ ಪಾದಚಾರಿಯೊಬ್ಬರು ಮೊಬೈಲ್‌ನಲ್ಲಿ ಮಾತನಾಡುತ್ತಾ ನಡೆದುಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿದ ಜುನೈದ್ ಮತ್ತು ಅರ್ಬಾಜ್ ಎಂಬ ಇಬ್ಬರು ಖದೀಮರು ದ್ವಿಚಕ್ರ ವಾಹನದಲ್ಲಿ (ಸ್ಕೂಟರ್) ಹಿಂಬಾಲಿಸಿಕೊಂಡು ಬಂದಿದ್ದಾರೆ. ಪಾದಚಾರಿಯ ಬಳಿ ಬರುತ್ತಿದ್ದಂತೆ ಕ್ಷಣಮಾತ್ರದಲ್ಲಿ ಅವರ ಕೈಲಿದ್ದ ಮೊಬೈಲ್ ಕಸಿದುಕೊಂಡು ಬೈಕ್ ವೇಗವಾಗಿ ಚಲಾಯಿಸಿ ಪರಾರಿಯಾಗಲು ಯತ್ನಿಸಿದ್ದಾರೆ.

ಈ ವೇಳೆ ಮೊಬೈಲ್ ಕಳೆದುಕೊಂಡ ವ್ಯಕ್ತಿ "ಮೊಬೈಲ್ ಕಳ್ಳರು... ಕಳ್ಳರು..." ಎಂದು ಜೋರಾಗಿ ಕಿರುಚಿಕೊಂಡಿದ್ದಾರೆ. ತಕ್ಷಣವೇ ಅದೇ ರಸ್ತೆಯಲ್ಲಿ ತಲೆಯ ಮೇಲೆ ಭಾರವಾದ ಮೂಟೆಯನ್ನು ಹೊತ್ತು ಸಾಗುತ್ತಿದ್ದ ಕಾರ್ಮಿಕನೊಬ್ಬ ಅಲರ್ಟ್ ಆಗಿದ್ದಾನೆ. ಕಳ್ಳರು ಬೈಕ್‌ನಲ್ಲಿ ತನ್ನ ಸನಿಹಕ್ಕೆ ಬರುತ್ತಿದ್ದಂತೆ, ಆ ಕಾರ್ಮಿಕ ತನ್ನ ಸಮಯಪ್ರಜ್ಞೆಯನ್ನು ಬಳಸಿ ತಲೆಯ ಮೇಲಿದ್ದ ದೊಡ್ಡ ಮೂಟೆಯನ್ನು ವೇಗವಾಗಿ ಬರುತ್ತಿದ್ದ ಸ್ಕೂಟರ್ ಮೇಲಕ್ಕೆ ಎಸೆದಿದ್ದಾನೆ!

ಬೈಕ್ ಬಿಟ್ಟು ಓಡಿದ ಖದೀಮರು:

ಮೂಟೆ ಬಿದ್ದ ರಭಸಕ್ಕೆ ನಿಯಂತ್ರಣ ತಪ್ಪಿದ ಕಳ್ಳರಿಬ್ಬರೂ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದಾರೆ. ಸಾರ್ವಜನಿಕರು ಹಾಗೂ ಆ ಕಾರ್ಮಿಕ ತಮ್ಮನ್ನು ಹಿಡಿಯಲು ಧಾವಿಸುತ್ತಿರುವುದನ್ನು ಕಂಡು ಗಾಬರಿಯಾದ ಕಳ್ಳರು, ತಾವು ಕದ್ದಿದ್ದ ಮೊಬೈಲ್ ಹಾಗೂ ತಮ್ಮ ಸ್ಕೂಟರ್ ಅನ್ನು ಘಟನಾ ಸ್ಥಳದಲ್ಲೇ ಬಿಟ್ಟು ಕಾಲ್ಕಿತ್ತಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಕಬ್ಬನ್‌ಪೇಟೆಯ ಗಲ್ಲಿಗಳಲ್ಲಿ ಓಡಲಾರಂಭಿಸಿದ್ದಾರೆ.

ಕ್ಷಣ ಮಾತ್ರದಲ್ಲಿ ಕಳ್ಳನ ಸಾವು!

ಟ್ವಿಸ್ಟ್ ಎಂದರೆ, ಸಾರ್ವಜನಿಕರ ಕೈಯಿಂದ ತಪ್ಪಿಸಿಕೊಂಡು ಸ್ವಲ್ಪ ದೂರ ಓಡಿ ಬಂದ ಕಳ್ಳ ಜುನೈದ್, ತೀವ್ರವಾಗಿ ಆಯಾಸಕ್ಕೊಳಗಾಗಿದ್ದಾನೆ. ಮೊದಲೇ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಆತನಿಗೆ ಜೋರಾಗಿ ಓಡಿದ ಕಾರಣ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ . ಕಬ್ಬನ್‌ಪೇಟೆಯ ರಸ್ತೆಯೊಂದರ ಫುಟ್‌ಪಾತ್ ಮೇಲೆ ಸುಧಾರಿಸಿಕೊಳ್ಳಲು ಕುಳಿತಿದ್ದಂತೆಯೇ ಜುನೈದ್ ಇದ್ದಕ್ಕಿದ್ದಂತೆ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾನೆ. ತೀವ್ರ ಹೃದಯಾಘಾತ ಸಂಭವಿಸಿದ ಕಾರಣ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ:

ಕಾರ್ಮಿಕ ತನ್ನ ತಲೆಯ ಮೇಲಿದ್ದ ಮೂಟೆಯನ್ನು ಕಳ್ಳರ ಬೈಕ್ ಮೇಲೆ ಎಸೆಯುವ ಮತ್ತು ಕಳ್ಳರು ಕೆಳಗೆ ಬಿದ್ದು ಓಡುವ ಇಡೀ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಳ್ಳತನವನ್ನು ತಡೆದ ಕಾರ್ಮಿಕನ ಧೈರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಹಲಸೂರು ಗೇಟ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತ ಜುನೈದ್‌ನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ, ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಮತ್ತೊಬ್ಬ ಆರೋಪಿ ಅರ್ಬಾಜ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಈ ವಿಲಕ್ಷಣ ಘಟನೆಗೆ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು (UDR) ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

PREV
Read more Articles on
click me!

Recommended Stories

ಗಣಪತಿ ಕಾರ್ಯಕ್ರಮದಲ್ಲಿ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್‌ಗೆ ಗಾಯ, ಆಸ್ಪತ್ರೆ ದಾಖಲು
ಮಡಿಯಾಲದಲ್ಲಿ ಶೀಘ್ರದಲ್ಲೇ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಉನ್ನತ ಶಿಕ್ಷಣ ಕೇಂದ್ರ ಕಾರ್ಯಾರಂಭ