ಜ.5ಕ್ಕೆ ಬೆಂಗಳೂರು ಚಿತ್ರ ಸಂತೆ : ರೈತರಿಗೆ ಸಮರ್ಪಣೆ

By Kannadaprabha News  |  First Published Jan 3, 2020, 8:55 AM IST

ಈ ಬಾರಿ ಚಿತ್ರಸಂತೆಗೆ ಮುಹೂರ್ತ ಫಿಕ್ಸ್ ಆಗಿದೆ. ಜನವರಿ 5 ರಂದು ಚಿತ್ರಸಂತೆ ನಡೆಯಲಿದ್ದು ಈ ಬಾರಿ ರೈತರಿಗೆ ಸಪರ್ಪಣೆ ಮಾಡಲಾಗುತ್ತಿದೆ. 


ಬೆಂಗಳೂರು (ಡಿ.03):  ಕಲಾವಿದರು ಹಾಗೂ ಕಲಾ ಪ್ರೇಮಿಗಳ ಬಹುನಿರೀಕ್ಷೆಯ ‘17ನೇ ಚಿತ್ರಸಂತೆ’ ಜ.5ರ ಭಾನುವಾರ ನಡೆಯಲಿದೆ. ಈ ವರ್ಷ ಚಿತ್ರಸಂತೆಯನ್ನು ‘ನೇಗಿಲ ಯೋಗಿ’ ರೈತರಿಗೆ ಸಮರ್ಪಿಸಲಾಗಿದ್ದು, ಗ್ರಾಮೀಣ ಸೊಗಡು ಕಂಗೊಳಿಸಲಿದೆ.

ಅಂದು ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ‘ಚಿತ್ರಸಂತೆ’ ಉದ್ಘಾಟಿಸಲಿದ್ದಾರೆ. ಗ್ರಾಮೀಣ ಜನರ ಬದುಕಿನ ಜೀವನಶೈಲಿಯನ್ನು ಪ್ರತಿಬಿಂಬಿಸುವ ಕರಕುಶಲ ವಸ್ತುಗಳ ‘ಗ್ರಾಮ ಸ್ವರಾಜ್ಯ’ ಕಲಾ ಪ್ರದರ್ಶನಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಚಾಲನೆ ನೀಡಲಿದ್ದಾರೆ. ಡಿ.4ರಂದು ಪ್ರಶಸ್ತಿ ಸಮಾರಂಭವನ್ನು ಡಿಸಿಎಂ ಡಾ.ಸಿ.ಎನ್‌.ಅಶ್ವತ್‌್ಥ ನಾರಾಯಣ ಹಾಗೂ ರುಮಾಲೆ ಚೆನ್ನಬಸವಯ್ಯರ ನೆನಪಿನಲ್ಲಿ 1968ರಿಂದ ಇಲ್ಲಿಯವರೆಗಿನ ‘ಬೆಂಗಳೂರು ಲ್ಯಾಂಡ್‌ಸ್ಕೇಪ್‌’ ಚಿತ್ರ ಪ್ರದರ್ಶನವನ್ನು ಖ್ಯಾತ ಕಲಾವಿದ ಪ್ರೊ.ಪ್ರಭಾಕರ್‌ ಕೊಲ್ಟೆಉದ್ಘಾಟಿಸಲಿದ್ದಾರೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್‌.ಶಂಕರ್‌ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

Tap to resize

Latest Videos

undefined

4 ಲಕ್ಷ ಜನ ಭೇಟಿ ನಿರೀಕ್ಷೆ:

ಚಿತ್ರಸಂತೆಯಲ್ಲಿ 40 ಅಂಗವಿಕಲರು ಸೇರಿದಂತೆ 1400ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. ಸುಮಾರು 15000ದಿಂದ 20000 ಕಲಾಕೃತಿಗಳು ಒಂದೇ ಕಡೆ ಪ್ರದರ್ಶನಗೊಳ್ಳುತ್ತವೆ. ಸುಮಾರು 400ಕ್ಕೂ ಹೆಚ್ಚು ಹೊರ ರಾಜ್ಯದ ಕಲಾವಿದರಿಗೆ ಉಚಿತ ವಸತಿ, ಊಟ ಕಲ್ಪಿಸಲಾಗುವುದು. ಚಿತ್ರಸಂತೆಗೆ ಸುಮಾರು 4 ಲಕ್ಷ ಜನರು ಭೇಟಿ ನೀಡುವ ಸಾಧ್ಯತೆ ಇದೆ. ಈ ವರ್ಷ ಉನ್ನತ ಶಿಕ್ಷಣ ಸಚಿವರು 30 ಲಕ್ಷ ರು. ಆರ್ಥಿಕ ಸಹಾಯ ನೀಡುವುದಾಗಿ ಹೇಳಿದ್ದಾರೆ ಎಂದರು.

ಸಂಚಾರಿ ಎಟಿಎಂ ಸೌಲಭ್ಯ:

ಭದ್ರತೆ ದೃಷ್ಟಿಯಿಂದ ಕುಮಾರ ಕೃಪಾ ರಸ್ತೆ, ಕ್ರೆಸೆಂಟ್‌ ರಸ್ತೆ, ಗಾಂಧಿಭವನ ರಸ್ತೆಗಳಲ್ಲಿ ಸಿಸಿಟಿವಿ ಅಳವಡಿಸಲಾಗುವುದು. ಜತೆಗೆ ತುರ್ತು ಚಿಕಿತ್ಸಾ ಘಟಕಗಳು ಸಹ ಕಾರ್ಯನಿರ್ವಹಿಸಲಿವೆ. ಕಲಾಕೃತಿಗಳನ್ನು ಖರೀದಿಸುವವರಿಗೆ ಸಹಾಯವಾಗಲು ಪರಿಷತ್ತಿನ ಆವರಣದ ಒಳಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಎರಡು ಎಟಿಎಂಗಳು, ಕೆನರಾ ಬ್ಯಾಂಕಿನ ಸಂಚಾರಿ ಎಟಿಎಂಗಳು ಇರಲಿವೆ. ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ನ ವ್ಯವಸ್ಥೆ ಇರುತ್ತದೆ ಎಂದು ಮಾಹಿತಿ ನೀಡಿದರು.

100 ರು.ಗಳಿಂದ ಆರಂಭ:

ಕಲೆಯ ಬೆಳವಣಿಗೆ ಕುರಿತಂತೆ ಚರ್ಚೆ, ಸಂವಾದ, ಕಾರ್ಯಾಗಾರ ನಡೆಯಲಿವೆ. ಯಾವುದೇ ಮಧ್ಯವರ್ತಿಗಳಿಲ್ಲದೆ ಕಲಾವಿದರು ತಮ್ಮ ಕಲಾಕೃತಿಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದು. ಚಿತ್ರಸಂತೆಯಲ್ಲಿ 100 ರು.ಗಳಿಂದ ಲಕ್ಷದವರೆಗಿನ ಕಲಾಕೃತಿಗಳು ದೊರೆಯುತ್ತವೆ. ಪರಿಷತ್ತು ಇಲ್ಲಿ ಮಾರಾಟವಾಗುವ ಕಲಾಕೃತಿಗಳಿಂದ ಯಾವುದೇ ಕಮಿಷನ್‌ ಪಡೆಯುವುದಿಲ್ಲ. ನೋಂದಣಿ ಶುಲ್ಕ ಹೊರತುಪಡಿಸಿ ಇನ್ಯಾವುದೇ ಶುಲ್ಕವನ್ನು ಕಲಾವಿದರಿಗೆ ವಿಧಿಸಿಲ್ಲ ಎಂದರು.

ಮೋದಿ ಆಗಮನ ಹಿನ್ನೆಲೆ : ಬೆಂಗಳೂರಿನ ಈ ರಸ್ತೆಗಳ ಸಂಚಾರ ಬಂದ್...

ಚಿತ್ರಸಂತೆಗೆ ಪೊಲೀಸ್‌, ಬಿಬಿಎಂಪಿ, ನಗರ ಸಾರಿಗೆ, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆಗಳು ಸಹಕಾರ ನೀಡಿವೆ. ಕುಮಾರಕೃಪಾ ರಸ್ತೆ, ಕ್ರೆಸೆಂಟ್‌ ರಸ್ತೆಯ ಸುತ್ತಮುತ್ತ ವಾಸಿಸುವ ನಾಗರಿಕರ ವಾಹನ ಸಂಚಾರಕ್ಕಾಗಿ ಅವರಿಗೆ ವಿಶೇಷ ಪಾಸ್‌ ವ್ಯವಸ್ಥೆ ಮಾಡಲಾಗಿದೆ. ವಿವಿಧೆಡೆ ಸಸ್ಯಾಹಾರಿ ಆಹಾರ ಮಳಿಗೆ ತೆರೆಯಲು ಸ್ಥಳಾವಕಾಶ ನೀಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಖಜಾಂಚಿ ಬೆಳ್ಳಿಯಪ್ಪ, ತೇಜೇಂದ್ರ ಸಿಂಗ್‌ ಭವಾನಿ, ಪ್ರೊ.ಕಮಲಾಕ್ಷಿ, ಚಿತ್ರಸಂತೆ ಸಮಿತಿ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಐವರಿಗೆ ಪ್ರಶಸ್ತಿ

ಪರಿಷತ್ತಿನ ಸ್ಥಾಪಕ ಪ್ರಧಾನ ಕಾರ್ಯದರ್ಶಿಗಳಾದ ‘ಪ್ರೊ.ಎಂ.ಎಸ್‌.ನಂಜುಂಡರಾವ್‌ ಪ್ರಶಸ್ತಿ’ಗೆ ಹಿರಿಯ ಕಲಾವಿದ ಆರ್‌.ಬಿ.ಭಾಸ್ಕರನ್‌ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ 1 ಲಕ್ಷ ರು. ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ವಾರ್ಷಿಕ ‘ಚಿತ್ರಕಲಾ ಸಮ್ಮಾನ್‌’ ಪ್ರಶಸ್ತಿಗೆ ನಾಲ್ವರು ಕಲಾವಿದರನ್ನು ಪರಿಗಣಿಸಲಾಗಿದೆ. ‘ಎಚ್‌.ಕೆ.ಕೇಜ್ರಿವಾಲ್‌ ಪ್ರಶಸ್ತಿಗೆ’ ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್‌.ಎನ್‌.ಸುರೇಶ್‌, ‘ಎಂ.ಆರ್ಯಮೂರ್ತಿ’ ಪ್ರಶಸ್ತಿ ಎಸ್‌.ಕೃಷ್ಣಪ್ಪ, ‘ಡಿ.ದೇವರಾಜ ಅರಸು ಪ್ರಶಸ್ತಿ’ಗೆ ಗಣೇಶ್‌ ಸೋಮಯಾಜಿ ಮತ್ತು ‘ವೈ.ಸುಬ್ರಮಣ್ಯರಾಜು ಪ್ರಶಸ್ತಿ’ಗೆ ವಿಜಯ ಹಾಗರಗುಂಡಗಿ ಭಾಜನರಾಗಿದ್ದಾರೆ. ಈ ಪ್ರಶಸ್ತಿಯು 50 ಸಾವಿರ ರು. ನಗದು, ಪ್ರಶಸ್ತಿ ಫಲಕವನ್ನು ಹೊಂದಿದೆ ಎಂದು ಶಂಕರ್‌ ತಿಳಿಸಿದರು.

ಸಮಯ: ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು

ಎಲ್ಲಿಲ್ಲಿ ವಾಹನ ನಿಲುಗಡೆ ವ್ಯವಸ್ಥೆ: ಭಾರತ ಸೇವಾದಳದ ಆವರಣ, ಕ್ರೆಸೆಂಟ್‌ ಮತ್ತು ರೇಸ್‌ಕೋರ್ಸ್‌ ರಸ್ತೆ

click me!