ಅನ್ನಭಾಗ್ಯ, ಹಮಾಲಿ ಕಾರ್ಮಿಕರ ಕೂಲಿ ಹೆಚ್ಚಳ, ಕೆಲಸದ ಭದ್ರತೆ, ಸಾಮಾಜಿಕ ಭದ್ರತೆ ಮತ್ತು ನೇರ ಸಂಬಳ ಪಾವತಿಗೆ ಒತ್ತಾಯಿಸಿ ಫೆ.15ರಂದು ಬೆಳಗ್ಗೆ 11ಕ್ಕೆ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷ ವರದ ರಾಜೇಂದ್ರ ಹೇಳಿದರು.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ
ದಾವಣಗೆರೆ (ಫೆ.10): ಅನ್ನಭಾಗ್ಯ, ಹಮಾಲಿ ಕಾರ್ಮಿಕರ ಕೂಲಿ ಹೆಚ್ಚಳ, ಕೆಲಸದ ಭದ್ರತೆ, ಸಾಮಾಜಿಕ ಭದ್ರತೆ ಮತ್ತು ನೇರ ಸಂಬಳ ಪಾವತಿಗೆ ಒತ್ತಾಯಿಸಿ ಫೆ.15ರಂದು ಬೆಳಗ್ಗೆ 11ಕ್ಕೆ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷ ವರದ ರಾಜೇಂದ್ರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯಾದ್ಯಂತ ಕೆಲಸ ನಿಲ್ಲಿಸಿ ಪ್ರತಿಭಟನೆ ನಡೆಸಲಾಗುವುದು.
2018 ರಿಂದ ಕೂಲಿ ಹೆಚ್ಚಳ ಮಾಡದಿರುವ ಸರ್ಕಾರದ ವಿರೋಧಿ ನೀತಿ ಖಂಡಿಸಿ ಅನ್ನಭಾಗ್ಯ ಹಮಾಲಿ ಕಾರ್ಮಿಕರನ್ನು ನೇರಪಾವತಿ ವ್ಯವಸ್ಥೆಯಡಿ ತರಬೇಕೆಂದು ಒತ್ತಾಯಿಸಿ ಫೆ 15 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ರಾಜ್ಯದಲ್ಲಿ ಸುಮಾರು 9 ಸಾವಿರ ಕಾರ್ಮಿಕರು 320 ಗೋದಾಮುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು.
ಗ್ರಾಮಾಂತರ ಸಾಗಾಣಿಕೆ ಆಹಾರ ಧಾನ್ಯಗಳ ಗೋದಾಮಿನ ಲಾಟ್‌ನಿಂದ ಸ್ಕೇಲ್‌ಗೆ, ಸ್ಕೇಲ್‌ನಿಂದ ಲಾರಿಗೆ ಲಾರಿಯಿಂದ ನ್ಯಾಯಬೆಲೆ ಅಂಗಡಿಗೆ ಹೋಗಿ ಅನ್ ಲೋಡಿಂಗ್ ಮಾಡುವ ಮೂರು ಕೆಲಸಕ್ಕೆ ಈಗ ಕ್ವಿಂಟಾಲ್‌ಗೆ ಕನಿಷ್ಠ 36ರೂ ನಿಗದಿ ಮಾಡಬೇಕು. ಅನ್ನಭಾನ್ಯ ಹಮಾಲಿ ಕಾರ್ಮಿಕರಿಗೆ ಆಹಾರ ಇಲಾಖೆಯಿಂದಲೇ ನೇರವಾಗಿ ಸಂಬಳ ಪಾವತಿಯಾಗುವಂತೆ ಕಾರ್ಮಿಕರನ್ನು ನೇರಪಾವತಿ ವ್ಯವಸ್ಥೆಯ ಅಡಿಯಲ್ಲಿ ತರಬೇಕು. ಸಾರ್ವತ್ರಿಕ ರಜಾ ದಿನ, ರಾಷ್ಟ್ರೀಯ ಹಬ್ಬ, ನಾಡಿನ ಹಬ್ಬಗಳ ದಿನಗಳಲ್ಲಿ ಕೆಲಸ ಮಾಡಿಸುವ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡಬೇಕು.
4 ವರ್ಷ ಕಳೆದರೂ ಸಿಗದ ನೆರೆ ಪರಿಹಾರ: ತಾಲೂಕು ಕಚೇರಿಯಲ್ಲಿ ವಿಷ ಕುಡಿಯಲು ಮುಂದಾದ ನೆರೆ ನಿರಾಶ್ರಿತರು
ತುಟ್ಟಿ ಭತ್ಯೆಗೆ ಅನುಗುಣವಾಗಿ ಪ್ರತಿವರ್ಷ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಪ್ರತಿವರ್ಷ ಕೂಲಿದರ ಹೆಚ್ಚಿಸಬೇಕು, ಇ.ಎಸ್.ಐ ಮತ್ತು ಪಿ.ಎಫ್ ವಂತಿಗೆಯನ್ನು ಗುತ್ತಿಗೆದಾರರು ಪಾವತಿಸಲು ಸೂಕ್ತಕ್ರಮ ವಹಿಸಬೇಕು. ಆಹಾರ ಇಲಾಖೆಯಿಂದಲೇ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಬೇಕೆಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ಸುದ್ದಿಗೋಷ್ಟಿಯಲ್ಲಿ ಸತೀಶ್ ಅರವಿಂದ್, ಹಳದಪ್ಪ, ರಮೇಶ್, ಅಕ್ಬರ್, ಆದಿಲ್ ಖಾನ್ ಇದ್ದರು.