ಬೆಂಗಳೂರು ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ರಸ್ತೆಯಲ್ಲಿ ಅಗ್ನಿ ಅವಘಡ: ನಡುರಸ್ತೆಯಲ್ಲೇ ಭಸ್ಮವಾದ ಕಾರು

Published : Dec 15, 2025, 03:43 PM IST
Bengaluru Car Fire Accident

ಸಾರಾಂಶ

ಬೆಂಗಳೂರಿನ ವಿಜಯನಗರ ಮುಖ್ಯ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದು ಏಕಾಏಕಿ ಹೊತ್ತಿ ಉರಿದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಬರುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಗೆ ತಾಂತ್ರಿಕ ದೋಷ ಕಾರಣವಿರಬಹುದೆಂದು ಶಂಕಿಸಲಾಗಿದೆ.

ಬೆಂಗಳೂರು (ಡಿ.15): ಬೆಂಗಳೂರಿನ ವಿಜಯನಗರದ ಮುಖ್ಯ ರಸ್ತೆಯಲ್ಲಿ ಇಂದು ಮಧ್ಯಾಹ್ನ ಏಕಾಏಕಿ ಕಾರೊಂದು ಹೊತ್ತಿ ಉರಿದಿದ್ದು, ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಈ ಘಟನೆ ವಿಜಯನಗರದ ಮುಖ್ಯರಸ್ತೆಯಲ್ಲಿರುವ ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ಸಮೀಪ ನಡೆದಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಒಂದು ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣ ಮಾತ್ರದಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಕಾರನ್ನು ಆವರಿಸಿದ್ದು, ಕಾರು ಧಗಧಗನೆ ಉರಿಯಲು ಶುರು ಮಾಡಿದೆ. ನಡುರಸ್ತೆಯಲ್ಲೇ ಬೆಂಕಿ ಹೊತ್ತಿಕೊಂಡ ಪರಿಣಾಮ ದಟ್ಟ ಹೊಗೆ ಆವರಿಸಿ ಸುತ್ತಮುತ್ತಲಿದ್ದ ವಾಹನ ಸವಾರರು ಮತ್ತು ಸ್ಥಳೀಯರು ಭೀತಿಗೊಳಗಾಗಿದ್ದರು.

ಅಗ್ನಿಶಾಮಕ ಠಾಣೆ ಬರೋಹೊತ್ತಿಗೆ ಕಾರು ಭಸ್ಮ:

ಕಾರು ಉರಿಯುತ್ತಿದ್ದ ದೃಶ್ಯ ಕಂಡ ಕೂಡಲೇ ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ತಕ್ಷಣವೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರಿಗೆ ತಗುಲಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಅಷ್ಟರಲ್ಲಾಗಲೇ ಕಾರು ಬಹುತೇಕ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಈ ಘಟನೆಯಿಂದಾಗಿ ವಿಜಯನಗರ ಮುಖ್ಯರಸ್ತೆಯಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ, ಆದರೆ ತಾಂತ್ರಿಕ ದೋಷ ಅಥವಾ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ಪೊಲೀಸರಿಂದ ತನಿಖೆ

ಘಟನಾ ಸ್ಥಳಕ್ಕೆ ವಿಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರು ಯಾರಿಗೆ ಸೇರಿದ್ದು, ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಾರು ಸುಟ್ಟು ಕರಕಲಾಗಿದ್ದರೂ, ಯಾವುದೇ ಪ್ರಾಣಹಾನಿ ಸಂಭವಿಸದಿರುವುದು ನೆಮ್ಮದಿಯ ಸಂಗತಿಯಾಗಿದೆ.

PREV
Read more Articles on
click me!

Recommended Stories

ಬೆಂಗಳೂರು ಹೋಟೆಲ್‌ನಲ್ಲಿ ಭರ್ಜರಿ ಪಾರ್ಟಿ, ಪೊಲೀಸ್ ಬಂದಾಕ್ಷಣ ಬಾಲ್ಕನಿಯಿಂದ ಜಿಗಿದ ಯುವತಿ!
ದುಬೈನಲ್ಲಿ ಕುಳಿತು ಕರಾವಳಿಯಲ್ಲಿ ಕೋಮು ಭಾವನೆ ಕೆರಳಿಸುವ ಪೋಸ್ಟ್ ಹಾಕುತ್ತಿದ್ದವನ ಬಂಧಿಸಿದ ಮಂಗಳೂರು ಪೊಲೀಸರು