ಬೆಂಗಳೂರು ಹೋಟೆಲ್‌ನಲ್ಲಿ ಭರ್ಜರಿ ಪಾರ್ಟಿ, ಪೊಲೀಸ್ ಬಂದಾಕ್ಷಣ ಬಾಲ್ಕನಿಯಿಂದ ಜಿಗಿದ ಯುವತಿ!

Published : Dec 15, 2025, 03:23 PM IST
Bengaluru Hotel Party Girl

ಸಾರಾಂಶ

ಬೆಂಗಳೂರಿನಲ್ಲಿ ಪೊಲೀಸ್ ಕಿರುಕುಳಕ್ಕೆ ಹೆದರಿ ಹೋಟೆಲ್ ಬಾಲ್ಕನಿಯಿಂದ ಇಳಿಯಲು ಯತ್ನಿಸಿದ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ಘಟನೆಯಲ್ಲಿ ತಮ್ಮ ಲೋಪ ಮುಚ್ಚಿಕೊಳ್ಳಲು ಪೊಲೀಸರು ಹೋಟೆಲ್ ಮಾಲೀಕರ ಮೇಲೆ ನಿರ್ಲಕ್ಷ್ಯದ ಆರೋಪ ಹೊರಿಸಿ ಎಫ್‌ಐಆರ್ ದಾಖಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರು (ಡಿ.14): ಪೊಲೀಸರ ಕಿರುಕುಳಕ್ಕೆ ಹೆದರಿ ಯುವತಿಯೊಬ್ಬಳು ಹೋಟೆಲ್‌ನ ಬಾಲ್ಕನಿಯಿಂದ ಪೈಪ್ ಮೂಲಕ ಇಳಿಯಲು ಯತ್ನಿಸಿ ಗಂಭೀರ ಗಾಯಗೊಂಡ ಪ್ರಕರಣವು ನಗರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆದರೆ, ಘಟನೆಯಲ್ಲಿ ಪೊಲೀಸರ ಪಾತ್ರದ ಕುರಿತು ಅನುಮಾನಗಳು ವ್ಯಕ್ತವಾಗುತ್ತಿರುವಾಗಲೇ, ಹೆಚ್‌ಎಎಲ್ ಪೊಲೀಸರು ತಮ್ಮ ಲೋಪ ಮುಚ್ಚಿಹಾಕಲು ಹೋಟೆಲ್ ಮಾಲೀಕರ ಮೇಲೆ ನಿರ್ಲಕ್ಷ್ಯದ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ.

ಕಳೆದ ಶನಿವಾರ ತಡರಾತ್ರಿ ಬ್ರೂಕ್‌ಫೀಲ್ಡ್‌ನ 'ಸೀ ಎಸ್ಟಾ ಲಾಡ್ಜ್'ನಲ್ಲಿ ಈ ಘಟನೆ ನಡೆದಿದೆ. ಸುಮಾರು ಎಂಟು ಮಂದಿ ಸ್ನೇಹಿತರ ಗುಂಪು ಹೋಟೆಲ್‌ನಲ್ಲಿ ಪಾರ್ಟಿ ಮಾಡುತ್ತಿದ್ದರು. ಈ ವೇಳೆ, ಸ್ಥಳೀಯರ ಗಲಾಟೆಯ ದೂರಿನ ಮೇರೆಗೆ 112 ಸಹಾಯವಾಣಿಗೆ ಕರೆ ಹೋಗಿದೆ. ಕರೆ ಸ್ವೀಕರಿಸಿದ ಹೆಚ್‌ಎಎಲ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಹೋಟೆಲ್‌ಗೆ ಬಂದ ಸಂದರ್ಭದಲ್ಲಿ, ಪಾರ್ಟಿ ಮಾಡುತ್ತಿದ್ದ ಯುವಕರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಬಾಲ್ಕನಿಯಿಂದ ಜಿಗಿಯಲು ಯತ್ನಿಸಿದ ಯುವತಿ

ಇನ್ನು ಪೊಲೀಸರ ಈ ನಡೆಯಿಂದಾಗಿ ತೀವ್ರ ಆತಂಕಕ್ಕೊಳಗಾದ ವೈಷ್ಣವಿ ಎಂಬ ಯುವತಿ, ಹೋಟೆಲ್‌ನ ಮೊದಲ ಮಹಡಿಯ ಬಾಲ್ಕನಿಯಿಂದ ಕೆಳಗೆ ಜಿಗಿಯಲು ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ. ಯುವತಿಗೆ ತೀವ್ರ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಪ್ರಕರಣವು ಪೊಲೀಸ್ ಇಲಾಖೆಗೆ ಮುಜುಗರ ತಂದಿರುವ ಬೆನ್ನಲ್ಲೇ, ಹೆಚ್‌ಎಎಲ್ ಪೊಲೀಸರು ಅಚ್ಚರಿಯ ಕ್ರಮ ಕೈಗೊಂಡಿದ್ದಾರೆ. ಯುವತಿಯ ತಂದೆ ಅಂತೋನಿ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ, ದೂರಿನಲ್ಲಿ, 'ಸೀ ಎಸ್ಟಾ ಲಾಡ್ಜ್' ಹೋಟೆಲ್ ಮಾಲೀಕರು ತಮ್ಮ ಕಟ್ಟಡದ ಬಾಲ್ಕನಿಯಲ್ಲಿ ಸುರಕ್ಷತಾ ಕ್ರಮಗಳನ್ನು ವಹಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸರಿಂದ ಕಿರುಕುಳ ಆರೋಪ

ಯುವತಿ ಬಾಲ್ಕನಿಯಿಂದ ಜಿಗಿಯಲು ಯತ್ನಿಸುವುದಕ್ಕೆ ಮುಖ್ಯ ಕಾರಣ ಪೊಲೀಸರ ಕಿರುಕುಳ ಮತ್ತು ಹಣದ ಬೇಡಿಕೆಯಾಗಿದ್ದು, ಆ ಅಂಶವನ್ನು ಮುಚ್ಚಿಡಲು ಪೊಲೀಸರು ಹೋಟೆಲ್ ಮಾಲೀಕರ ಮೇಲೆ ದೋಷವನ್ನು ಹೊರಿಸಿ ಎಫ್‌ಐಆರ್ ದಾಖಲಿಸಿದ್ದಾರೆ ಎಂಬ ಅನುಮಾನಗಳು ಸ್ಥಳೀಯರಿಂದ ಮತ್ತು ಹೋಟೆಲ್ ಸಿಬ್ಬಂದಿಯಿಂದ ವ್ಯಕ್ತವಾಗಿದೆ. ಈ ಘಟನೆಯ ಸಂದರ್ಭದಲ್ಲಿ ಪೊಲೀಸರು ವರ್ತಿಸಿದ ರೀತಿ ಮತ್ತು ಅವರು ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ತನಿಖೆ ನಡೆಸುವ ಬದಲು, ನಿರ್ಲಕ್ಷ್ಯದ ಆರೋಪವನ್ನು ಹೋಟೆಲ್ ಮಾಲೀಕರ ಮೇಲೆ ಹೊರಿಸುತ್ತಿರುವುದು ಹಲವು ಪ್ರಶ್ನೆಗಳಿಗೆ ಎಡೆಮಾಡಿದೆ. ಸದ್ಯ, ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಈ ಪ್ರಕರಣವನ್ನು ಯಾವ ದಿಕ್ಕಿನಲ್ಲಿ ತನಿಖೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

PREV
Read more Articles on
click me!

Recommended Stories

ದುಬೈನಲ್ಲಿ ಕುಳಿತು ಕರಾವಳಿಯಲ್ಲಿ ಕೋಮು ಭಾವನೆ ಕೆರಳಿಸುವ ಪೋಸ್ಟ್ ಹಾಕುತ್ತಿದ್ದವನ ಬಂಧಿಸಿದ ಮಂಗಳೂರು ಪೊಲೀಸರು
Share Market: ರಿಲಯನ್ಸ್ ಷೇರಿನ ಹೆಸರಲ್ಲಿ ಬೆಂಗಳೂರು ಉದ್ಯಮಿಗೆ ₹8 ಕೋಟಿ ವಂಚನೆ!