ರಸ್ತೆ ಗುಂಡಿಗೆ ಬೇಸತ್ತ ಕಂಪನಿಗೆ ಆಂಧ್ರ ಆಹ್ವಾನ: ಡಿ.ಕೆ.ಶಿವಕುಮಾರ್‌ ಹೇಳಿದ್ದೇನು?

Published : Sep 18, 2025, 09:59 AM IST
dk shivakumar

ಸಾರಾಂಶ

ಕಂಪನಿಯ ಹೇಳಿಕೆ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನಗರದ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ಈಗಾಗಲೇ ಆರಂಭಿಸಲಾಗಿದ್ದು, ನವೆಂಬರ್‌ ವೇಳೆಗೆ ಗುಂಡಿ ಮುಕ್ತಗೊಳಿಸುವುದಾಗಿ ಭರವಸೆ ನೀಡಿದ್ದಾರೆ.

ಬೆಂಗಳೂರು (ಸೆ.18): ರಸ್ತೆಗಳಲ್ಲಿನ ಗುಂಡಿ, ಧೂಳಿನ ಕಾರಣಕ್ಕೆ ಸಿಬ್ಬಂದಿ ಕೆಲಸಕ್ಕೆ ಬರುವ ಅವಧಿ ಹೆಚ್ಚಾಗುತ್ತಿದೆ. ಸಮಸ್ಯೆ ಸರಿಪಡಿಸುವ ಇಚ್ಛಾಶಕ್ತಿ ಕಾಣುತ್ತಿಲ್ಲ ಎಂಬ ಕಾರಣದಿಂದ ಹೊರ ಹೊಗಲು ನಿರ್ಧರಿಸಿರುವುದಾಗಿ ಲಾಜಿಸ್ಟಿಕ್ಸ್ ಟೆಕ್ ಪ್ಲಾಟ್‌ಫಾರ್ಮ್ ‘ಬ್ಲಾಕ್‌ ಬಕ್’ ಕಂಪನಿಯ ಹೇಳಿಕೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಆಂಧ್ರಪ್ರದೇಶ ಸರ್ಕಾರ ತಮ್ಮ ರಾಜ್ಯಕ್ಕೆ ಬರುವಂತೆ ಆಹ್ವಾನಿಸಿರುವುದು ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಕಂಪನಿಯ ಹೇಳಿಕೆ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನಗರದ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ಈಗಾಗಲೇ ಆರಂಭಿಸಲಾಗಿದ್ದು, ನವೆಂಬರ್‌ ವೇಳೆಗೆ ಗುಂಡಿ ಮುಕ್ತಗೊಳಿಸುವುದಾಗಿ ಭರವಸೆ ನೀಡಿದ್ದಾರೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್‌ ಅವರು, ಹೊರ ವರ್ತುಲ ರಸ್ತೆಯಲ್ಲಿ ಸಮಸ್ಯೆಗಳಿವೆ. ಅಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಮೆಟ್ರೋ ಕಾಮಗಾರಿ ಮುಗಿಯೋ ತನಕ ಎಲ್ಲರಿಗೂ ತೊಂದರೆ ಆಗಲಿದೆ. ಆ ಕಾಮಗಾರಿ ಮುಗಿದ ತಕ್ಷಣ ರಸ್ತೆಗಳು ಕೂಡ ಸರಿಯಾಗುತ್ತವೆ. ಉದ್ಯಮಿಗಳಿಗೆ ಏನೆಲ್ಲ ಮೂಲಸೌಕರ್ಯ ಬೇಕು, ಅದನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಮಂಗಳವಾರ ಲಾಜಿಸ್ಟಿಕ್ಸ್ ಟೆಕ್ ಪ್ಲಾಟ್‌ಫಾರ್ಮ್ ‘ಬ್ಲಾಕ್‌ ಬಕ್’ ಕಂಪನಿಯ ಸಹ ಸಂಸ್ಥಾಪಕ ರಾಜೇಶ್ ಯಬಾಜಿ, ಸಾಮಾಜಿಕ ಜಾಲ ತಾಣ ಎಕ್ಸ್‌ನಲ್ಲಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಹೆಚ್ಚಾಗಿದೆ.

ಕಳೆದ 9 ವರ್ಷಗಳಿಂದ ಹೊರ ವರ್ತುಲ ರಸ್ತೆ (ಓಆರ್‌ಆರ್) ಬೆಳ್ಳಂದೂರಿನಲ್ಲಿ ನಮ್ಮ ‘ಕಚೇರಿ ಹಾಗೂ ಮನೆ ಇದೆ. ಆದರೆ ಈಗ ಇಲ್ಲಿ ಮುಂದುವರಿಯುವುದು ತುಂಬಾ ಕಷ್ಟ. ನಾವು ಹೊರಗೆ ಹೋಗಲು ನಿರ್ಧರಿಸಿದ್ದೇವೆ. ಪ್ರಮುಖವಾಗಿ ಸಹೋದ್ಯೋಗಿಗಳ ಸರಾಸರಿ ಪ್ರಯಾಣದ ಸಮಯವು 1.5 ಅಧಿಕ ಗಂಟೆಗಳವರೆಗೆ ಒಂದು ಮಾರ್ಗದಲ್ಲಿ ಹೆಚ್ಚಾಗಿದೆ. ಗುಂಡಿ ಮತ್ತು ಧೂಳಿನಿಂದ ತುಂಬಿರುವ ರಸ್ತೆಗಳು, ಜತೆಗೆ ಅವುಗಳನ್ನು ಸರಿಪಡಿಸುವ ಇಚ್ಛಾಶಕ್ತಿಯ ಕೊರತೆ ಕಾಣುತ್ತಿದೆ. ಕಳೆದ 5 ವರ್ಷಗಳಲ್ಲಿ ಇದರಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಹೀಗಾಗಿ ಮುಂದುವರೆಯುವುದು ಕಷ್ಟವಾಗಿದೆ ಎಂದು ಕಾರಣ ತಿಳಿಸಿದ್ದರು.

ಆಂಧ್ರಪ್ರದೇಶ ಸಚಿವ ಆಹ್ವಾನ: ‘ಬ್ಲಾಕ್‌ ಬಕ್‌’ ಈ ಅಭಿಪ್ರಾಯ ವ್ಯಕ್ತಪಡಿಸಿದ ಬೆನ್ನಲ್ಲೇ ಬುಧವಾರ ಆಂಧ್ರಪ್ರದೇಶದ ಸಚಿವ ಲೋಕೇಶ್ ನಾರಾ ತಮ್ಮ ಎಕ್ಸ್ ಖಾತೆಯಲ್ಲಿ ಯಬಾಜಿ ಅವರ ಟ್ವೀಟ್‌ನ್ನು ಮರು ಟ್ವೀಟ್‌ ಮಾಡಿ ಕಂಪನಿಯನ್ನು ಆಂಧ್ರಪ್ರದೇಶದ ವೈಜಾಗ್‌ಗೆ ಸ್ಥಳಾಂತರಿಸಬಹುದು. ನಮ್ಮ ನಗರವು ಭಾರತದ ಟಾಪ್ ಐದು ಸ್ವಚ್ಛ ನಗರಗಳಲ್ಲಿ ಒಂದಾಗಿದೆ. ಅತ್ಯುತ್ತಮ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದೇವೆ. ಮಹಿಳೆಯರಿಗೆ ಸುರಕ್ಷಿತ ನಗರವೆಂದು ರ್‍ಯಾಂಕಿಂಗ್‌ ಪಡೆದಿದ್ದೇವೆ. ಆಸಕ್ತಿ ಇದ್ದರೆ ದಯವಿಟ್ಟು ಮೆಸೇಜ್ ಮಾಡಿ ಎಂದು ಪೋಸ್ಟ್ ಮಾಡಿದ್ದಾರೆ.

ಉದ್ಯಮಿಗಳಿಗೆ ಅಗತ್ಯ ಸೌಕರ್ಯ: ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಹೀಗಾಗಿ, ಗುಂಡಿ ಹೆಚ್ಚಾಗಿವೆ. ಜತೆಗೆ, ಮಳೆ ಬಂದಾಗಲೂ ಗುಂಡಿ ಸಮಸ್ಯೆ ಎದುರಾಗಲಿದೆ. ಸಾಕಷ್ಟು ಜನರು ಸರ್ವೀಸ್ ರಸ್ತೆಯನ್ನು ಮುಖ್ಯ ರಸ್ತೆ ಉಪಯೋಗ ಮಾಡುತ್ತಿದ್ದಾರೆ. ಈಗ ಎಲ್ಲೆಲ್ಲಿ ಸಮಸ್ಯೆ ಇದೆ ಎಂಬುದನ್ನು ಚರ್ಚಿಸಿ ಪರಿಹಾರ ಮಾಡುತ್ತೇವೆ. ಮೆಟ್ರೋ ಕಾಮಗಾರಿ ಮುಗಿಯುವ ತನಕ ಎಲ್ಲರಿಗೂ ತೊಂದರೆ ಆಗಲಿದೆ. ಆ ಕಾಮಗಾರಿ ಮುಗಿದ ತಕ್ಷಣ ರಸ್ತೆಗಳು ಕೂಡ ಸರಿಯಾಗುತ್ತವೆ. ಪ್ರತಿ ದಿನ ವಾರ್ಡ್ ಗಳಲ್ಲಿ ಗುಂಡಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ. ಹೈಡೆನ್ಸಿಸಿಟಿ ಕಾರಿಡಾರ್ ನಲ್ಲಿ ಹೆಚ್ಚಿನ ಗಮನ ನೀಡಲಾಗಿದೆ. ಒಂದಷ್ಟು ಕಡೆ ಮಳೆ ಬಂದಾಗ ಕೂಡ ಹಾಕಿರುವ ಡಾಂಬರ್‌ ಕಿತ್ತು ಬಂದಿದೆ. ಉದ್ಯಮಿಗಳಿಗೆ ಏನೆಲ್ಲ ಮೂಲಸೌಕರ್ಯ ಬೇಕು, ಅದನ್ನು ನೀಡಲಾಗುವುದು ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹೇಳಿದ್ದಾರೆ.

ರಸ್ತೆ ಗುಂಡಿಯಿಂದ ಸಮಸ್ಯೆ ಆಗುತ್ತಿಲ್ಲ: ಸಚಿವರ ವಾದ

ನಗರದಲ್ಲಿನ ರಸ್ತೆ ಗುಂಡಿ ಹೆಚ್ಚಾಗಿರುವ ಕುರಿತು ಪ್ರತಿಕ್ರಿಯಿಸಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌, ಮಳೆಯಿಂದಾಗಿ ರಸ್ತೆ ಗುಂಡಿಗಳು ಹೆಚ್ಚಾಗಿರುವುದು ನಿಜ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಅದರ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿದ್ದಾರೆ. ಶೀಘ್ರದಲ್ಲಿ ಪರಿಸ್ಥಿತಿ ಸುಧಾರಣೆಗೆ ಬರಲಿದೆ. ಇನ್ನು, ರಸ್ತೆ ಗುಂಡಿಗಳಿಂದ ಸುಗಮ ಸಂಚಾರಕ್ಕೆ ವ್ಯತ್ಯಯವಾಗುತ್ತಿಲ್ಲ. ಸಂಚಾರ ದಟ್ಟಣೆ ಸಮಸ್ಯೆ ಆಗಬಹುದಷ್ಟೇ ಎಂದು ಸಮಜಾಯಿಷಿ ನೀಡಿದರು. ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಮಾತನಾಡಿ, ಬಿಜೆಪಿ ಸರ್ಕಾರ ಇದ್ದಾಗ ರಸ್ತೆ ಸುಧಾರಣೆಗೆ ಯಾವುದೇ ಕೆಲಸ ಮಾಡಲಿಲ್ಲ. ಹೀಗಾಗಿ ಈಗ ರಸ್ತೆಗಳು ಹಾಳಾಗುತ್ತಿವೆ. ನಾನು ಈ ಹಿಂದೆ ಲೋಕೋಪಯೋಗಿ ಸಚಿವನಾಗಿದ್ದಾಗ 700-800 ಕಿಮೀ ರಸ್ತೆಯನ್ನು ದುರಸ್ತಿ ಮಾಡಿಸಿದ್ದೆ. ರಸ್ತೆ ಗುಂಡಿ ಸಮಸ್ಯೆ ನಿವಾರಣೆಗೆ ಉಪಮುಖ್ಯಮಂತ್ರಿ ಅವರು ಸಭೆ ಮಾಡಿ, ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ವ್ಯವಸ್ಥೆ ಹಾಳಾಗಲು ನಾವು ಬಿಡುವುದಿಲ್ಲ ಎಂದರು.

PREV
Read more Articles on
click me!

Recommended Stories

Farmer wins battle: ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!