
ವಿಜಯನಗರ (ಸೆ.17): ಸ್ನಾನಕ್ಕೆ ನೀರು ಕಾಯಿಸಲು ಹಾಕಿದ್ದ ವಿದ್ಯುತ್ ಹೀಟರ್ ಸ್ಪರ್ಶಿಸಿ 9ನೇ ತರಗತಿ ವಿದ್ಯಾರ್ಥಿನಿ ದುರ್ಮರಣಕ್ಕೀಡಾದ ಹೃದಯ ವಿದ್ರಾವಕ ಘಟನೆ ಕೂಡ್ಲಿಗಿ ತಾಲೂಕಿನ ಕಕ್ಕುಪ್ಪಿ ಗ್ರಾಮದಲ್ಲಿ ನಡೆದಿದೆ.
ಕೆ.ಎಚ್. ಭಾಗ್ಯಶ್ರೀ (15) ಮೃತಪಟ್ಟ ಬಾಲಕಿ. ಈಕೆ ಕಕ್ಕುಪ್ಪಿ ಗ್ರಾಮದ ಕೆ. ಹುಲೇಶ್ ಮತ್ತು ಅಂಬಿಕಾ ದಂಪತಿಯ ಪುತ್ರಿ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ 9ನೇ ತರಗತಿ ಓದುತ್ತಿದ್ದಳು. ನಿನ್ನೆ ಬೆಳಗ್ಗೆ ಮನೆಯಲ್ಲಿ ನಡೆದ ವಿದ್ಯುತ್ ಅವಘಡಕ್ಕೆ ಬಲಿಯಾಗಿದ್ದಾಳೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಧ್ಯಮವರ್ಗದ ಜನರು ಹಾಗೂ ಶ್ರೀಮಂತರು ಹೀಟರ್ ಬಳಸುವುದಕ್ಕೆ ಹೆದರುವಂತಾಗಿದೆ.
ಪ್ರತಿದಿನದಂತೆ ಇಂದು ಬೆಳಿಗ್ಗೆ ಶಾಲೆಗೆ ತೆರಳುವ ಸಲುವಾಗಿ ಭಾಗ್ಯಶ್ರೀ ನೀರು ಕಾಯಿಸಲು ವಾಟರ್ ಹೀಟರ್ ಹಾಕಿದ್ದಳು. ನೀರು ಕಾದ ನಂತರ ಸ್ನಾನ ಮಾಡಿ, ಹೀಟರ್‌ನ ಸ್ವಿಚ್ ಆಫ್ ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶವಾಗಿದೆ. ಶಾಕ್ ಹೊಡೆದ ರಭಸಕ್ಕೆ ಭಾಗ್ಯಶ್ರೀ ಕೆಳಗೆ ಬಿದ್ದು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾಳೆ. ತಕ್ಷಣವೇ ಕುಟುಂಬ ಸದಸ್ಯರು ಆಕೆಯನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದರೂ, ಮಾರ್ಗಮಧ್ಯೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದರು.
ಈ ದುರ್ಘಟನೆಗೆ ಸಂಬಂಧಿಸಿ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಘಟನೆಯು ವಿದ್ಯುತ್ ಉಪಕರಣಗಳ ಬಳಕೆಯಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಎಚ್ಚರಿಕೆ ನೀಡಿದೆ.
ಸ್ಥಳ: ಕಕ್ಕುಪ್ಪಿ ಗ್ರಾಮ, ಕೂಡ್ಲಿಗಿ ತಾಲ್ಲೂಕು, ವಿಜಯನಗರ ಜಿಲ್ಲೆ
ಮೃತ ಬಾಲಕಿ: ಕೆ.ಎಚ್. ಭಾಗ್ಯಶ್ರೀ (15)