ಬೆಂಗಳೂರಲ್ಲಿ ₹1 ಕೋಟಿ ಮೌಲ್ಯದ ಬಿ-ಖಾತಾ ಆಸ್ತಿಯಿದೆಯೇ? ಜಿಬಿಎಗೆ ₹2 ಲಕ್ಷ ಪಾವತಿಸಿ ಎ-ಖಾತಾ ಮಾಡಿಕೊಳ್ಳಿ!

Published : May 13, 2026, 09:47 PM IST
Bengaluru B-khata to A-Khata DK Shivakumar

ಸಾರಾಂಶ

ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು 'ಭೂ ಗ್ಯಾರಂಟಿ' ಅಡಿಯಲ್ಲಿ ಇ-ಖಾತಾ ವಿತರಣೆ, 'ಬಿ' ಖಾತಾದಿಂದ 'ಎ' ಖಾತಾಗೆ ಪರಿವರ್ತನೆ ಶುಲ್ಕದಲ್ಲಿ ಶೇ. 60ರಷ್ಟು ರಿಯಾಯಿತಿ, ಮತ್ತು ಕಟ್ಟಡ ಉಲ್ಲಂಘನೆ ವಿನಾಯಿತಿ ಮಿತಿ ಶೇ. 15ಕ್ಕೆ ಹೆಚ್ಚಳ ಮಾಡುವ ಯೋಜನೆಗಳನ್ನು ಘೋಷಿಸಿದ್ದಾರೆ.

ಬೆಂಗಳೂರು (ಮೇ 13): ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿಯಾದ 'ಭೂ ಗ್ಯಾರಂಟಿ' ಮೂಲಕ ಬೆಂಗಳೂರು ನಾಗರಿಕರಿಗೆ 'ಇ' ಖಾತಾ ವಿತರಣೆ, ಕಟ್ಟಡ ಉಲ್ಲಂಘನೆ ವಿನಾಯಿತಿ ಮಿತಿ ಶೇ.5 ರಿಂದ ಶೇ.15 ಕ್ಕೆ ಹೆಚ್ಚಳ, 100 ದಿನದಲ್ಲಿ 'ಎ' ಯಿಂದ 'ಬಿ' ಖಾತಾ ಶುಲ್ಕ ಪಾವತಿಸಿದರೆ ಶೇ. 60 ರಷ್ಟು ರಿಯಾಯಿತಿ, ಶಿವರಾಂ ಕಾರಂತ ಬಡಾವಣೆಯ ಭೂ ಮಾಲೀಕರಿಗೆ 18 ಸಾವಿರ ನಿವೇಶನ ಹಂಚಿಕೆ, 'ಗ್ರೀನ್ ಬೆಂಗಳೂರುʼ ಕಾರ್ಯಕ್ರಮ, ಬಿಡಿಎ ಮನೆಗಳ ಮಾರಾಟ ಸೇರಿದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ನಾಗರಿಕರಿಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಬಂಪರ್ ಕೊಡುಗೆಯಾಗಿ ಘೋಷಿಸಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕೇಂದ್ರ ಕಚೇರಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿ ನಡೆಸಿ ಬೆಂಗಳೂರು ಅನೇಕ ನಾಗರಿಕಸ್ನೇಹಿ ಘೋಷಣೆಗಳನ್ನು ಮಾಡಿದರು.

ಬೆಂಗಳೂರು ಅಭಿವೃದ್ದಿಗೆ ಸುಮಾರು 150 ಯೋಜನೆಗಳಿದ್ದು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಈ ಬಗ್ಗೆ ಪ್ರತ್ಯೇಕ ಮಾಹಿತಿ ನೀಡಲಾಗುವುದು. ಮೊದಲಿಗೆ 'ನನ್ನ ಖಾತೆ, ನನ್ನ ಹಕ್ಕು' ಅಭಿಯಾನ ಮೂರು ತಿಂಗಳ ಕಾಲ ಶನಿವಾರ ನಡೆಯಲಿದೆ. ಪ್ರತಿ ಶನಿವಾರ ಬೆಂಗಳೂರಿನ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ತಲಾ 10 ರಂತೆ 50 ಸ್ಥಳಗಳಲ್ಲಿ ಈ ಅಭಿಯಾನ (ಇ-ಖಾತಾ ಸಿಟಿಜನ್ ಓಪನ್ ಹೌಸ್) ಕಾರ್ಯಕ್ರಮ ನಡೆಯಲಿದೆ. ಮೇ 16 ರಿಂದ ಇದಕ್ಕೆ ಚಾಲನೆ ನೀಡಲಾಗುವುದು. ಬೆಳಿಗ್ಗೆ 10 ಕ್ಕೆ ಪ್ರಾರಂಭವಾಗಿ ಸಂಜೆವರೆಗೆ ನಡೆಯುವ ಈ ಅಭಿಯಾನದ ಸ್ಥಳಗಳನ್ನು ಮುಂಚಿತವಾಗಿ ತಿಳಿಸಲಾಗುವುದು ಎಂದರು.

ಭೂ ಗ್ಯಾರಂಟಿ; ಬೆಂಗಳೂರಿನ ನಾಗರಿಕರಿಗೆ ಸುರಕ್ಷಿತ ಡಿಜಿಟಲ್ ಆಸ್ತಿ ಹಕ್ಕು

ನಾವು ಜಾರಿಗೆ ತಂದಿರುವ 'ಇ' ಖಾತಾ ಆಂದೋಲನ ಭಾರತದ ಅತಿದೊಡ್ಡ ಸಮಗ್ರ ಡಿಜಿಟಲ್ ನಗರ ಆಸ್ತಿ ದಾಖಲೆ ವ್ಯವಸ್ಥೆಯಾಗಿದ್ದು , 23 ಲಕ್ಷಕ್ಕೂ ಅಧಿಕ ಆಸ್ತಿ ದಾಖಲೆಗಳನ್ನು ಆನ್ಲೈನ್ ಮೂಲಕ ನೇರವಾಗಿ ನಾಗರಿಕರ ಕೈಗೆ ತಲುಪಿಸಿದೆ. ಹಳೆಯ, ಅಸ್ಪಷ್ಟ ಹಾಗೂ ಕೈಪಿಡಿ ವ್ಯವಸ್ಥೆಯನ್ನು https://BBMPeAasthi.karnataka.gov.in ರಲ್ಲಿ ಪಡೆದುಕೊಳ್ಳಬಹುದು. ನಗರದಲ್ಲಿ ದಾಖಲೆಗಳು ಸರಿ ಇರುವ ಸುಮಾರು 16 ಲಕ್ಷ 'ಎ' ಖಾತೆಗಳಿವೆ. 7 ಲಕ್ಷ 'ಬಿ' ಖಾತೆಗಳಿವೆ. “ಭೂ ಗ್ಯಾರಂಟಿ”ಮೂಲಕ ಬೆಂಗಳೂರಿನ ಪ್ರತಿಯೊಬ್ಬ ನೈಜ ಆಸ್ತಿ ಮಾಲೀಕರಿಗೂ ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಎಲ್ಲೆಡೆಯೂ ಲಭ್ಯವಾಗುವ ಡಿಜಿಟಲ್ ಆಸ್ತಿ ದಾಖಲೆಗಳನ್ನು ಒದಗಿಸಲಾಗುವುದು. ಇದನ್ನು ಪಾರದರ್ಶಕ, ಸುರಕ್ಷಿತ ಹಾಗೂ ನಾಗರಿಕ ಕೇಂದ್ರಿತ ಡಿಜಿಟಲ್ ಸ್ವರೂಪಕ್ಕೆ ಪರಿವರ್ತಿಸಲಾಗಿದೆ ಎಂದರು.

100 ದಿನದಲ್ಲಿ ₹1 ಕೋಟಿ ಮೌಲ್ಯದ ಆಸ್ತಿಗೆ 2 ಲಕ್ಷ ರೂ. ಶುಲ್ಕ

'ಬಿ' ಖಾತೆಯಿಂದ 'ಎ' ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದವರು ದಾಖಲೆಗಳನ್ನು ಸರಿಯಾಗಿ ನೀಡಿದ್ದರೆ ಈಗ ಗೈಡೆನ್ಸ್ ವ್ಯಾಲ್ಯೂನ ಶೇ.5 ರಷ್ಟನ್ನು ಕಟ್ಟಬೇಕಿದೆ. ಆದರೆ 100 ದಿನಗಳ ಒಳಗಾಗಿ ಶುಲ್ಕ ಪಾವತಿಸಿದರೆ ಶೇ. 2 ರಷ್ಟು ಕಟ್ಟಿದರೆ ಸಾಕು. ಅಂದರೆ ಶೇ.60 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅಂದರೆ 1 ಕೋಟಿ ಆಸ್ತಿಯ ಬೆಲೆ ಇದ್ದರೆ 5 ಲಕ್ಷ ಶುಲ್ಕ ಪಾವತಿ ಮಾಡಬೇಕಿತ್ತು. ಈಗ 2 ಲಕ್ಷ ಕಟ್ಟಿದರೆ ಸಾಕು. ಇದರಿಂದ 7 ಲಕ್ಷ ಆಸ್ತಿ ಮಾಲೀಕರಿಗೆ ಉಪಯೋಗವಾಗಲಿದೆ' ಎಂದರು.

'100 ದಿನಗಳಲ್ಲಿ ಇದರ ಉಪಯೋಗ ಪಡೆಯಲಿಲ್ಲ ಎಂದರೆ ನಂತರ ಶೇ.5 ರಷ್ಟೇ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಪ್ರತಿಯೊಂದು ಆಸ್ತಿ ದಾಖಲೆಗಳಲ್ಲಿ ಜಿಪಿಎಸ್, ಮಾಲೀಕರ ಫೋಟೋ ಇರುತ್ತದೆ. ಒಂದೇ ಒಂದು ರೂಪಾಯಿ ಲಂಚ ಇಲ್ಲದಂತೆ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಗ್ಯಾರಂಟಿ ಅನುಷ್ಠಾನ ಸಮಿತಿಯವರು, ಅಧಿಕಾರಿಗಳು ಇದರ ಜವಾಬ್ದಾರಿ ಹೊತ್ತಿರುತ್ತಾರೆ. ಜೊತೆಗೆ ಆನ್ ಲೈನ್ ಅಲ್ಲೂ ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಯೋಜನೆ ಬಗ್ಗೆ ಪ್ರತಿ ಮನೆಗೂ ಮಾಹಿತಿ ತಲುಪಿಸಲಾಗುವುದು. ವಾಟ್ಸಪ್ ಸೇರಿದಂತೆ ಇತರೇ ಮಾಧ್ಯಮಗಳ ಮೂಲಕ ಮಾಹಿತಿ ರವಾನಿಸಲಾಗುವುದು. ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಮಾಹಿತಿ ನೀಡಲಾಗುವುದು. ದಾಖಲೆಗಳು ಕನ್ನಡದಲ್ಲಿ ಇರುತ್ತವೆ' ಎಂದರು.

ಕಟ್ಟಡ ಉಲ್ಲಂಘನೆ ವಿನಾಯಿತಿ ಮಿತಿ ಶೇ.5 ರಿಂದ ಶೇ.15 ಕ್ಕೆ ಹೆಚ್ಚಳ

ಕಟ್ಟಡದ ಉಲ್ಲಂಘನೆ ವಿನಾಯಿತಿ ಮಿತಿಯನ್ನು (ಎತ್ತರ, ಎಫ್ ಎಆರ್, ಸೆಟ್ ಬ್ಯಾಕ್) ಶೇ.5 ರ ಬದಲಾಗಿ ಶೇ.15 ಕ್ಕೆ ಹೆಚ್ಚಿಸಲಾಗಿದೆ. ಶೇ.15 ರಷ್ಟು ಪ್ರಮಾಣದ ಉಲ್ಲಂಘನೆಗಳಿಗೆ ದಂಡ ಪಾವತಿಸಿಕೊಂಡು ಸ್ವಾಧೀನಾನುಭವ ಪ್ರಮಾಣ ಪತ್ರ ನೀಡಲು ಒಪ್ಪಿಗೆ ನೀಡಲಾಗಿದೆ. ಸುಪ್ರೀಂ ಕೋರ್ಟ್ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯದ ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರು ಸರಬರಾಜು ಸೌಕರ್ಯ ಒದಗಿಸಬಾರದೆಂದು ಆದೇಶಿಸಿದೆ. ಈ ಸಮಸ್ಯೆ ನಿವಾರಿಸಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ತೀರ್ಮಾನ ಮಾಡಲಾಗುತ್ತಿದೆ ಎಂದು ಹೇಳಿದರು.

ನಾವು ಅಕ್ರಮ ಅಕ್ರಮ ಮಾಡುತ್ತಿಲ್ಲ. ನಗರದಲ್ಲಿ ಭೂಮಿಯ ತೀವ್ರ ಬೇಡಿಕೆಯಿಂದ ಹಾಗೂ ದಿನೇ ದಿನೇ ಬೆಳವಣಿಗೆಗಳ ಒತ್ತಡದಿಂದ ನಿವೇಶನ/ ಸ್ವತ್ತಿನ ಮಾಲೀಕರು ನಿಯಮಾನುಸಾರ ಸೆಟ್ ಬ್ಯಾಕ್ ಬಿಡದೆ ನಕ್ಷೆ ಉಲ್ಲಂಘನೆ ಮಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. 20/30, 30/40, 40/60 ಅಳತೆಯ ನಿವೇಶನಗಳಿಗೆ ಗರಿಷ್ಟ ಶೇ. 50 ರಷ್ಟು ಸೆಟ್ ಬ್ಯಾಕ್ ರಿಯಾಯಿತಿ ನೀಡಲು ಕಾಯ್ದೆಯಲ್ಲಿ ಅವಕಾಶವಿದೆ. ನಾವೀಗ ಶೇ.15ರಷ್ಟು ವಿನಾಯಿತಿ ನೀಡಿದ್ದೇವೆ' ಎಂದರು.

2020 ರಲ್ಲಿ ಬಿಜೆಪಿ ಸರ್ಕಾರ '38 ಡಿ' ಎನ್ನುವ ಕಾನೂನು ಜಾರಿಗೆ ತಂದಿತ್ತು. ಸುಮಾರು 1 ಲಕ್ಷಕ್ಕೂ ಹೆಚ್ಚು ಜನ ಬಿಡಿಎ ಲೇಔಟ್ ಗಳಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದರು. ಇದರಲ್ಲಿ 570 ಜನ ಮಾತ್ರ ಅರ್ಜಿ ಸಲ್ಲಿಸಿದ್ದರು. 200 ರಿಂದ 600 ಅಡಿವರೆಗೆ ಶೇ.10 ರಷ್ಟು, 600 ರಿಂದ 900 ಅಡಿವರೆಗೆ ಶೇ.25 ರಷ್ಟು, 1200 ರಿಂದ 2400 ವರೆಗೆ ಶೇ.40 ರಷ್ಟು, 2400 ರಿಂದ 4000 ವರೆಗೂ ಶೇ.50 ರಷ್ಟು ಗೈಡೆನ್ಸ್ ವ್ಯಾಲ್ಯೂ ಮೇಲೆ ಶುಲ್ಕ ಕಟ್ಟಲು ಕಾನೂನಿನಲ್ಲಿ ಅವಕಾಶ ಮಾಡಿದ್ದರು. ಆಗ 6 ತಿಂಗಳ ಕಾಲ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಯಾರೂ ಕೂಡ ಶುಲ್ಕ ಕಟ್ಟಲು ಮುಂದೆ ಬರಲಿಲ್ಲ. ಶುಲ್ಕ ಹೆಚ್ಚಾಯಿತು ಎಂದು ಯೋಜನೆ ಪ್ರಯೋಜನ ಪಡೆಯಲಿಲ್ಲ. ಈಗಲೂ ಈ ದಾಖಲೆಗಳು ಬರೀ ಸರ್ಕಾರಿ ದಾಖಲೆಗಳಾಗಿ ಉಳಿದುಕೊಂಡಿವೆ ಎಂದರು.

ಈಗ ಅರ್ಜಿ ಹಾಕಲು ಜೂನ್ 15 ರಿಂದ ಒಟ್ಟು ಮೂರು ತಿಂಗಳ ಕಾಲ ಅವಕಾಶ ಕಲ್ಪಿಸಿಕೊಡಲಾಗುವುದು. ಓಟಿಎಸ್ ಜಾರಿ ಮಾಡಲಾಗುವುದು. ಮೊದಲ 100 ದಿನ ಅರ್ಜಿ ಸಲ್ಲಿಸಲು, 100 ದಿನ ಅರ್ಜಿ ಪರಿಶೀಲನೆಗೆ, ನಂತರ ಪಾವತಿಗೆ ಅವಕಾಶ ನೀಡಲಾಗವುದು. 1 ವರ್ಷ ಕಾಲಮಿತಿಯೊಳಗೆ ಅಂದರೆ 2027 ರ ಜೂನ್ ಗೆ ಈ ಯೋಜನೆ ಮುಕ್ತಾಯಗೊಳಿಸಲಾಗವುದು ಎಂದರು.

'ಮೂರು ತಿಂಗಳ ಒಳಗೆ ಅರ್ಜಿ ಸಲ್ಲಿಸಿದವರು ಶೇ 10 ರ ಬದಲು ಶೇ.5 ರಷ್ಟು ಮಾತ್ರ ಪಾವತಿ ಮಾಡಬಹುದು. ಅವರಿಗೆ ಶೇ.50 ರಷ್ಟು ರಿಯಾಯಿತಿ ದೊರೆಯಲಿದೆ. ಕಾನೂನಿನ ಚೌಕಟ್ಟಿನಲ್ಲಿಯೇ ರಿಯಾಯಿತಿ ನೀಡಲಾಗಿದೆ. ಗೈಡೆನ್ಸ್ ವ್ಯಾಲ್ಯೂ ಪೈಕಿ ಶೇ.25 ಇರುವ ಕಡೆ ಶೇ 12.5, ಶೇ.40 ಇರುವ ಕಡೆ ಶೇ.20ರಷ್ಟು, ಶೇ.50 ಇರುವ ಕಡೆ ಶೇ.25 ರಷ್ಟು ರಿಯಾಯಿತಿ ನೀಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಯವರು ಸೇರಿದಂತೆ ಸಚಿವರ ಬಳಿಯೂ ಚರ್ಚೆ ನಡೆಸಲಾಗಿದೆ' ಎಂದರು.

PREV
Read more Articles on
click me!

Recommended Stories

Vokkaligara Sangha: ನೇಮಕಾತೀಲಿ ಭ್ರಷ್ಟಾಚಾರ ನಡೆದಿದೆ ಅಂತ ಆರೋಪ ಮಾಡಿದವರಿಂದಲೇ ಹಲವು ಅಕ್ರಮ: ಒಕ್ಕಲಿಗರ ಸಂಘ
ಆರೋಗ್ಯ ಇಲಾಖೆಯಲ್ಲಿ ಮಹತ್ವದ ಬದಲಾವಣೆ: ಜನೌಷಧ ಕೇಂದ್ರದಲ್ಲಿ ಖಾಸಗಿ ಕಂಪನಿ ಔಷಧ ಮಾರಾಟ ಮಾಡಿದ್ರೆ ಹುಷಾರ್, ಆರೋಗ್ಯ ಸಚಿವರು ಹೇಳಿದ್ದೇನು?