
ಕುದೂರು (ಮೇ.13): ರೈತರ ಬದುಕು ಹಸನಾಗಿಸಲು ಹೇಮಾವತಿ ನದಿ ನೀರನ್ನು ಹರಿಸುವ ಕೆಲಸ ಮಾಡಿಯೇ ತೀರುತ್ತೇವೆ. ಇದು ನಮ್ಮ ಬಲವಾದ ಸಂಕಲ್ಪ. ಈ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮತ್ತು ನಾವು ಶ್ರಮ ಹಾಕಿ ದುಡಿಯುತ್ತಿದ್ದೇವೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು. ರೈತರ ಕುರಿತಾದ ಈ ಆಭಿಯಾನವನ್ನು ಗ್ರಾಮ ಪಂಚಾಯ್ತಿ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಿದೆ.
ಸರ್ಕಾರಿ ಕಾರ್ಯಕ್ರಮಗಳನ್ನು ಸಾಂಕೇತಿಕವಾಗಿ ಮಾಡಿ ಅದರದೊಂದು ಫೋಟೋ ಲಗತ್ತಿಸಿದರೆ ಅಧಿಕಾರಿಗಳ ಜವಾಬ್ದಾರಿ ಮುಗಿಯುವುದಿಲ್ಲ. ರೈತರ ಅಭಿಯಾನವನ್ನು ಪಂಚಾಯ್ತಿ ಮಟ್ಟಕ್ಕೆ ತೆಗೆದುಕೊಂಡು ಹೋಗದೆ ಇರಲು ರಾಜಕಾರಣಿಗಳಾದ ನಮ್ಮದು ಪಾತ್ರವಿದೆ. ಇನ್ನು ಮುಂದೆ ನಮ್ಮ ತಪ್ಪುಗಳನ್ನು ತಿದ್ದುಕೊಂಡು ನಿಮ್ಮೊಂದಿಗೆ ಇರುತ್ತೇವೆ. ಕೆವಿಕೆಯವರು ಗ್ರಾಮಗಳಿಗೆ ಸರ್ಕಾರದ ಸೌಲಭ್ಯಗಳು ಮತ್ತು ಮಾರ್ಗದರ್ಶವನ್ನು ತೆಗೆದುಕೊಂಡು ಹೋಗಲು ಶ್ರಮಿಸಬೇಕು ಎಂದು ಹೇಳಿದರು.
ಅಲ್ಲೆಲ್ಲೋ ಯುದ್ದ ನಡೆದರೆ ನಮ್ಮ ದೇಶ ಗ್ಯಾಸ್ ಮತ್ತು ಪೆಟ್ರೋಲ್ , ಡೀಸಲ್ ಸಮಸ್ಯೆ ಅನುಭವಿಸುತ್ತಿದ್ದೇವೆ. ಗ್ಯಾಸ್ ಸಿಲಿಂಡರ್‌ಗಳು ಬೇಕು ಎಂದು ಪೋನು ಮಾಡುತ್ತಾರೆ. ಆಗೆಲ್ಲಾ ನನಗನಿಸುವುದು ರೈತರು ಗ್ಯಾಸ್ ಸಿಲಿಂಡರ್‌ಗಳಿಗೆ ಅವಲಂಬಿತರಾಗುವ ಬದಲು ಸಗಣಿ ಗೊಬ್ಬರದಿಂದ ನಡೆಯುವ ಗೋಬರ್ ಗ್ಯಾಸ್ ಅನ್ನು ಅಳವಡಿಸಿಕೊಳ್ಳಬೇಕು. ರೈತರು ಇದನ್ನು ಅಳವಡಿಸಿಕೊಂಡಿದ್ದೇ ಆದರೆ ತಮ್ಮ ಮನೆಗೆ ಸಾಕಾಗುವಷ್ಟು ಗ್ಯಾಸ್ ಉತ್ಪಾದನೆಯನ್ನು ನಾವೇ ಮಾಡಿಕೊಂಡು ಹೆಚ್ಚಿನ ಗ್ಯಾಸನ್ನು ಮಾರಾಟ ಮಾಡಬಹುದು ಎಂದು ತಿಳಿಸಿದರು.
ಇಂದು ವ್ಯಾಪಾರ ಮಾಡುವವರು ಚೆನ್ನಾಗಿ ಬದುಕುತ್ತಿದ್ದಾರೆ. ಆದರೆ ರೈತರು ಮಾತ್ರ ಅಂತಹ ನೆಮ್ಮದಿಯನ್ನು ಕಾಣಲಾಗುತ್ತಿಲ್ಲ. ಇದು ಮಳೆಯಿಲ್ಲದ್ದು ಮತ್ತು ಬೆಳೆದ ಬೆಳೆಗಳಿಗೆ ಬೆಲೆ ಸಿಗದೆ ಇರುವುದು ಕಾರಣವಾಗಬಹುದು. ಯಾವ ಬೆಳೆಯನ್ನು ಯಾವ ಜಿಲ್ಲೆಯವರು ಬೆಳೆಯಬೇಕು ಎಂಬ ನೀತಿಗಳು ಇಲ್ಲದೇ ಇರುವುದು ಕಾರಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕುದೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಪರಮಾನಂದ ಸ್ವಾಮೀಜಿ, ಭೂಮಿಯನ್ನು ವಿಷಮಯವನ್ನಾಗಿ ಮಾಡದೆ, ಭೂಮಿಗೆ ವಿಪರೀತ ಔಷಧಿಗಳು, ರಸಾಯನಿಕ ಗೊಬ್ಬರಗಳನ್ನು ಹಾಕಿ ಭೂಮಿಯನ್ನು ಉಸಿರಾಡಲು ಕಷ್ಟ ಪಡುವಂತೆ ಮಾಡುತ್ತಿದ್ದೇವೆ. ಇಂತಹ ಸ್ಥಿತಿ ಮುಂದುವರಿದರೆ ನಾವು ಸೇವಿಸುವ ಆಹಾರ ವಿಷಮಯವಾಗಿ ನೂರಾರು ಕಾಯಿಲೆಗಳಿಗೆ ದಾಸರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಶ್ವೇತಾ ಮಾತನಾಡಿ, ಭಾರತದಲ್ಲಿ ಕೃಷಿ ಮುಖ್ಯ ಭೂಮಿಕೆಗೆ ಬರುವಂತಾಗಬೇಕು. ಆಧುನಿಕತೆಯ ಸ್ಪರ್ಶದಿಂದ ಪ್ರಾಚೀಣ ಕಾಲದ ವ್ಯವಸಾಯ ಪದ್ದತಿಯನ್ನು ಅಳವಡಿಸಿಕೊಂಡು, ಮಣ್ಣಿನ ಪರೀಕ್ಷೆ ಮಾಡಿಸಿ ನೀರಿನ ಪ್ರಮಾಣವನ್ನು ಪರೀಕ್ಷೆ ಮಾಡಿಸಿ ಬೆಳೆಯನ್ನು ಬೆಳೆಯಲು ನಮ್ಮ ಇಲಾಖೆಯಿಂದ ಸಂಪೂರ್ಣ ಮಾಹಿತಿ ನೀಡಿ, ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.