ಬೆಂಗಳೂರು : 9 ಟನ್‌ ಮದ್ಯದ ಬಾಟಲ್‌, ಚಪ್ಪಲಿ ರಾಶಿ ತೆರವು

Kannadaprabha News   | Kannada Prabha
Published : Jan 02, 2026, 07:08 AM IST
MG Road

ಸಾರಾಂಶ

ಹೊಸ ವರ್ಷದ ಸಂಭ್ರಮಾಚರಣೆ ನಡೆದ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಕಮರ್ಷಿಲ್‌ ಸ್ಟ್ರೀಟ್‌ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಮದ್ಯದ ಬಾಟಲ್‌, ಚಪ್ಪಲಿ, ಶೂ, ಬಟ್ಟೆ ಸೇರಿದಂತೆ ಬರೋಬ್ಬರಿ ಒಂಬತ್ತು ಟನ್‌ನಷ್ಟು ಕಸ ರಾಶಿ ತೆರವುಗೊಳಿಸಲಾಗಿದೆ.

  ಬೆಂಗಳೂರು :  ಹೊಸ ವರ್ಷದ ಸಂಭ್ರಮಾಚರಣೆ ನಡೆದ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಕಮರ್ಷಿಲ್‌ ಸ್ಟ್ರೀಟ್‌ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಮದ್ಯದ ಬಾಟಲ್‌, ಚಪ್ಪಲಿ, ಶೂ, ಬಟ್ಟೆ ಸೇರಿದಂತೆ ಬರೋಬ್ಬರಿ ಒಂಬತ್ತು ಟನ್‌ನಷ್ಟು ಕಸ ರಾಶಿ ತೆರವುಗೊಳಿಸಲಾಗಿದೆ.

ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌, ಸೆಂಟ್‌ಮಾರ್ಕ್‌ ರಸ್ತೆ, ಇಂದಿರಾನಗರ, ರೆಸಿಡೆನ್ಸಿ ರಸ್ತೆಗಳಲ್ಲಿ ಹೊಸ ವರ್ಷದ ಆಚರಣೆ ಭರ್ಜರಿಯಾಗಿ ನಡೆದಿದ್ದು,ಮಧ್ಯರಾತ್ರಿ ಸುಮಾರು ಮೂರು ಗಂಟೆಯ ವೇಳೆಗೆ ವರ್ಷಾಚರಣೆಗೆ ಆಗಮಿಸಿದ್ದವರು ತೆರಳಿದರು. ನಂತರ ಕೇಂದ್ರ ನಗರ ಪಾಲಿಕೆಯ ಪೌರಕಾರ್ಮಿಕರು, ಅಧಿಕಾರಿ, ಸಿಬ್ಬಂದಿ ಸ್ವಚ್ಛತಾ ಕಾರ್ಯವನ್ನು ಆರಂಭಿಸಿದರು.

ಬೆಳಗ್ಗೆ 8 ಗಂಟೆಯ ವೇಳೆ ಈ ಎಲ್ಲ ರಸ್ತೆಗಳಲ್ಲಿ ಬಿದ್ದಿದ್ದ ಮದ್ಯದ ಬಾಟಲ್‌, ಚಪ್ಪಲ್‌, ಶೂ, ಬಟ್ಟೆ, ಊಟ, ತಿಂಡಿ ತಿನಿಸುಗಳ ಪ್ಲೇಟ್‌, ಪ್ಲಾಸ್ಟಿಕ್‌ ತ್ಯಾಜ್ಯ, ಸಿಗರೇಟ್‌ ತುಂಡುಗಳನ್ನು ಸ್ವಚ್ಛಗೊಳಿಸಲಾಗಿದೆ. ಸುಮಾರು ಒಂಬತ್ತು ಟನ್‌ ನಷ್ಟು ಕಸ ಶೇಖರಣೆಯಾಗಿದ್ದು, ಆಟೋ, ಕಾಂಪ್ಯಾಕ್ಟರ್‌ ಮೂಲಕ ಎಲ್ಲವನ್ನೂ ಸಾಗಿಸಲಾಗಿದೆ. ಬಳಿಕ ರಸ್ತೆ, ಪಾದಚಾರಿ ಮಾರ್ಗವನ್ನು ಸ್ವಚ್ಛವಾಗಿ ನೀರು ಹಾಕಿ ತೊಳೆದು ಶುಭ್ರಗೊಳಿಸಲಾಗಿದೆ.

ಸ್ವಚ್ಛತಾ ಕಾರ್ಯಕ್ಕೆ 110 ಪೌರ ಕಾರ್ಮಿಕರು‌, 3 ಜನ ಕಿರಿಯ ಆರೋಗ್ಯ ಪರಿವೀಕ್ಷಕರು, 10 ಆಟೋ ಟಿಪ್ಪರ್‌, 3 ಪ್ರೆಸರ್‌ ಜೆಟ್‌ ವಾಟರ್‌ ಕ್ಲಿನಿಂಗ್‌ ಯಂತ್ರಗಳು ಬಳಕೆ ಮಾಡಲಾಗಿದೆ ಎಂದು ಕೇಂದ್ರ ನಗರ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋರಮಂಗಲದಲ್ಲಿ 250 ಕೆ.ಜಿ ಮದ್ಯದ ಬಾಟಲಿ:

ಕೋರಮಂಗಲದ ಸುಖ ಸಾಗರ ಹೋಟೆಲಿಂದ ಎಂಪೈರ್ ಹೋಟೆಲ್‌ವರೆಗೆ (2 ಕಿ.ಮೀ) ಭಾರೀ ಸಂಖ್ಯೆಯ ಯುವಕ-ಯುವತಿಯರು ಸೇರಿದ್ದು, ಈ ವೇಳೆ ಸೃಷ್ಟಿಯಾಗಿದ್ದ 250 ಕೆ.ಜಿಯಷ್ಟು ಮದ್ಯದ ಬಾಟಲಿ, ನೀರಿನ ಬಾಟಲಿ, 200 ಕೆ.ಜಿ ಹಸಿ ತ್ಯಾಜ್ಯ ಒಳಗೊಂಡ ಸುಮಾರು 1 ಟನ್‌ ಕಸದ ರಾಶಿ ತೆರವುಗೊಳಿಸಲಾಗಿದೆ ಎಂದು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಂ.ಜಿ.ರಸ್ತೆಯಲ್ಲಿ ಕಡಿವಾಣಕ್ಕೆ ಬೇಸರ

ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದ ಕಾಲ್ತುಳಿತ ಪ್ರಕರಣದಿಂದಾಗಿ ಎಚ್ಚೆತ್ತ ಪೊಲೀಸರು ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆ ಮತ್ತು ಚರ್ಚ್‌ ಸ್ಟ್ರೀಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಿದ ಹಿನ್ನೆಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಹೆಚ್ಚಿನ ಜನರು ಈ ಕಡೆ ಸುಳಿಯಲಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಮತ್ತೊಂದೆಡೆ ನೆರೆದಿದ್ದವರಿಗೂ ಕೂಡ ಸಂಭ್ರಮಾಚರಣೆಯಲ್ಲಿ ಹೆಚ್ಚಾಗಿ ಭಾಗವಹಿಸಲು ಪೊಲೀಸರು ಅವಕಾಶ ನೀಡಲಿಲ್ಲ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆ ಮತ್ತು ಚರ್ಚ್‌ ಸ್ಟ್ರೀಟ್‌ಗಳಲ್ಲಿ ಬ್ಯಾರಿಕೇಡ್‌

ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆ ಮತ್ತು ಚರ್ಚ್‌ ಸ್ಟ್ರೀಟ್‌ಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಜನರನ್ನು ನಿಲ್ಲಲು ಬಿಡಲಿಲ್ಲ. ಒಮ್ಮೆ ಈ ರಸ್ತೆಗಳಿಗೆ ಎಂಟ್ರಿಯಾದವರು 3 ಕಿಲೋ ಮೀಟರ್‌ಗಳವರೆ ಹೋಗಿ ಎಕ್ಸಿಟ್‌ ಆಗಬೇಕಿತ್ತು. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಗೊಂದಲ ಉಂಟಾಗಿತ್ತು.

ಸರಿಯಾದ ಆಗಮನ ಮತ್ತು ನಿರ್ಗಮನ ವ್ಯವಸ್ಥೆ ಇಲ್ಲದಿದ್ದರಿಂದ ಜನರು ಏಕಮುಖವಾಗಿಯೇ ಹೋಗಬೇಕಾಯಿತು. ಮತ್ತೆ ಕೆಲವರನ್ನು ಇಲ್ಲಿನ ರಸ್ತೆಗೆ ಬರಲು ಪೊಲೀಸರು ಬಿಡಲಿಲ್ಲ ಎಂಬ ಆರೋಪಗಳು ಕೇಳಿಬಂದಿದೆ. ಈ ಸುಖಕ್ಕೆ ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆ ಮತ್ತು ಚರ್ಚ್‌ ಸ್ಟ್ರೀಟ್‌ಗೆ ಏಕೆ ಬರಬೇಕಿತ್ತು ಎಂಬ ಪ್ರಶ್ನೆಯನ್ನು ನೆಟ್ಟಿಗರು ಎತ್ತಿದ್ದಾರೆ. ಈ ಬಾರಿ ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆಗೆ ಬಂದವರ ಅನುಭವ ಯಾವುದೋ ಜಾತ್ರೆಗೆ ಹೋಗಿ ಬಂದಂತೆ ಆಯಿತು ಅಷ್ಟೇ. ಕಳೆದ ಬಾರಿಯಂತೆ ಸಂಭ್ರಮಾಚರಣೆಗೆ ಆಸ್ಪದವೇ ಇರಲಿಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಕಟ್ಟುನಿಟ್ಟಿನ ಕ್ರಮದ ಹೆಸರಿನಲ್ಲಿ ನಮ್ಮ ಸಂಭ್ರಮಾಚರಣೆಯನ್ನು ಕಿತ್ತುಕೊಂಡರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಹಾಕಿ ಟ್ರೋಲ್‌:

ಕೆಲವರು ಸಾಮಾಜಿಕ ಜಾಲತಾಣದಲ್ಲಿ ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆ ಮತ್ತು ಚರ್ಚ್‌ಸ್ಟ್ರೀಟ್‌ಗಳಲ್ಲಿನ ವಿಡಿಯೋ ಹಾಕಿ ಸುಮ್ಮೆ ಜಾತ್ರೆಗೆ ಹೋಗಿ ಬಂದಂತೆ ಆಯ್ತು ಎಂದು ಟ್ರೋಲ್‌ಗಳನ್ನು ಮಾಡಿದ್ದಾರೆ.

 

PREV
Read more Articles on
click me!

Recommended Stories

ಹೊಸ ವರ್ಷಾಚರಣೆಯ ಅಮಲಿನಲ್ಲಿ ಕಿರಿಕ್‌ ಪಾರ್ಟಿ : ಬೆಂಗ್ಳೂರಲ್ಲಿ ಏನೇನಾಯ್ತು?
Karnataka News Live: ಬೆಂಗಳೂರು - 9 ಟನ್‌ ಮದ್ಯದ ಬಾಟಲ್‌, ಚಪ್ಪಲಿ ರಾಶಿ ತೆರವು