'ಮಳೆ ನೀಡಿದ ಶಾಪ ನಮ್ಮೂರು ಈಗ ದ್ವೀಪ'!

By Web DeskFirst Published Aug 11, 2019, 11:27 AM IST
Highlights

ಮಳೆ ಚಚ್ಚುತ್ತಿದೆ, ಬದುಕು ಕೊಚ್ಚಿಹೋಗುತ್ತಿದೆ. ನೆಲಮುಗಿಲು ಒಂದಾದಂತೆ ಕುಂಭದ್ರೋಣ ಮಳೆ ಮುಸಲಧಾರೆಯಾಗುತ್ತಿದೆ. ಇಂಥ ಮಳೆಯನ್ನು ನಾವು ನೋಡೇ ಇಲ್ಲ ಅನ್ನುತ್ತಾರೆ ಹಿರಿಯರು. 

ಪ್ರಸಾಶ್ ನಲೋಡೆ

ನಮ್ಮೂರು ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಮುನವಳ್ಳಿ ಗ್ರಾಮ. ಮಲಪ್ರಭಾ ನದಿಯ ಪ್ರವಾಹಕ್ಕೆ ಊರಿಗೆ ಊರೇ ಮುಳುಗಿದೆ. ನಮ್ಮೂರಿನ ಮೂರು ಜನ ತೀರಿಕೊಂಡಿದ್ದಾರೆ. ನಮ್ಮ ಮನೆಯೂ ಹೊಳೆದಂಡೆಯಲ್ಲೇ ಇದೆ.

ಮೊದಲೇ ಮುನ್ನೆಚ್ಚರಿಕೆ ವಹಿಸಿದ್ದರೆ ಪ್ರವಾಹದ ಅಪಾಯ ತಪ್ಪುತ್ತಿತ್ತು!

ನಾವು ಮನೆಮಠ ಬಿಟ್ಟು ಗಂಜೀಕೇಂದ್ರಕ್ಕೆ ಹೋಗಿದ್ದೆವು. ಮೂರು ದಿನ ರಾತ್ರಿ ಅಲ್ಲೇ ಇದ್ದೆವು. ಇವತ್ತು (ಶನಿವಾರ) ನೀರಿನ ಮಟ್ಟ ಸ್ವಲ್ಪ ಕಡಿಮೆಯಿತ್ತು. ಅಬ್ಬಾ ಎಲ್ಲ ಮುಗಿಯಿಲ್ಲಾ
ಅಂತ ನಿಟ್ಟುಸಿರು ಬಿಡಲಿಕ್ಕಿಲ್ಲ. ಬೆಳ್ಳಂಬೆಳಗ್ಗೆ 70 ಸಾವಿರ ಕ್ಯೂಸೆಕ್ಸ್ ನೀರು ಹೊರಬಿಟ್ಟರು. ಊರು ಮತ್ತೆ ನೀರೊಳಗೆ ಸೇರಿ ಹೋಯಿತು. ನಮ್ಮೂರು ಮುನವಳ್ಳಿ ಹಲವು ಮನೆಗಳು ಮುಳುಗಿವೆ. ಅಕ್ಕಪಕ್ಕದ ಹಳ್ಳಿಗಳೆಲ್ಲ ಮುಳುಗಿವೆ. ನಮ್ಮದು ಕಬ್ಬು ಬೆಳೆಯೋ ಏರಿಯಾ, ಬೆಳೆದ ಕಬ್ಬು ಮಳೆಗೆ ಆಹುತಿಯಾಗಿದೆ. ಮನೆಗಳು ಕಿತ್ತುಕೊಂಡು ಹೋಗಿದ್ದಾವೆ. ಇದನ್ನು ದನಗಳ ಪಾಡಂತೂ ಹೇಳೋದೇ ಬೇಡ. ಮೊನ್ನೆ ನಮ್ಮೂರಿನ ಹೊಲಗಳಲ್ಲಿ ಮೇಯಲಿಕ್ಕೆ ಅಂತ ದನಗಳನ್ನು ಕಟ್ಟಿದ್ದರು. ಹಠಾತ್ತನೆ ಬಂದ ಪ್ರವಾಹ ನೋಡಿ ಜನರೆಲ್ಲ ಹೆದರಿ ಓಡಿಹೋಗಿದ್ದಾರೆ. ದನಕರುಗಳು ಕಣ್ಣೆದುರು ಹರಿದುಬಂದ ಮಹಾಪ್ರವಾಹವನ್ನು ಕಂಡು ಬೆಚ್ಚಿ ಅರಚಿದ್ದೇ ಬಂತು, ಜೀವ ಭಯದಲ್ಲಿ ಯಾರೂ ಇವುಗಳ ನೆರವಿಗೆ ಬರಲಿಲ್ಲ. ಸುಮಾರು ಹದಿನೈದು ಇಪ್ಪತ್ತು ಹಸು ಕರುಗಳು ನೋಡ ನೋಡುತ್ತಿದ್ದ ಹಾಗೆ ಪ್ರವಾಹಕ್ಕೆ ಬಲಿಯಾದವು!

ಬೆಳಿಗ್ಗೆ ಎದ್ದು ಬಾಗಿಲು ತೆರೆದರೆ ಕೆಳಮನೆಯಲ್ಲಿ ನೀರೋ ನೀರು!

ಹಿಂದೆಂದೂ ಕಂಡಿಲ್ಲ ಇಂಥದ್ದನ್ನು!: ಇಂಥ ಪ್ರವಾಹವನ್ನು ನಮ್ಮೂರು ಹಿಂದೆಂದೂ ಕಂಡಿಲ್ಲ. ಇಷ್ಟು ನೀರು ಬಂದಿದ್ದು ಯಾವಾಗೂ ಗೊತ್ತೇ ಇಲ್ಲ ಅಂತಾರೆ ನಮ್ಮೂರಿನ ಹಿರಿಯರು. ಸಾಮಾನ್ಯ 10 ಸಾವಿರದಿಂದ 18 ಸಾವಿರ ಕ್ಯೂಸೆಕ್ಸ್‌ವರೆಗೆ ನೀರನ್ನು ಹೊರಬಿಡುತ್ತಿದ್ದರು. ಈ ಬಾರಿ 1 ಲಕ್ಷ 20 ಸಾವಿರ ಕ್ಯೂಸೆಕ್ಸ್ ನೀರು ಹೊರಬಿಟ್ಟಿದ್ದಾರೆ ಅಂದರೆ ನಮ್ಮೂರಿನ ಸ್ಥಿತಿ ಹೇಗಿರಬಹುದು ಊಹಿಸಿ! ನಮ್ಮೂರಿನ ಪಂಚಲಿಂಗೇಶ್ವರ ದೇವಸ್ಥಾನವೂ ಮುಳುಗಿದೆ.

ಎಲ್ಲಿ ಹೋಗಬೇಕಾದರೂ ದೋಣಿಯಲ್ಲೇ ಹೋಗಬೇಕು!

ಹಳ್ಳಿಜನರ ಸಹಾಯ: ನಮ್ಮೂರಿನ ಶಾಸಕರು ಪ್ರವಾಹ ಶುರುವಾದಾಗಿನಿಂದ ನಮ್ಮ ಜೊತೆಗಿದ್ದಾರೆ. ಮಿಲಿಟರಿಯವರು ರಕ್ಷಣಾ ಕಾರ್ಯ ಮಾಡುತ್ತಿದ್ದಾರೆ. ಸದ್ಯಕ್ಕೆ ನಮ್ಮ ಸಹಾಯಕ್ಕೆ ಬಂದಿರುವುದು ಸುತ್ತಲಿನ ಹಳ್ಳಿಯ ಜನ. ಜೊತೆಗೆ ನಮ್ಮೂರಿನವರಲ್ಲೇ ಯಾವ ಮನೆಯಲ್ಲಿ ಅನ್ನ, ಧಾನ್ಯವಿದೆಯೋ ಅವರದನ್ನು ದಿಕ್ಕೆಟ್ಟವರಿಗೆ ನೀಡುತ್ತಿದ್ದಾರೆ. ಪ್ರವಾಹಕ್ಕೆ ತುತ್ತಾಗದ ಹಳ್ಳಿಯ ಜನ ಬಂದು ಪ್ರವಾಹಪೀಡಿತ ಜಾಗಗಳ ಜನರ ಸಹಾಯಕ್ಕೆ ಬರುತ್ತಿದ್ದಾರೆ. ಅದು ಬಿಟ್ಟರೆ ಪಟ್ಟಣದಿಂದ ನಮ್ಮೂರಿಗಿನ್ನೂ ನೆರವು ಬಂದಿಲ್ಲ. ನಮ್ಮೂರಿಗೆ ಬರುವ ಧಾರವಾಡ ಸವದತ್ತಿ ಮಾರ್ಗ ಬಂದ್ ಆಗಿದೆ. ಹಾಗಾಗಿ ಬಳಸಿಕೊಂಡು ಬರಬೇಕು. ದ್ವಿಚಕ್ರ ವಾಹನ ಕಷ್ಟದಲ್ಲಿ ಬರುತ್ತೆ. ಬಸ್, ದೊಡ್ಡ ವಾಹನಗಳ್ಯಾವುವೂ ಬರಲ್ಲ. ಒಂಥರ ದ್ವೀಪದೊಳಗೆ ಸಿಕ್ಕಾಕೊಂಡ ಹಾಗಿದೆ ನಮ್ಮೂರಿನ ಪರಿಸ್ಥಿತಿ. 
 

click me!