
ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಸಮೀಪ ಮಲಪ್ರಭಾ ನದಿಯಲ್ಲಿ ಅನುಮಾನಾಸ್ಪದವಾಗಿ ಮೂರು ಬೈಕ್‌ಗಳು ಪತ್ತೆಯಾಗಿವೆ. ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಬೈಕ್‌ಗಳು ಸವದತ್ತಿ ಪಟ್ಟಣದಲ್ಲಿ ನಡೆದ ಚಿನ್ನದಂಗಡಿ ಕಳ್ಳತನ ಪ್ರಕರಣದ ಆರೋಪಿಗಳ ಬೈಕ್‌ಗಳು ಎಂಬ ಶಂಕೆ ವ್ಯಕ್ತವಾಗಿದೆ.
ನದಿಯ ಸೇತುವೆ ಮೇಲಿಂದ ದುಷ್ಕರ್ಮಿಗಳು ಬೈಕ್‌ಗಳನ್ನು ಎಸೆದು ಹೋಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಬೈಕ್‌ಗಳನ್ನು ಕದ್ದು ಕಳ್ಳತನ ಕೃತ್ಯಗಳಿಗೆ ಬಳಸಿದ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕಳ್ಳರು ನದಿಗೆ ಎಸೆದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರ ಸಹಕಾರದೊಂದಿಗೆ ನದಿಯ ನೀರಿನಿಂದ ಮೂರು ಬೈಕ್‌ಗಳನ್ನು ಹೊರತೆಗೆದರು. ಕೆಎ 25 ಜಿ1459, ಕೆಎ24 ಜೆ 7907 ಸಂಖ್ಯೆಯ ಎರಡು ಬೈಕ್‌ಗಳು ಹಾಗೂ ಒಂದು ನಂಬರ್ ಪ್ಲೇಟ್ ಇಲ್ಲದ ಬೈಕ್ ಪತ್ತೆಯಾಗಿವೆ. ನದಿಯಲ್ಲಿ ಬೈಕ್‌ಗಳು ಬಿದ್ದಿರುವುದನ್ನು ಕಂಡ ಸ್ಥಳೀಯರು ಬೆಚ್ಚಿಬಿದ್ದರು.
ಕಳೆದ ಡಿಸೆಂಬರ್ 22ರಂದು ಸವದತ್ತಿ ಪಟ್ಟಣದಲ್ಲಿ ಚಡ್ಡಿ ಗ್ಯಾಂಗ್ ಚಿನ್ನದಂಗಡಿಗೆ ನುಗ್ಗಿ ಸುಮಾರು ₹12 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿತ್ತು. ಕಳ್ಳತನಕ್ಕೆ ಬಳಸಿದ್ದ ಮೂರು ಬೈಕ್‌ಗಳನ್ನು ಆರೋಪಿಗಳು ಬಳಿಕ ಮಲಪ್ರಭಾ ನದಿಗೆ ಎಸೆದು ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳ್ಳತನ ನಡೆದ ಸುಮಾರು ಒಂದೂವರೆ ತಿಂಗಳ ಬಳಿಕ ಈ ಬೈಕ್‌ಗಳು ಪತ್ತೆಯಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕಳ್ಳರ ಕೃತ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಕುರಿತು ಬೈಲಹೊಂಗಲ ಹಾಗೂ ಸವದತ್ತಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.