ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟ ವಾಪಸ್: ₹3,600 ದರಕ್ಕೆ ರೈತರು ಒಪ್ಪಿಗೆ, ನಾಳೆ ಸಕ್ಕರೆ ಕಾರ್ಖಾನೆಗಳು ಪುನರಾರಂಭ!

Published : Nov 05, 2026, 08:49 PM IST
Belagavi Sugarcane former protest

ಸಾರಾಂಶ

ಬೆಳಗಾವಿಯಲ್ಲಿ ಕಳೆದ 12 ದಿನಗಳಿಂದ ನಡೆಯುತ್ತಿದ್ದ ಕಬ್ಬು ಬೆಳೆಗಾರರ ಬೃಹತ್ ಪ್ರತಿಭಟನೆ ಕೊನೆಗೂ ಅಂತ್ಯಗೊಂಡಿದೆ. ಪ್ರತಿ ಟನ್ ಕಬ್ಬಿಗೆ ₹3,600 ನಿಗದಿಪಡಿಸಿದ ನಂತರ ರೈತರು ಹೋರಾಟವನ್ನು ವಾಪಸ್ ಪಡೆದಿದ್ದಾರೆ. ಆದರೆ, ಸರ್ಕಾರ ₹1,000 ಪ್ರೋತ್ಸಾಹಧನ ನೀಡದಿದ್ದರೆ ಚಳಿಗಾಲದ ಅಧಿವೇಶನ ತಡೆಯುವ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ (ನ.05): ರಾಜ್ಯಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಕಳೆದ 12 ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಕಬ್ಬು ಬೆಳೆಗಾರರ ಬೃಹತ್ ಹೋರಾಟ ಕೊನೆಗೂ ಅಂತ್ಯಗೊಂಡಿದೆ. ಪ್ರತಿ ಟನ್ ಕಬ್ಬಿಗೆ ₹5,500 ನಿಗದಿ ಮಾಡಬೇಕೆಂದು ಪಟ್ಟು ಹಿಡಿದಿದ್ದ ರೈತರು, ಸರ್ಕಾರ ಹಾಗೂ ಕಾರ್ಖಾನೆಗಳ ಆಡಳಿತ ಮಂಡಳಿ ನಿಗದಿಪಡಿಸಿದ ₹3,600 ಬೆಲೆಗೆ ತೃಪ್ತಿಗೊಂಡು ಗುರುವಾರ ಸಂಜೆ ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡಿದ್ದಾರೆ.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಅವರ ಯಶಸ್ವಿ ಮಧ್ಯಸ್ಥಿಕೆಯಲ್ಲಿ ಜಿಲ್ಲಾಡಳಿತದಿಂದ ಒಪ್ಪಂದದ ಅಧಿಕೃತ ದಾಖಲೆಗಳನ್ನು ಪಡೆದುಕೊಂಡ ರೈತ ಮುಖಂಡರು ಹೋರಾಟಕ್ಕೆ ತೆರೆ ಎಳೆದಿದ್ದಾರೆ.

ನಾಳೆಯಿಂದ ಸಕ್ಕರೆ ಕಾರ್ಖಾನೆಗಳು ಪುನರಾರಂಭ: ಚೂನಪ್ಪ ಪೂಜಾರಿ

ಬೆಳಗಾವಿಯ ಪೊಲೀಸ್ ಕ್ವಾರ್ಟರ್ಸ್‌ನ ವೀರಭದ್ರ ದೇವಸ್ಥಾನದ ಆವರಣದಲ್ಲಿ (ಬೆಳಗ್ಗೆಯಿಂದ ಪೊಲೀಸರ ವಶದಲ್ಲಿದ್ದು ಬಿಡುಗಡೆಯಾದ ಬಳಿಕ) ಮಾಧ್ಯಮಗಳೊಂದಿಗೆ ಮಾತನಾಡಿದ ರೈತ ಮುಖಂಡ ಚೂನಪ್ಪ ಪೂಜಾರಿ, 'ನಾಳೆಯಿಂದಲೇ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭ ಮಾಡಲಿವೆ. ರೈತರು ಯಾರೂ ಕೂಡ ಕಾರ್ಖಾನೆಗಳ ಕಾರ್ಯಾಚರಣೆಗೆ ಅಡ್ಡಿಪಡಿಸಬಾರದು' ಎಂದು ರೈತರಿಗೆ ಮನವಿ ಮಾಡಿದರು.

ಗುರ್ಲಾಪುರದಲ್ಲೂ ಹೋರಾಟ ವಾಪಸ್: 'ಗುರ್ಲಾಪುರದಲ್ಲಿ ನಡೆಯುತ್ತಿದ್ದ ಧರಣಿಯನ್ನೂ ಹಿಂಪಡೆದಿದ್ದೇವೆ. ನಾಳೆ ಬೆಳಿಗ್ಗೆ ಗುರ್ಲಾಪುರದಲ್ಲಿ ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ ಗೂರುಜಿ ನೇತೃತ್ವದಲ್ಲಿ ರೈತರ ಮಹತ್ವದ ಸಭೆ ನಡೆಯಲಿದ್ದು, ಮುಂದಿನ ಆಗು-ಹೋಗುಗಳ ಬಗ್ಗೆ ಚರ್ಚಿಸಲಾಗುವುದು. ರಾಜ್ಯದ ವಿವಿಧ ಭಾಗಗಳಲ್ಲಿ ಕಬ್ಬಿನ ದರಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ಎಲ್ಲಾ ರೈತ ಬಾಂಧವರು ಹೋರಾಟ ವಾಪಸ್ ಪಡೆಯಬೇಕೆಂದು ಚೂನಪ್ಪ ಪೂಜಾರಿ ಕೈಮುಗಿದು ವಿನಂತಿಸಿಕೊಂಡರು.

ಸತೀಶ್ ಜಾರಕಿಹೊಳಿ ಮಧ್ಯಸ್ಥಿಕೆ – ಲಾಂಭಾಂಶಕ್ಕೂ ಸಿಕ್ಕಿತು ಒಪ್ಪಿಗೆ!

ಕಬ್ಬಿನ ದರ ನಿಗದಿಯ ಕುರಿತು ಮಾತನಾಡಿದ ರೈತ ಮುಖಂಡರು, 'ನಾವು ಪ್ರತಿ ಟನ್ ಕಬ್ಬಿಗೆ ₹3,800 ಕೊಡುವಂತೆ ಪಟ್ಟು ಹಿಡಿದಿದ್ದೆವು. ಆದರೆ ಸಚಿವ ಸತೀಶ್ ಜಾರಕಿಹೊಳಿ ಅವರು ಗಂಭೀರವಾಗಿ ಮಧ್ಯಸ್ಥಿಕೆ ವಹಿಸಿ ಕಾರ್ಖಾನೆ ಮಾಲೀಕರೊಂದಿಗೆ ಮಾತನಾಡಿ ₹3,600 ದರ ನಿಗದಿಪಡಿಸಿದ್ದಾರೆ. ಈ ದರ ನಿಗದಿ ನಮಗೆ ತೃಪ್ತಿ ತಂದಿದೆ ಎಂದರು. 'ಸಕ್ಕರೆ ಮಾರಾಟದ ಮೇಲೆಯೂ ನಮಗೆ ಲಾಭಾಂಶ ಬರಲಿದೆ. ಸಕ್ಕರೆ ಬೆಲೆ ₹50 ತಲುಪಿದರೆ ಅದಕ್ಕೆ ಹೆಚ್ಚುವರಿಯಾಗಿ ₹500 ಹಣ ಸಿಗಲಿದೆ. ಹಿಂದೆ ಎಂದೂ ಸಿಗದ ಈ ಲಾಭಾಂಶಕ್ಕೆ ಕಾರ್ಖಾನೆಯವರು ಒಪ್ಪಿಕೊಂಡಿರುವುದು ನಮಗೆ ಮೊದಲ ಹಂತದ ದೊಡ್ಡ ಜಯ' ಎಂದು ಹೇಳಿದರು.

ಸಿಎಂ 1,000 ರೂ. ಪ್ರೋತ್ಸಾಹಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡುವುದಿಲ್ಲ!

ಮೊದಲ ಹಂತದ ಹೋರಾಟ ಸಫಲವಾಗಿದ್ದರೂ, ಸರ್ಕಾರದ ವಿರುದ್ಧದ ಎರಡನೇ ಹಂತದ ಹೋರಾಟದ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ. 'ಸರ್ಕಾರದಿಂದ ಪ್ರತಿಯೊಬ್ಬ ಕಬ್ಬು ಬೆಳೆಗಾರನಿಗೆ ₹1,000 ಪ್ರೋತ್ಸಾಹಧನ ನೀಡುವವರೆಗೂ ನಾವು ಸುಮ್ಮನಿರುವುದಿಲ್ಲ. ಮುಖ್ಯಮಂತ್ರಿಗಳು ತಕ್ಷಣವೇ ಈ ₹1,000 ಪ್ರೋತ್ಸಾಹಧನವನ್ನು ಘೋಷಣೆ ಮಾಡಬೇಕು. ಒಂದು ವೇಳೆ ಸರ್ಕಾರ ಸ್ಪಂದಿಸದಿದ್ದರೆ ಬೆಳಗಾವಿಯಲ್ಲಿ ನಡೆಯಲಿರುವ ಮುಂಬರುವ ಚಳಿಗಾಲದ ಅಧಿವೇಶನವನ್ನು ನಡೆಸಲು ಬಿಡುವುದಿಲ್ಲ' ಎಂದು ಚೂನಪ್ಪ ಪೂಜಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

PREV
Read more Articles on
click me!

Recommended Stories

ಕೊಪ್ಪಳದಲ್ಲಿ SECI ಸಂಸ್ಥೆಗಾಗಿ 300 ಮೆಗಾವ್ಯಾಟ್‌ ಸೋಲಾರ್‌ ಪ್ರಾಜೆಕ್ಟ್‌ ಪೂರ್ಣಗೊಳಿಸಿದ ಟಾಟಾ ಪವರ್‌, ಗದಗದಲ್ಲಿ ಸಬ್‌ಸ್ಟೇಷನ್‌
ಕರ್ನಾಟಕಕ್ಕೆ ಮತ್ತೊಂದು ಬಿಗ್ ಇನ್ವೆಸ್ಟ್‌ಮೆಂಟ್, 380 ಕೋಟಿ ಬಂಡವಾಳದ ಜೊತೆಗೆ ಬೆಂಗಳೂರಿಗೆ ದೈತ್ಯ ಕಂಪನಿ ಎಂಟ್ರಿ