
ಬೆಂಗಳೂರು (ನ.5): ರಾಜ್ಯ ಕಾಂಗ್ರೆಸ್ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ 'ಗೃಹಲಕ್ಷ್ಮಿ' ಯೋಜನೆಯ (Gruhalakshmi Scheme) ಫಲಾನುಭವಿ ಮಹಿಳೆಯರಿಗೆ ಎರಡು ತಿಂಗಳ ಮಾಸಿಕ ಧನಸಹಾಯ ತಲುಪದಿರುವುದಕ್ಕೆ 'ಆರ್ಥಿಕ ಕೊರತೆ ಮತ್ತು ಹಣಕಾಸಿನ ಸಮಸ್ಯೆಯೇ ಪ್ರಮುಖ ಕಾರಣ' ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ (Karnataka High Court) ಸಲ್ಲಿಸಿರುವ ಅಧಿಕೃತ ಪ್ರಮಾಣಪತ್ರದಲ್ಲಿ ಒಪ್ಪಿಕೊಂಡಿದೆ.
2025 ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣವು ಫಲಾನುಭವಿಗಳ ಖಾತೆಗೆ ಇದುವರೆಗೆ ತಲುಪಿಲ್ಲ. ಹಣಕಾಸಿನ ತೀವ್ರ ಅಭಾವ ಎದುರಾದ ಹಿನ್ನೆಲೆಯಲ್ಲಿ ಈ ಎರಡು ತಿಂಗಳ ಕಂತನ್ನು ವಿತರಿಸಲು ಸಾಧ್ಯವಾಗಿಲ್ಲ ಎಂದು ಸರ್ಕಾರದ ಪರವಾಗಿ ಸ್ತ್ರೀಶಕ್ತಿ ಯೋಜನಾಧಿಕಾರಿ ಸೋನಲ್ ಎಸ್. ಐಗಲ್ (Sonal S. Aigal) ಅವರು ಹೈಕೋರ್ಟ್‌ಗೆ ಪ್ರಮಾಣಪತ್ರ (Affidavit) ಸಲ್ಲಿಸುವ ಮೂಲಕ ಸರ್ಕಾರದ ಸಾಲದ ಆರ್ಥಿಕ ಬಿಕ್ಕಟ್ಟನ್ನು ಬಹಿರಂಗಪಡಿಸಿದ್ದಾರೆ.
ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ರಾಜ್ಯ ಸರ್ಕಾರವು ನೀಡಿರುವ ಕಾನೂನಾತ್ಮಕ ವಾದಗಳು ಗಮನಾರ್ಹವಾಗಿವೆ. ಗೃಹಲಕ್ಷ್ಮಿ ಯೋಜನೆಯು ನಾಡಿನ ಮಹಿಳೆಯರ ಅನುಕೂಲ ಹಾಗೂ ಅವರ ಜೀವನ ಮಟ್ಟ ಸುಧಾರಣೆಗಾಗಿ ಸರ್ಕಾರ ತನ್ನ ಸ್ವಂತ ಇಚ್ಛೆಯಿಂದ ಜಾರಿಗೆ ತಂದಿರುವ ಒಂದು ಸಮಾಜ ಕಲ್ಯಾಣ ಯೋಜನೆಯಾಗಿದೆ. ಈ ಯೋಜನೆಯಡಿ ಸರ್ಕಾರದ ಹಣಕಾಸಿನ ನೆರವನ್ನು ಪಡೆಯುವುದನ್ನು ಫಲಾನುಭವಿಯ 'ಕಾನೂನುಬದ್ಧ ನಿರೀಕ್ಷೆಯ ಹಕ್ಕು' (Legitimate Expectation Right) ಅಥವಾ ಕಡ್ಡಾಯವಾಗಿ ದೊರೆಯಬೇಕಾದ ಹಕ್ಕು ಎಂದು ಪರಿಗಣಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
ಇದನ್ನೇ ಆಧಾರವಾಗಿರಿಸಿಕೊಂಡು, ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಲು ಆದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ವಜಾಗೊಳಿಸುವಂತೆ ಸರ್ಕಾರ ಹೈಕೋರ್ಟ್‌ಗೆ ಮನವಿ ಮಾಡಿದೆ.
ಬೆಂಗಳೂರಿನ ಕಮಲಾನಗರದ ನಿವಾಸಿ ಆರ್. ಗಂಗಾ ಹಾಗೂ ನಂದಿನಿ ಲೇಔಟ್‌ನ ಜಿ.ಡಿ. ಪವಿತ್ರಾ ಎಂಬುವರು ಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಬಾಕಿ ಹಣವನ್ನು ತಕ್ಷಣವೇ ಫಲಾನುಭವಿಗಳ ಖಾತೆಗೆ ಜಮಾ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸಿದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ವಿಭಾಗೀಯ ಪೀಠವು, ರಾಜ್ಯ ಸರ್ಕಾರ ಸಲ್ಲಿಸಿರುವ ಆಕ್ಷೇಪಣೆ ಹಾಗೂ ಪ್ರಮಾಣಪತ್ರಕ್ಕೆ ಪ್ರತಿಕ್ರಿಯೆ (Rejoinder) ನೀಡಲು ಅರ್ಜಿದಾರರಿಗೆ ಎರಡು ವಾರಗಳ ಕಾಲಾವಕಾಶ ನೀಡಿ ವಿಚಾರಣೆಯನ್ನು ಮುಂದೂಡಿದೆ. ರಾಜ್ಯ ಸರ್ಕಾರದ ಈ ಪ್ರಮಾಣಪತ್ರವು ಗೃಹಲಕ್ಷ್ಮಿ ಯೋಜನೆಯ ನೆರವನ್ನೇ ನೆಚ್ಚಿಕೊಂಡಿರುವ ಲಕ್ಷಾಂತರ ಗೃಹಿಣಿಯರ ವಲಯದಲ್ಲಿ ತೀವ್ರ ನಿರಾಶೆ ಹಾಗೂ ಆತಂಕವನ್ನು ಮೂಡಿಸಿದೆ.