ಪ್ರತಿ ಟನ್‌ ಕಬ್ಬಿಗೆ ₹4000ಕ್ಕೂ ಒಪ್ಪದ ರೈತರು ಕಬ್ಬು ಸಂಧಾನ ಸಭೆ ವಿಫಲ, ರೈತರ ಮುಂದಿನ ನಿರ್ಧಾರ ಏನು?

Kannadaprabha News   | Kannada Prabha
Published : Nov 04, 2026, 06:39 AM IST
Belagavi farmers protest

ಸಾರಾಂಶ

ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ನಡೆದ ಕಬ್ಬು ದರ ನಿಗದಿ ಸಂಧಾನ ಸಭೆ ವಿಫಲವಾಗಿದೆ. ಕಾರ್ಖಾನೆಗಳು ನೀಡಿದ ₹3,500 ಮೊದಲ ಕಂತಿನ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದ್ದು, ₹4,000ಕ್ಕೆ ಪಟ್ಟು ಹಿಡಿದಿದ್ದಾರೆ.ರೈತರು ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದಾರೆ.

ಬೆಳಗಾವಿ (ನ.4): ಕಬ್ಬಿನ ದರ ನಿಗದಿ ಸಂಬಂಧ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಂಗಳವಾರ ನಡೆಸಿದ ಮೂರು ಸುತ್ತಿನ ಸಂಧಾನ ಸಭೆಗಳು ಫಲಪ್ರದವಾಗಲಿಲ್ಲ. ಕಾರ್ಖಾನೆಗಳು ಮುಂದಿಟ್ಟ ₹3,500 ಮೊದಲ ಕಂತು ಹಾಗೂ ಸಕ್ಕರೆ ಮಾರಾಟ ದರ ಏರಿದರೆ 2ನೇ ಕಂತಿನಲ್ಲಿ ₹500 ಎರಡನೇ ಕಂತಿನ ಪ್ರಸ್ತಾಪವನ್ನು ರೈತ ಮುಖಂಡರು ಸಾರಾಸಗಟಾಗಿ ತಿರಸ್ಕರಿಸಿದ್ದರಿಂದ ದರ ನಿಗದಿ ಕಗ್ಗಂಟು ಮುಂದುವರಿದಿದೆ. ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದುವರಿಸಲು ರೈತರು ನಿರ್ಧರಿಸಿದ್ದಾರೆ.

ಬೆಳಗಾವಿ ಸಭೆಯಲ್ಲಿ ಏನಾಯ್ತು?

ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಬೆಳಗ್ಗೆಯಿಂದ ರಾತ್ರಿ 10 ಗಂಟೆಯವರೆಗೆ ಮೂರು ಸುತ್ತಿನಲ್ಲಿ ಸುದೀರ್ಘ ಮಾತುಕತೆ ನಡೆಯಿತು. ಆದರೆ, ಉಭಯ ಪಕ್ಷಗಳ ನಡುವೆ ಒಮ್ಮತ ಮೂಡಲಿಲ್ಲ. ಪ್ರತಿ ಟನ್ ಕಬ್ಬಿಗೆ ಮೊದಲ ಕಂತಿನಲ್ಲಿ ₹3,500 ನೀಡುತ್ತೇವೆ. ಸಕ್ಕರೆಯ ಮಾರಾಟ ದರ ಪ್ರತಿ ಕೆ.ಜಿ.ಗೆ ₹50ಕ್ಕೆ ಏರಿಕೆಯಾದರೆ ಎರಡನೇ ಕಂತಿನಲ್ಲಿ ಹೆಚ್ಚುವರಿಯಾಗಿ ₹500 ನೀಡುತ್ತೇವೆ. ಒಟ್ಟು ₹4,000 ನೀಡಲು ಸಾಧ್ಯ ಎಂದು ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಪ್ರಸ್ತಾಪಿಸಿದರು.

ಆದರೆ, ಇದಕ್ಕೆ ಒಪ್ಪದ ರೈತ ಮುಖಂಡರು, ಈಗಾಗಲೇ ಮಾರುಕಟ್ಟೆಯಲ್ಲಿ ಸಕ್ಕರೆಯ ಬೆಲೆ ಪ್ರತಿ ಕೆ.ಜಿ.ಗೆ ₹50ಕ್ಕಿಂತ ಹೆಚ್ಚಾಗಿದೆ. ಸಕ್ಕರೆಯ ಬೆಲೆ ₹31ಇದ್ದಾಗಲೂ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ₹3,500 ನೀಡಿದ್ದವು. ಈಗ ಸಕ್ಕರೆಯ ಬೆಲೆ ಹೆಚ್ಚಾಗಿರುವಾಗ ₹3,500 ನೀಡುವ ಪ್ರಸ್ತಾಪ ಒಪ್ಪಲು ಸಾಧ್ಯವಿಲ್ಲ. ಮೊದಲ ಕಂತಿನಲ್ಲೇ ₹4,000 ನೀಡಬೇಕು. ಎರಡನೇ ಕಂತಿನಲ್ಲಿ ಸಕ್ಕರೆಯ ಮಾರಾಟ ದರಕ್ಕೆ ಅನುಗುಣವಾಗಿ ಹೆಚ್ಚುವರಿ ಹಣ ನೀಡಬೇಕು ಎಂದು ಪಟ್ಟು ಹಿಡಿದರು. ಇದರಿಂದಾಗಿ ಸಭೆಯಲ್ಲಿ ಯಾವುದೇ ಒಮ್ಮತ ಮೂಡಲಿಲ್ಲ.

ಇಂದು ಮತ್ತೆ ಮಾತುಕತೆ ಸಾಧ್ಯತೆ:

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ ಜಾರಕಿಹೊಳಿ, ರೈತರ ಬೇಡಿಕೆಗಳು ಮತ್ತು ಕಾರ್ಖಾನೆಗಳ ವಾದಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ರೈತರ ಸಮಸ್ಯೆಗಳನ್ನು ಕಾರ್ಖಾನೆ ಮಾಲೀಕರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ರೈತರ ಬೇಡಿಕೆ ಒಂದು ರೀತಿಯಲ್ಲಿದ್ದರೆ, ಕಾರ್ಖಾನೆಗಳ ಬೇಡಿಕೆ ಮತ್ತೊಂದು ರೀತಿಯಲ್ಲಿದೆ. ಹೀಗಾಗಿ, ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ ಎಂದರು.

ರೈತ ಮುಖಂಡರ ಮನವಿ ಮೇರೆಗೆ ಸಭೆ ಕರೆಯಲಾಗಿತ್ತು. ಅಗತ್ಯಬಿದ್ದರೆ ಬುಧವಾರವೂ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿ, ದರ ನಿಗದಿ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ರೈತರ ಪರವಾಗಿ ನಮ್ಮ ಆಸಕ್ತಿ ಇದೆ. ಆದರೆ, ಕಾರ್ಖಾನೆಗಳ ಪರಿಸ್ಥಿತಿಯನ್ನೂ ಗಮನಿಸಬೇಕಿದೆ ಎಂದು ಹೇಳಿದರು.

ಪ್ರಸ್ತುತ ದರ ನಿಗದಿ ವಿಚಾರದಲ್ಲಿ ಸರ್ಕಾರದ ವತಿಯಿಂದ ಪ್ರೋತ್ಸಾಹಧನ ನೀಡುವ ಪ್ರಸ್ತಾಪ ಇಲ್ಲ. ಸಕ್ಕರೆ ಕನಿಷ್ಠ ಮಾರಾಟ ದರ (ಎಂಎಸ್‌ಪಿ) ಹೆಚ್ಚಳದ ವಿಚಾರ ಬೇರೆ. ಸಕ್ಕರೆಯ ಬೆಲೆ ಹೆಚ್ಚಾದರೆ ಅದರ ಪ್ರಯೋಜನವನ್ನು ರೈತರಿಗೆ ಕೊಡಿಸುವ ಪ್ರಯತ್ನ ಮಾಡಲಾಗುವುದು. ಕಾರ್ಖಾನೆಗಳ ಆರ್ಥಿಕ ಪರಿಸ್ಥಿತಿ ಒಂದೇ ರೀತಿಯಾಗಿಲ್ಲ. ಕೆಲವು ಕಾರ್ಖಾನೆಗಳು ನಷ್ಟದಲ್ಲಿದ್ದರೆ, ಇನ್ನು ಕೆಲವು ಲಾಭದಲ್ಲಿವೆ. ಸಹಕಾರಿ ಹಾಗೂ ಖಾಸಗಿ ಕಾರ್ಖಾನೆಗಳು ಸೇರಿದಂತೆ ಯಾರಿಗೂ ಹೊರೆಯಾಗದ ರೀತಿಯಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ ಎಂದರು.

ಎಲ್ಲ ಕಾರ್ಖಾನೆಗಳನ್ನೂ ಒಂದೇ ಮಾನದಂಡದಲ್ಲಿ ನೋಡಲು ಸಾಧ್ಯವಿಲ್ಲ. ರೈತ ಮುಖಂಡರಿಗೆ ಕಾರ್ಖಾನೆಗಳ ಪರಿಸ್ಥಿತಿಯನ್ನು ಮನವರಿಕೆ ಮಾಡಲಾಗಿದೆ. ದರದ ವಿಚಾರದಲ್ಲಿ ಇನ್ನೂ ಸಾಕಷ್ಟು ವ್ಯತ್ಯಾಸವಿದ್ದು, ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ನಿರ್ಧಾರಕ್ಕೆ ಬರಲು ಪ್ರಯತ್ನಿಸಲಾಗುವುದು. ರೈತರು ಒಪ್ಪಿಗೆ ಸೂಚಿಸದಿದ್ದರೆ ಸಮಸ್ಯೆ ಬಗೆಹರಿಸುವುದು ಕಷ್ಟ ಎಂದು ಹೇಳಿದರು.

PREV
Read more Articles on
click me!

Recommended Stories

ಅಡಕೆ-ವೀಳ್ಯೆದೆಲೆ ಸೇವನೆಯಿಂದ ಕ್ಯಾನ್ಸರ್ ಬರೋಲ್ಲ, ಗುಣವಾಗುತ್ತೆ: ತುಮ್‌ ಕೋಸ್ ಅಧ್ಯಕ್ಷರ ಅಚ್ಚರಿಯ ಹೇಳಿಕೆ! ಏನಿದು ಪೊಗಸಾರಂ?
ಬೇಡ್ತಿ ಅಘನಾಶಿನಿ ನದಿ ಜೋಡಣೆಗೆ ಭಾರೀ ಜನಾಕ್ರೋಶ, ವಿರೋಧದ ನಡುವೆ ಬೆಳಗ್ಗೆ ಹಾರಾಡಿದ ನಿಗೂಢ ವಿಮಾನ ಯಾವುದು?