
ಬೆಳಗಾವಿ (ಅ.02): ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಸರ್ಕಾರಿ ಬಸ್‌ಗಳಲ್ಲಿ ಜನದಟ್ಟಣೆ ಮಿತಿಮೀರುತ್ತಿದ್ದು, ಪ್ರಯಾಣಿಕರ ನಡುವೆ ಸಣ್ಣಪುಟ್ಟ ವಿಚಾರಗಳಿಗೂ ತೀವ್ರ ಘರ್ಷಣೆಗಳು ನಡೆಯುತ್ತಿವೆ. ಇದಕ್ಕೆ ನಿದರ್ಶನವೆಂಬಂತೆ, ಬೆಳಗಾವಿ ನಗರದ ಹೃದಯಭಾಗವಾದ ರಾಣಿ ಚನ್ನಮ್ಮ ವೃತ್ತದಲ್ಲಿ ಬಸ್‌ನಿಂದ ಇಳಿಯಲು ದಾರಿ ಬಿಡಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಮಹಿಳೆಯೆಂದು ನೋಡದೆ ನಡುರಸ್ತೆಯಲ್ಲೇ ಚಪ್ಪಲಿಯಿಂದ ಬಡಿದು, ಕಾಲಿನಿಂದ ಒದ್ದು ಅಮಾನವೀಯವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.
ಹಳಿಯಾಳದಿಂದ ಬೆಳಗಾವಿ ನಗರಕ್ಕೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಈ ಗಲಾಟೆ ಆರಂಭವಾಗಿದೆ. ಕಕ್ಕೇರಿ ನಿಲ್ದಾಣದಿಂದ ಮಹಿಳೆ ತನ್ನ ಕುಟುಂಬಸ್ಥರೊಂದಿಗೆ ಪ್ರಯಾಣ ಬೆಳೆಸಿದ್ದರು. ಬಸ್ ಬೆಳಗಾವಿಯ ಪ್ರಮುಖ ನಿಲ್ದಾಣವಾದ ಚನ್ನಮ್ಮ ವೃತ್ತಕ್ಕೆ ತಲುಪಿದಾಗ ಬಸ್‌ನಿಂದ ಕೆಳಗೆ ಇಳಿಯುವ ಸಂದರ್ಭದಲ್ಲಿ ದಾರಿ ಬಿಡುವ ವಿಚಾರವಾಗಿ ಮಹಿಳೆ ಹಾಗೂ ಅದೇ ಬಸ್‌ನಲ್ಲಿದ್ದ ಸಹಪ್ರಯಾಣಿಕನ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಬಸ್‌ನಲ್ಲಿದ್ದ ನೂಕುನುಗ್ಗಲಿನ ಸಿಟ್ಟನ್ನು ರಸ್ತೆಯಲ್ಲೇ ತೀರಿಸಿಕೊಂಡ ಆ ದುರುಳ, ಬಸ್‌ನಿಂದ ಇಳಿದ ನಂತರವೂ ಮಹಿಳೆಯ ಜೊತೆ ಜಗಳ ಮುಂದುವರಿಸಿದ್ದಾನೆ. ವಾಗ್ವಾದ ವಿಕೋಪಕ್ಕೆ ಹೋದಾಗ, ಮಹಿಳೆಯೆಂಬ ಪರಿವೆಯೂ ಇಲ್ಲದೆ ಕಾಲಿನಲ್ಲಿದ್ದ ಚಪ್ಪಲಿಯನ್ನು ತೆಗೆದು ಆಕೆಯ ಮುಖ ಮತ್ತು ದೇಹದ ಭಾಗಗಳಿಗೆ ಹಿಗ್ಗಾಮುಗ್ಗಾ ಬಡಿದಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಆಕೆಯನ್ನು ಕಾಲಿನಿಂದ ಒದ್ದು ಸಾರ್ವಜನಿಕವಾಗಿಯೇ ಗೂಂಡಾಗಿರಿ ಪ್ರದರ್ಶಿಸಿದ್ದಾನೆ. ಜನನಿಬಿಡ ಪ್ರದೇಶದಲ್ಲೇ ನಡೆದ ಈ ಅಮಾನವೀಯ ಕೃತ್ಯವನ್ನು ಕಂಡು ಸ್ಥಳೀಯರು ಹಾಗೂ ಇತರ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯ ಸಿಬ್ಬಂದಿ, ಗಲಾಟೆಯನ್ನು ನಿಯಂತ್ರಿಸಿ ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ನೊಂದ ಮಹಿಳೆಯಿಂದ ದೂರು ಸ್ವೀಕರಿಸಲಾಗಿದ್ದು, ಮಾರ್ಕೆಟ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.