
ರಾಮನಗರ (ಅ.2): ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲ ವ್ಯವಸ್ಥೆ ಹಾಳಾಗಿ ಹೋಗಿದೆ. ಚುನಾವಣೆ ಅಂದ್ರೆ ಈಗ ವ್ಯಾಪಾರ ಆಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಬೇಸರ ವ್ಯಕ್ತಪಡಿಸಿದರು
ಗಾಂಧಿ ಜಯಂತಿ ಹಿನ್ನೆಲೆ ಇಂದು ರಾಮನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಸಾರ್ವಜನಿಕರಿಗೆ ಕಡಲೆಪುರಿ ಹಂಚುವ ಮೂಲಕ ಸರಳವಾಗಿ ಆಚರಿಸಿದರು.
ಇಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಅದೆಷ್ಟು ಹದಗೆಟ್ಟು ಹೋಗಿದೆ ಅಂದ್ರೆ ಪ್ರಧಾನಮಂತ್ರಿ, ಕೇಂದ್ರ ಮಂತ್ರಿ, ಮುಖ್ಯಮಂತ್ರಿ ಎಲ್ಲವೂ ಭ್ರಷ್ಟವಾಗಿದೆ. ಚುನಾವಣಾ ವ್ಯವಸ್ಥೆ ಅನ್ನೋದು ಬ್ಯುಸಿನೆಸ್ ಆಗಿದೆ. ಇಡೀ ದೇಶವೇ ಲಂಚಮಯವಾಗಿದೆ. ಹಳ್ಳಿಯಿಂದ ದಿಲ್ಲಿಯವರೆಗೂ, ಪಂಚಾಯ್ತಿಯಿಂದ ಪ್ರಧಾನಿ ಕಚೇರಿವರೆಗೂ ಲಂಚಮಯವಾಗಿದೆ. ಇದು ತಂಬಾ ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.
ಇನ್ನು ವಿಧಾಸೌಧದ ಮೆಟ್ಟಿಲಿನ ಮೇಲೆ ಉರ್ದು ಹಬ್ಬ ನಡೆಸುವ ಸರ್ಕಾರದ ಕಾರ್ಯಕ್ರಮ ಕುರಿತು ಮಾತನಾಡಿದ ವಾಟಾಳ್ ನಾಗರಾಜ್ ಅವರು, ಈ ವಿಧಾನಸೌಧ ಇರುವುದು ಕನ್ನಡಿಗರಾಗಿ, ಕನ್ನಡ ಭಾಷೆಗಾಗಿ. ಇಂಥ ಸ್ಥಳದಲ್ಲಿ ಮೊಟ್ಟಮೊದಲ ರಾಜ್ಯೋತ್ಸವ ಮಾಡಿದ್ದು ನಾವು. ನನಗನಿಸಿದ ಹಾಗೆ ಯು.ಟಿ.ಖಾದರ್ ಕೇವಲ ಮಾತಿನಲ್ಲಿ ಉರ್ದು ಉತ್ಸವ ಅಷ್ಟೇ, ಸ್ಪೀಕರ್ ಆದೇಶ ಇಲ್ಲದೆ ಯಾರೂ ಇಲ್ಲಿ ಯಾವ ಹಬ್ಬ ಮಾಡಲು ಆಗೋಲ್ಲ. ಸರ್ಕಾರದಿಂದ ಅಧಿಕೃತವಾಗಿ ಯಾವುದೇ ಆದೇಶ ಆಗಿಲ್ಲ. ಒಂದು ವೇಳೆ ಉರ್ದು ಹಬ್ಬ ಅಂತೇನಾದ್ರೂ ಮಾಡಿದ್ರೆ ಖಂಡಿತ ನಾವು ಇದನ್ನ ವಿರೋಧಿಸುತ್ತೇವೆ, ಯಾವುದೇ ಕಾರಣಕ್ಕೆ ಇಂಥದ್ದನ್ನು ಒಪ್ಪೋಲ್ಲ. ಉರ್ದು ಹಬ್ಬಕ್ಕೆ ವಿರೋಧ ಮಾಡ್ತೇವೆ ಅಂದ್ರೆ ನಾವು ಬಿಜೆಪಿ ಪರ ಅಂತಲ್ಲ. ಸರ್ಕಾರ ಏನಾದರೂ ಈ ಬಗ್ಗೆ ಆದೇಶ ಹೊರಡಿಸಿದ್ರೆ ಮುಂದೇನು ಮಾಡಬೇಕು ಅಂತಾ ಚಿಂತನೆ ನಡೆಸಿ ನಿರ್ಧಾರ ತಗೊಳ್ತೇವೆ ಎಂದರು.