ಶಿವಂ ಅಸೋಸಿಯೇಟ್ಸ್ ₹4,500 ಕೋಟಿ ಹಗರಣ, ಕೋರ್ಟ್‌ನಲ್ಲಿ ಕಣ್ಣೀರು, ಬೆಳಗಾವಿಯಿಂದ ಬೆಂಗಳೂರಿಗೆ ಆರೋಪಿ ಶಿಫ್ಟ್!

Published : May 19, 2026, 03:47 PM IST
Shivanand Neelannavar

ಸಾರಾಂಶ

‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯ ₹4,500 ಕೋಟಿ ವಂಚನೆ ಪ್ರಕರಣದ ಮುಖ್ಯ ಆರೋಪಿ ಶಿವಾನಂದ ನೀಲಣ್ಣವರ್‌ನನ್ನು 10 ದಿನಗಳ ಸಿಐಡಿ ಕಸ್ಟಡಿಗೆ ನೀಡಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದ್ದು, ಹೂಡಿಕೆದಾರರಿಂದ ಮೊದಲ ಅಧಿಕೃತ ದೂರು ದಾಖಲಾಗಿದೆ.

ಬೆಳಗಾವಿ: ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ 'ಶಿವಂ ಅಸೋಸಿಯೇಟ್ಸ್' ಸಂಸ್ಥೆಯ ₹4,500 ಕೋಟಿ ರೂಪಾಯಿ ವಂಚನೆ ಆರೋಪ ಪ್ರಕರಣದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ. ಪ್ರಕರಣದ ಪ್ರಮುಖ ಆರೋಪಿ, ಸಂಸ್ಥೆಯ ಮುಖ್ಯಸ್ಥ ಶಿವಾನಂದ ನೀಲಣ್ಣವರ್‌ನನ್ನು ಬೆಳಗಾವಿಯ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ. ನ್ಯಾಯಾಲಯದ ಆದೇಶದ ಬೆನ್ನಲ್ಲೇ ಆರ್ಥಿಕ ಅಪರಾಧಗಳ ತನಿಖಾ ದಳದ (CID) ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಿಂದ ಹೊರಟ ಸಿಐಡಿ ಅಧಿಕಾರಿಗಳ ತಂಡ, ಬಿಗಿ ಭದ್ರತೆಯಲ್ಲಿ ಆರೋಪಿಯನ್ನು ಬೆಂಗಳೂರಿನ ಮುಖ್ಯ ಕಚೇರಿಗೆ ಶಿಫ್ಟ್ ಮಾಡಿದೆ. ಒಂದು ಕಾರಿನಲ್ಲಿ ಆರೋಪಿಯನ್ನು ಕೂರಿಸಲಾಗಿದ್ದರೆ, ಮತ್ತೊಂದು ಕಾರಿನಲ್ಲಿ ಜಪ್ತಿ ಮಾಡಲಾದ ಮಹತ್ವದ ದಾಖಲೆಗಳು, ಕಂಪ್ಯೂಟರ್, ಲ್ಯಾಪ್‌ಟಾಪ್, ಪೆನ್ ಡ್ರೈವ್ ಹಾಗೂ ಮೊಬೈಲ್‌ ಫೋನ್‌ಗಳನ್ನು ಬೆಂಗಳೂರಿಗೆ ಕೊಂಡೊಯ್ಯಲಾಗಿದೆ.

ಕಾಗವಾಡ ಠಾಣೆಯಲ್ಲಿ ದಾಖಲಾಯ್ತು ಮೊದಲ ಅಧಿಕೃತ ಖಾಸಗಿ ದೂರು!

ಇಷ್ಟು ದಿನ ಸಾಮಾಜಿಕ ಜಾಲತಾಣಗಳು ಹಾಗೂ ಇಲಾಖೆಯ ಮಾಹಿತಿಯ ಆಧಾರದ ಮೇಲೆ ತನಿಖೆ ನಡೆಯುತ್ತಿತ್ತು. ಆದರೆ ಪ್ರಕರಣ ಸಿಐಡಿಗೆ ಹಸ್ತಾಂತರವಾಗುತ್ತಿದ್ದಂತೆ, ಕಾಗವಾಡ ಪೊಲೀಸ್ ಠಾಣೆಯಲ್ಲಿ ಹೂಡಿಕೆದಾರನೊಬ್ಬನಿಂದ ಮೊದಲ ಅಧಿಕೃತ ಖಾಸಗಿ ದೂರು ದಾಖಲಾಗಿದೆ. ಕೃಷ್ಣಾ ಅಪ್ಪಣ್ಣ ಅಪ್ರಾಜ್ ಎಂಬುವವರು ದೂರು ನೀಡಿದ ಮೊದಲ ವ್ಯಕ್ತಿಯಾಗಿದ್ದಾರೆ.

ದೂರಿನ ವಿವರಗಳ ಪ್ರಕಾರ, "ಪ್ರತಿ ತಿಂಗಳು ಶೇ. 36ರಷ್ಟು ಭಾರಿ ಬಡ್ಡಿ ನೀಡುವುದಾಗಿ ಶಿವಾನಂದ ನೀಡಿದ್ದ ಆಮಿಷಕ್ಕೆ ಒಳಗಾಗಿದ್ದ ಕೃಷ್ಣಾ ಅಪ್ರಾಜ್, ಕಳೆದ ಏಪ್ರಿಲ್ ತಿಂಗಳಿನಲ್ಲಿ ಹಂತ ಹಂತವಾಗಿ ಒಟ್ಟು 5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರು. ಆದರೆ ಠೇವಣಿ ಪಡೆದ ನಂತರ ಹೆಚ್ಚಿನ ಬಡ್ಡಿ ನೀಡದೆ ವಂಚಿಸಲಾಗಿದೆ," ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬೆಂಗಳೂರಿಗೆ ಶಿಫ್ಟ್ ಮಾಡಲು ಸಿಐಡಿ ನೀಡಿದ ಕಾರಣಗಳೇನು?

ಪ್ರಕರಣದ ತನಿಖೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸಿಐಡಿ ಅಧಿಕಾರಿಗಳು, ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಲು ಆರೋಪಿಯನ್ನು ಬೆಂಗಳೂರಿಗೆ ಕರೆದೊಯ್ಯಲು ನ್ಯಾಯಾಲಯದ ಅನುಮತಿ ಕೋರಿದ್ದರು. ಸಿಐಡಿ ತನ್ನ ಅರ್ಜಿಯಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಿತ್ತು:

ಶಿವಾನಂದ ನೀಲಣ್ಣವರ್ ನಡೆಸುತ್ತಿದ್ದ ಆರ್ಥಿಕ ವ್ಯವಹಾರಗಳು ಕೇವಲ ಬೆಳಗಾವಿಗೆ ಸೀಮಿತವಾಗಿಲ್ಲ, ಇದು ಅಂತರ ಜಿಲ್ಲಾ ಹಾಗೂ ಅಂತರರಾಜ್ಯ ಮಟ್ಟದ ಜಾಲವನ್ನು ಹೊಂದಿದೆ. ವೆಬ್‌ಸೈಟ್ ಹಾಗೂ ಮೊಬೈಲ್ ಆ್ಯಪ್‌ಗಳ ಮೂಲಕ ಹಣದ ಹೂಡಿಕೆ ಮಾಡಿಸಿಕೊಳ್ಳಲಾಗಿದೆ. ಇಷ್ಟು ದೊಡ್ಡ ಮಟ್ಟದ ಹಣದ ಮೂಲ ಯಾವುದು? ಡಿಜಿಟಲ್ ವ್ಯವಹಾರಗಳು ಹೇಗೆ ನಡೆದಿವೆ? ವಿವಿಧ ಬ್ಯಾಂಕ್ ಖಾತೆಗಳು, ರಿಯಲ್ ಎಸ್ಟೇಟ್ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾದ ಹಣದ ವರ್ಗಾವಣೆ ಕುರಿತು ಸಮಗ್ರ ವಿಚಾರಣೆಯಾಗಬೇಕಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, 'ಶಿವಂ ಅಸೋಸಿಯೇಟ್ಸ್' ಸಂಸ್ಥೆಯು ಆರ್‌ಬಿಐ (RBI) ನೋಂದಣಿ ಹೊಂದಿರಲಿಲ್ಲ. ಆದರೂ "ಒಂದು ಲಕ್ಷ ರೂಪಾಯಿ ಹೂಡಿಕೆಗೆ ಪ್ರತಿ ತಿಂಗಳು 3 ಪರ್ಸೆಂಟ್ ಲಾಭ" ಎಂಬ ಆಮಿಷ ಒಡ್ಡಿ ಸುಮಾರು 35 ಸಾವಿರಕ್ಕೂ ಹೆಚ್ಚು ಜನರಿಂದ ₹1,000 ಕೋಟಿಗೂ ಅಧಿಕ ಹಣದ ವ್ಯವಹಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ನ್ಯಾಯಾಲಯದಲ್ಲಿ ನಡೆದ ವಾದವೇನು?

ಸಿಐಡಿ ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶರಾದ ಗಂಗಾಧರ ಅವರು ಆರೋಪಿಯನ್ನು 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದರು. ವಿಚಾರಣೆ ವೇಳೆ ನ್ಯಾಯಾಧೀಶರು ಶಿವಾನಂದ ನೀಲಣ್ಣವರ ಆರೋಗ್ಯದ ಬಗ್ಗೆ ಪ್ರಶ್ನಿಸಿದರು. ಆಗ ನನಗೆ ಬಿಪಿ ಇದೆ ಎಂದು ಆರೋಪಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಸಂಬಂಧಪಟ್ಟ ವೈದ್ಯರಿಂದ ಚಿಕಿತ್ಸೆ, ಮಾತ್ರೆ ಸೇರಿದಂತೆ ಅಗತ್ಯ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಈ ವೇಳೆ ಶಿವಾನಂದ, 35 ಸಾವಿರ ಜನರಿಗೆ ಹಣ ಬೇಡ, ನಾನು ಬೇಕಾಗಿದ್ದೇನೆ ಎಂದು ಭಾವುಕರಾಗಿ ಹೇಳಿದರು. ಈ ಮಾತಿಗೆ ತಕ್ಷಣ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ನೀವು ಜನರಿಗೆ ಬೇಕಾಗಿರಬಹುದು. ನೀವು ಒಳ್ಳೆಯ ಕೆಲಸ ಮಾಡಿರಬಹುದು. ಅದು ನನಗೆ ಗೊತ್ತಿಲ್ಲ. ಆದರೆ ಅಮಾಯಕ ಜನರಿಗೆ ಅನ್ಯಾಯ ಆಗಬಾರದು. ಸರ್ಕಾರ ಜನರ ತಂದೆ-ತಾಯಿ ಇದ್ದಂತೆ. ಅವರ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ ಎಂದು ಕಟ್ಟುನಿಟ್ಟಾಗಿ ಹೇಳಿದರು. ನ್ಯಾಯಾಧೀಶರು ವಿಚಾರಣೆ ವೇಳೆ ಸಮಾಜದಲ್ಲಿ ಈ ಹಿಂದೆ ನಡೆದ ಅನೇಕ ಹಣಕಾಸು ವಂಚನೆ ಪ್ರಕರಣಗಳನ್ನು ಉಲ್ಲೇಖಿಸಿದಂತೆ ಮಾತನಾಡಿದರು.

ಸಾಕಷ್ಟು ಜನ ಹಣ ಪಡೆದು ಓಡಿ ಹೋಗಿರುವ ಉದಾಹರಣೆಗಳಿವೆ. ಇತಿಹಾಸದಿಂದ ಪಾಠ ಕಲಿಯಲು ಈ ರೀತಿಯ ಕಾನೂನುಗಳನ್ನು ತರಲಾಗಿದೆ. ಕಾನೂನಿನ ಅಡಿಯಲ್ಲಿ ನೀವು ಏನು ಮಾಡಿದ್ದೀರೋ ಅದು ಉಳಿಯುತ್ತದೆ ಎಂದು ತಿಳಿಸಿದರು. ಈ ವೇಳೆ, ಧರ್ಮೋ ರಕ್ಷತಿ ರಕ್ಷಿತಃ ಎಂಬ ಸಂಸ್ಕೃತ ಶ್ಲೋಕವನ್ನೂ ಉಲ್ಲೇಖಿಸಿ, ಕಾನೂನು ಮತ್ತು ನ್ಯಾಯ ವ್ಯವಸ್ಥೆಯ ಮಹತ್ವವನ್ನು ನ್ಯಾಯಾಧೀಶರು ನೆನಪಿಸಿದರು.

ಕೋರ್ಟ್ ಆವರಣದಲ್ಲಿ ಕಣ್ಣೀರಿಟ್ಟ ಆರೋಪಿ

ವಿಚಾರಣೆ ಮುಗಿದು ಕೋರ್ಟ್ ಹಾಲ್‌ನಿಂದ ಹೊರಗೆ ಬರುತ್ತಿದ್ದಂತೆ, ಆವರಣದಲ್ಲಿ ನಿಂತಿದ್ದ ತನ್ನ ಸಹೋದರನನ್ನು ಕಂಡು ಶಿವಾನಂದ ನೀಲಣ್ಣವರ ತೀವ್ರ ಭಾವುಕರಾಗಿ ಕಣ್ಣೀರಿಟ್ಟರು. ಇದನ್ನು ಕಂಡು ಕೆಲ ಕ್ಷಣ ನ್ಯಾಯಾಲಯದ ಆವರಣದಲ್ಲಿ ಸಂಪೂರ್ಣ ಮೌನ ಆವರಿಸಿತ್ತು.

ಸಿಐಡಿ ಮುಂದಿರುವ ಸವಾಲುಗಳೇನು?

ಈ ಬೃಹತ್ ಹಗರಣದಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋದ ಸಾವಿರಾರು ಜನರಲ್ಲಿ ಬಹುತೇಕರು ಇನ್ನೂ ಅಧಿಕೃತವಾಗಿ ದೂರು ನೀಡಲು ಮುಂದೆ ಬಂದಿಲ್ಲ. ಇದು ತನಿಖಾಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಹೀಗಾಗಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಸಾರ್ವಜನಿಕರು ಯಾವುದೇ ಭಯವಿಲ್ಲದೆ ಮುಂದೆ ಬಂದು ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ "ನನ್ನ ಬಳಿ 15 ಸಾವಿರ ಬಂದೂಕುಗಳಿವೆ" ಎಂದು ಶಿವಾನಂದ ಹೇಳಿದ್ದ ಹಳೆಯ ವಿಡಿಯೋ ಕೂಡ ಈಗ ಸಿಐಡಿ ತನಿಖೆಯ ವ್ಯಾಪ್ತಿಯಲ್ಲಿದೆ. ಈ ಹಣ ಯಾರ ಖಾತೆಗೆ ಹೋಗಿದೆ? ಯಾರ ಹೆಸರಲ್ಲಿ ಆಸ್ತಿ ಖರೀದಿಯಾಗಿದೆ? ಈ ಜಾಲದ ಹಿಂದೆ ರಾಜಕೀಯ ಅಥವಾ ಆರ್ಥಿಕ ಪ್ರಭಾವಿಗಳ ಹಸ್ತವಿದೆಯೇ? ಎಂಬ ಪ್ರಶ್ನೆಗಳಿಗೆ ಸಿಐಡಿ ಈಗ ಉತ್ತರ ಹುಡುಕಬೇಕಿದೆ.

PREV
Read more Articles on
click me!

Recommended Stories

ರಾಜ್ಯದಲ್ಲಿ 60 ಕಿ.ಮೀ ವೇಗದ ಸುಂಟರಗಾಳಿ ಅಬ್ಬರ, ಈ 5 ಜಿಲ್ಲೆಗಳ ಜನರೇ ಎಚ್ಚರ; ಹವಾಮಾನ ಇಲಾಖೆ 'ಡೇಂಜರ್' ಅಲರ್ಟ್!
ಗಮನಿಸಿ, ಮೇ 20 ರಿಂದ ಜೂನ್ 2ರವರೆಗೆ ಮಂಗಳೂರಿನಿಂದ ಹೊರಡುವ ಎಲ್ಲಾ ರೈಲುಗಳ ಸಂಚಾರ ಮಾರ್ಗದಲ್ಲಿ ಭಾರೀ ಬದಲಾವಣೆ!