Belagavi: ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಪೊಲೀಸರು

ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಪಾವತಿ ಮಾಡದೇ ಸಂಚರಿಸುವ ವಾಹನ ಸವಾರರೇ ಎಚ್ಚರ. ದಂಡ ಪಾವತಿ ಮಾಡದಿದ್ದಲ್ಲಿ ಕಾನೂನು ಮೂಲಕವೇ ಕ್ರಮ ಜರುಗಿಸುವುದರ ಜತೆಗೆ ದಂಡ ಪಾವತಿ ಮಾಡದ ವಾಹನಗಳನ್ನು ಜಪ್ತಿ ಮಾಡಲು ಪೊಲೀಸ್‌ ಇಲಾಖೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಮುಂದಾಗಿದೆ. 


ಜಗದೀಶ ವಿರಕ್ತಮಠ

ಬೆಳಗಾವಿ (ಆ.16): ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಪಾವತಿ ಮಾಡದೇ ಸಂಚರಿಸುವ ವಾಹನ ಸವಾರರೇ ಎಚ್ಚರ. ದಂಡ ಪಾವತಿ ಮಾಡದಿದ್ದಲ್ಲಿ ಕಾನೂನು ಮೂಲಕವೇ ಕ್ರಮ ಜರುಗಿಸುವುದರ ಜತೆಗೆ ದಂಡ ಪಾವತಿ ಮಾಡದ ವಾಹನಗಳನ್ನು ಜಪ್ತಿ ಮಾಡಲು ಪೊಲೀಸ್‌ ಇಲಾಖೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಮುಂದಾಗಿದೆ. ನಗರದಲ್ಲಿ ಸಂಚರಿಸುವ ದ್ವಿಚಕ್ರ, ಕಾರು, ಲಾರಿ, ರಿಕ್ಷಾ ಸೇರಿದಂತೆ ಇನ್ನಿತರ ವಾಹನ ಸವಾರರು, ಸಂಚಾರಿ ನಿಯಮ ಉಲ್ಲಂಘಿಸಿದ ಸಮಯದಲ್ಲಿ ಸಂಚಾರಿ ಪೊಲೀಸರು ನಗರದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಮೂಲಕ ವಾಹನಗಳ ನೋಂದಣಿ ಸಂಖ್ಯೆ ಆಧರಿಸಿ, ವಾಹನಗಳ ಮಾಲೀಕರ ವಿಳಾಸ ಮತ್ತು ಮಾಹಿತಿ ಪಡೆದುಕೊಂಡು ನೋಟಿಸ್‌ ನೀಡುವ ಪ್ರಕ್ರಿಯೆ ಈಗಾಗಲೇ ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ. 

Latest Videos

ಸಂಚಾರಿ ಪೊಲೀಸರು ಜಾರಿಗೊಳಿಸುವ ನೋಟಿಸ್‌ನಿಂದಾಗಿ ಕೆಲವರು ದಂಡ ಪಾವತಿಸುತ್ತಿದ್ದಾರೆ. ಬಹುತೇಕ ಜನರು ದಂಡ ಪಾವತಿಸದೇ ಪೊಲೀಸರ ಕಣ್ತಪ್ಪಿಸಿ ಬೇಕಾಬಿಟ್ಟಿಓಡಾಡುತ್ತಿದ್ದಾರೆ. ಇದರಿಂದಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ದಂಡ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪಾವತಿಯಾಗುತ್ತಿತ್ತು. ಕಳೆದ ಒಂದು ವರ್ಷದ ಅವಧಿಯಲ್ಲಿ . 1.5 ಕೋಟಿ ದಂಡ ಪಾವತಿಯಾಗಬೇಕಿದೆ. ಕೋಟ್ಯಂತರ ರು. ದಂಡದ ರೂಪದಲ್ಲಿ ಸರ್ಕಾರಕ್ಕೆ ಜಮಾ ಆಗಬೇಕಿದ್ದ ಹಣ ಬಾಕಿ ಉಳಿದುಕೊಂಡಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇದರಿಂದಾಗಿ ನಗರ ಸಂಚಾರ ಪೊಲೀಸರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಂಟಿಯಾಗಿ, ದಂಡ ಪಾವತಿಸದ ವಾಹನ ಮಾಲೀಕರ ವಿರುದ್ಧ ಸಮರ ಸಾರಿದೆ. 

BREAKING: ಕಾಂಗ್ರೆಸ್ ಯುವ ಕಾರ್ಯಕರ್ತೆ ನವ್ಯಶ್ರೀ ಪೊಲೀಸರ ವಶಕ್ಕೆ

ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಮಾಲೀಕರ ವಿಳಾಸ, ಮೊಬೈಲ್‌ ನಂಬರ್‌ ಮತ್ತು ಮಾಹಿತಿಯನ್ನು ವಾಹನ ನೋಂದಣಿ ಸಂಖ್ಯೆ ಮೂಲಕ ಸಾರಿಗೆ ಇಲಾಖೆಯಲ್ಲಿ (ಆರ್‌ಟಿಒ) ಮಾಹಿತಿ ಪಡೆದುಕೊಳ್ಳಲಾಗುತ್ತದೆ. ನಂತರ ಮೊಬೈಲ್‌ಗೆ ಕಾನೂನು ಸೇವಾ ಪ್ರಾಧಿಕಾರದಿಂದ ಸಂಚಾರ ನಿಯಮ ಉಲ್ಲಂಘನೆ ಹಾಗೂ ದಂಡದ ಕುರಿತು ಮೆಸೇಜ್‌ ರವಾನಿಸವಾಗುತ್ತದೆ. ಈ ಮೆಸೇಜ್‌ ಆಧರಿಸಿ ದಂಡ ಪಾವತಿಸುವ ವಾಹನ ಮಾಲೀಕರು ಬಚಾವ್‌ ಆಗುತ್ತಾರೆ. ದಂಡ ಪಾವತಿಸದೇ ಮೊಂಡುತನ ಪ್ರದರ್ಶಿಸುವ ವಾಹನ ಮಾಲೀಕರಿಗೆ ಕಾನೂನು ಕುಣಿಕೆ ಎದುರಾಗಲಿದೆ.

ಮೇಸೆಜ್‌ ಆಧರಿಸಿ ಹಾಗೂ ಸಂಚಾರಿ ಪೊಲೀಸರು ನೀಡುವ ನೋಟಿಸ್‌ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ದಂಡ ಪಾವತಿಸದ ವಾಹನ ಮಾಲೀಕರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನ್ಯಾಯಾಲಯದ ಮೂಲಕ ನೋಟಿಸ್‌ ಜಾರಿ ಮಾಡಲಾಗುತ್ತಿದೆ. ನ್ಯಾಯಾಲಯಕ್ಕೆ ಹಾಜರಾಗಿ ದಂಡ ಪಾವತಿಸಬೇಕಾಗುತ್ತದೆ. ನ್ಯಾಯಾಲಯ ವಿಧಿಸುವ ದಂಡ ಪಾವತಿಸುವ ಅನಿವಾರ್ಯವಾಗುತ್ತದೆ. ನ್ಯಾಯಾಲಯಕ್ಕೆ ಹಾಜರಾಗದೇ ಹೋದಲ್ಲಿ ವಾಹನ ಜಪ್ತಿಗೆ ಕೋರ್ಚ್‌ ಮೂಲಕವೇ ಆದೇಶ ಹೊರಡಿಸಲು ಕಾನೂನು ಸೇವೆಗಳ ಪ್ರಾಧಿಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಹಳೆಯ ವಾಹನ ಖರೀದಿಸುವವರೆ ಎಚ್ಚರ: ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವ ವಾಹನಗಳ ಮೂಲ ಮಾಲೀಕರಿಗಷ್ಟೇ ಅಲ್ಲ, ಹಳೆಯ ವಾಹನ ಖರೀದಿ ಮಾಡಿದ ಮಾಲೀಕರಿಗೂ ನೋಟಿಸ್‌ ನೀಡಲಾಗುತ್ತಿದೆ. ಮೊದಲ ಮಾಲೀಕರು ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಸದೇ ಹೋದಲ್ಲಿ ಅದು, ಆಯಾ ವಾಹನ ನೋಂದಣಿ ಸಂಖ್ಯೆ ಮೇಲೆಯೇ ಬಾಕಿ ಉಳಿದುಕೊಂಡಿರುತ್ತದೆ. ಕಾನೂನು ಉಲ್ಲಂಘಿಸಿದ ದಂಡ ಪಾವತಿಸದ ವಾಹನಗಳನ್ನು ಖರೀದಿಸಿದ ಎರಡನೇ ಮಾಲೀಕರ ಮನೆಗೆ ನೋಟಿಸ್‌ ನೀಡಲಾಗುತ್ತದೆ. ಆ ವಾಹನಗಳ ಮಾಲೀಕರೆ ದಂಡ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ಹಳೆ ವಾಹನ ಖರೀದಿಸುವ ಸಮಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಲಾಗಿದೆಯಾ? ಅಥವಾ ದಂಡ ಬಾಕಿ ಉಳಿಸಿಕೊಳ್ಳಲಾಗಿದೆಯಾ? ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮೊದಲ ಮಾಲೀಕರು ಮಾಡಿದ ಎಡವಟ್ಟಿಗೆ ಎರಡನೇ ಮಾಲೀಕರು ದಂಡ ತೆರಬೇಕಾಗುತ್ತದೆ. ಈಗಾಗಲೇ ಪಾವತಿಸುವವರ ಪೈಕಿ ಹಳೆ ವಾಹನ ಖರೀದಿಸಿದವರೇ ಹೆಚ್ಚಿನ ಸಂಖ್ಯೆಯಲ್ಲಿ ದಂಡ ಪಾವತಿಸುತ್ತಿರುವುದು ಗಮನಾರ್ಹ ವಿಷಯವಾಗಿದೆ.

ಮಹಾರಾಷ್ಟ್ರದಲ್ಲಿ ಭಾರೀ ಮಳೆ: ಉತ್ತರ ಕರ್ನಾಟಕದ ಹಳ್ಳಿಗಳಿಗೆ ಈಗ ಮಹಾ ಪ್ರವಾಹ ಭೀತಿ

ದಂಡಕ್ಕೂ ಮುನ್ನ ವಾಹನ ಖಚಿತಪಡಿಸಿಕೊಳ್ಳಿ: ಸಂಚಾರಿ ನಿರ್ವಹಣಾ ಕೇಂದ್ರ (ಟಿಎಂಸಿ), ಬೆಳಗಾವಿ ಒನ್‌ ಹಾಗೂ ಕರ್ನಾಟಕ ಒನ್‌ ಕೇಂದ್ರಗಳಲ್ಲಿ ದಂಡದ ಹಣ ಪಾವತಿಸಬೇಕು. ದಂಡ ಪಾವತಿಸುವ ಮೊದಲು ತಮ್ಮಗೆ ಸೇರಿದ ವಾಹನವಾ? ಅಥವಾ ಬೇರೆ ವಾಹನವಾ? ಎಂಬುವುದರ ಕುರಿತು ಖಚಿತಪಡಿಸಿಕೊಳ್ಳಬೇಕು. ತಮ್ಮದೇ ವಾಹನ ಆಗಿದ್ದಲ್ಲಿ ಮಾತ್ರ ದಂಡ ಪಾವತಿಸಬೇಕು. ಇಲ್ಲವಾದಲ್ಲಿ ಅಲ್ಲಿನ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘಿಸಿದಲ್ಲೇ ಸಂಚಾರಿ ನಿರ್ವಹಣಾ ಕೇಂದ್ರ (ಟಿಎಂಸಿ) ಅವರು ಜಾರಿಗೊಳಿಸುವ ನೋಟಿಸ್‌ಗೆ ಸಕಾರಾತ್ಮಕವಾಗಿ ಸ್ಪಂದಿಸಿ ದಂಡ ಪಾವತಿಸಬೇಕು. ಇಲ್ಲವಾದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಾನೂನು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.
-ಸ್ನೇಹಾ ಪಿ.ವಿ.ಡಿಸಿಪಿ ಸಂಚಾರ ಮತ್ತು ಅಪರಾಧ ವಿಭಾಗ

click me!