ಬೆಳಗಾವಿಯಲ್ಲಿ ಅಪ್ರಾಪ್ತೆಯ ಅತ್ಯಾ*ಚಾರವೆಸಗಿದಾತನಿಗೆ 30 ವರ್ಷ ಜೈಲು, ಮಂಡ್ಯದಲ್ಲಿ ಚಿಂದಿ ಆಯುತ್ತಿದ್ದ ಅತ್ಯಾ*ಚಾರಿಗಳಿಗೆ ಜೀವಾವಧಿ ಪ್ರಕಟ

Published : Jan 22, 2026, 12:27 PM IST
Belagavi POCSO case

ಸಾರಾಂಶ

ಬೆಳಗಾವಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾ*ಚಾರವೆಸಗಿದ್ದ ಅಪರಾಧಿಗೆ ಪೋಕ್ಸೋ ನ್ಯಾಯಾಲಯ 30 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಮತ್ತೊಂದು ಪ್ರಕರಣದಲ್ಲಿ, ಮಂಡ್ಯದಲ್ಲಿ ಮಹಿಳೆಯನ್ನು ಅತ್ಯಾ*ಚಾರ ಮಾಡಿ ಕೊಲೆಗೈದಿದ್ದ ಇಬ್ಬರು ಅಪರಾಧಿಗಳಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದೆ.

ಬೆಳಗಾವಿ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾ*ಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ಪೋಕ್ಸೋ ನ್ಯಾಯಾಲಯ 30 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 1 ಲಕ್ಷ ದಂಡ ವಿಧಿಸಿ ಬುಧವಾರ ಆದೇಶ ಹೊರಡಿಸಿದೆ.

ಬೆಳಗಾವಿ ಸಮರ್ಥ ನಗರದ ವಿಶಾಲ ಹೊಸಮನಿ(22) ಶಿಕ್ಷೆಗೊಳಗಾದ ಅಪರಾಧಿ. ಈತ ಅಪ್ರಾಪ್ತೆಯನ್ನು ಪುಸಲಾಯಿಸಿ 2022ರಲ್ಲಿ ತನ್ನ ಮನೆಗೆ ಕರೆದುಕೊಂಡು ಬಂದು ಲೈಂಗಿಕ ದೌರ್ಜನ್ಯ ಎಸಗಿದ್ದ. ಅಲ್ಲದೇ, 2024ರಲ್ಲಿ ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿ ಲಾಡ್ಜ್‌ವೊಂದರಲ್ಲಿ ಅಕ್ರಮವಾಗಿ ಕೂಡಿಟ್ಟು ಅತ್ಯಾ*ಚಾರ ನಡೆಸಿದ್ದಾನೆ ಎಂದು ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ತನಿಖೆ ಮಾಡಿದ್ದ ಪೊಲೀಸರು, ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶೆ ಸಿ.ಎಂ.ಪುಷ್ಪಲತಾ ಅವರು, ಅಪರಾಧಿ ನಿಂಗಪ್ಪ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ಅಭಿಪ್ರಾಯ ಪಟ್ಟು ತೀರ್ಪು ಪ್ರಕಟಿಸಿದ್ದಾರೆ. ಅಲ್ಲದೇ, ಸಂತ್ರಸ್ತೆಗೆ ಜಿಲ್ಲಾ ಕಾನೂನು ಸೇವಾ ಪ್ರಾಕಾರದಿಂದ ₹ 4 ಲಕ್ಷ ಪರಿಹಾರ ಪಡೆಯುವಂತೆ ಸೂಚಿಸಿದೆ. ಸರ್ಕಾರದ ಪರವಾಗಿ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದ್ದರು.

ಮಹಿಳೆಯನನ್ನು ಅತ್ಯಾ*ಚಾರವೆಸಗಿ ಹತ್ಯೆಗೈದಿದ್ದ ಚಿಂದಿ ಆಯುವ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಮಂಡ್ಯ: ಮಹಿಳೆ ಮೇಲೆ ಅತ್ಯಾ*ಚಾರವೆಸಗಿ ಹತ್ಯೆಗೈದಿದ್ದ ಅಪರಾಧಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರು. ದಂಡ ವಿಧಿಸಿ ಇಲ್ಲಿನ ನಾಲ್ಕನೇ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು, ನರಗ್ಯಾತನಹಳ್ಳಿ ಗ್ರಾಮದ ಶಿವ ಅಲಿಯಾಸ್ ಕಪಿ ಅಲಿಯಾಸ್ ಶಿವಕುಮಾರ (26) ಹಾಗೂ ಶ್ರೀರಂಗಪಟ್ಟಣ ತಾಲೂಕು, ಪಾಲಹಳ್ಳಿ ಗ್ರಾಮದ ರಾಜೇಶ್‌ (32) ಶಿಕ್ಷೆಗೊಳಗಾದ ಅಪರಾಧಿಗಳು.

ಕಲ್ಲು ಎತ್ತಿ ಹಾಕಿ ಕೊಂದಿದ್ದ ಪಾತಕಿಗಳು

ಶಿವಕುಮಾರ ಮತ್ತು ರಾಜೇಶ್‌ ಚಿಂದಿ ಆಯುವ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಹುಣಸೂರು ಮೂಲದ ನಿವಾಸಿ ಮೀನಾ ಎಂಬಾಕೆಯೂ ಚಿಂದಿ ಆಯುವ ಕೆಲಸ ಮಾಡಿಕೊಂಡಿದ್ದಳು. ಈಕೆಯನ್ನು ಪರಿಚಯ ಮಾಡಿಕೊಂಡ ಅಪರಾಧಿಗಳು 2020ರ ಮಾರ್ಚ್ 3ರಂದು ರಾತ್ರಿ 8ಗಂಟೆ ಸಮಯದಲ್ಲಿ ಆಕೆಯ ಮೇಲೆ ಅತ್ಯಾ*ಚಾರ ನಡೆಸುವ ಉದ್ದೇಶದಿಂದ ಶ್ರೀರಂಗಪಟ್ಟಣದ ಎಂ.ಕೆ.ಆಯಿಲ್ ಫ್ಯಾಕ್ಟರಿ ಪಕ್ಕದ ಮೈಸೂರು-ಬೆಂಗಳೂರು ಹೆದ್ದಾರಿಯ ಬದಿಯ ವಾಟರ್ ಟ್ಯಾಂಕ್ ಹಿಂಭಾಗ ಕಂದಕದ ಬಳಿ ಕರೆದೊಯ್ದಿದ್ದಾರೆ. ನಂತರ ಆಕೆಯನ್ನು ಬಲವಂತವಾಗಿ ಅತ್ಯಾ*ಚಾರ ನಡೆಸಿದ್ದಾರೆ. ಆಕೆ ಪೊಲೀಸರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಆತಂಕಗೊಂಡ ಅಪರಾಧಿಗಳು ಮೀನಾ ಧರಿಸಿದ್ದ ವೇಲ್‌ನಿಂದಲೇ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿ ಅಲ್ಲೇ ಬಿದ್ದಿದ್ದ ಕಲ್ಲುಗಳನ್ನು ತೆಗೆದುಕೊಂಡು ಮೀನಾಳ ತಲೆ ಮೇಲೆ ಎತ್ತಿಹಾಕಿ ಗುರುತು ಸಿಗದಂತೆ ಸಾಕ್ಷ್ಯನಾಶ ಮಾಡಿ ಪರಾರಿಯಾಗಿದ್ದರು.

ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಅಪರಾಧಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನಾಲ್ಕನೇ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಕೆ.ಯಾದವ್ ಅವರು, ಸಾಕ್ಷಾಧಾರಗಳು ಲಭ್ಯವಿಲ್ಲವೆಂದು ಬಿಡುಗಡೆಗೊಳಿಸಿದೆಯಾದರೂ, ಅಪರಾಧಿಗಳು ಮೀನಾಳನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಿರುವುದು ವಿಚಾರಣೆಯಿಂದ ದೃಢಪಟ್ಟಿರುವುದರಿಂದ ಅಪರಾಧಿಗಳಾದ ಶಿವಕುಮಾರ್, ರಾಜೇಶ್‌ಗೆ ಜೀವಾವಧಿ ಶಿಕ್ಷೆ ಮತ್ತು ತಲಾ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ವಿಶೇಷ ಅಭಿಯೋಜಕ ಕೆ.ನಾಗರಾಜು ಅವರು ವಾದ ಮಂಡಿಸಿದ್ದರು

PREV
Read more Articles on
click me!

Recommended Stories

Lakkundi Excavation: ಬಯೋಮೆಟ್ರಿಕ್ ಹಾಜರಾತಿಗೆ ಹೈರಾಣಾದ ಕಾರ್ಮಿಕರು, ಬೆನ್ನಲ್ಲೇ ಹಣತೆ ಆಕಾರದ ಲೋಹದ ತುಂಡು ಪತ್ತೆ
ಲಕ್ಕುಂಡಿ ನಿಧಿ ಕಾವಲು ಸರ್ಪದ ಬೆನ್ನಲ್ಲೇ ಹಾವು ಕಡಿತ ಉತ್ಸವ ದೇವಸ್ಥಾನದ ನಾಗ ನಂಬಿಕೆ ಭಾರಿ ಚರ್ಚೆ