ಕೊಪ್ಪಳದಲ್ಲಿ ವಿದೇಶಿ ಮಹಿಳೆಯ ಅತ್ಯಾ*ಚಾರ ಮತ್ತು ಕೊಲೆ 'ಸಣ್ಣ ಘಟನೆ' ಎಂದ ಸಂಸದ ಹಿಟ್ನಾಳ, ಭುಗಿಲೆದ್ದ ವಿವಾದ!

Published : Jan 22, 2026, 11:27 AM IST
Koppal MP Rajshekhar Hitnal

ಸಾರಾಂಶ

ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ ಅವರು ವಿದೇಶಿ ಮಹಿಳೆಯ ಮೇಲಿನ ಅತ್ಯಾ*ಚಾರ ಮತ್ತು ಕೊಲೆ ಪ್ರಕರಣವನ್ನು "ಸಣ್ಣ ಘಟನೆ" ಎಂದು ಕರೆದು ತೀವ್ರ ವಿವಾದ ಸೃಷ್ಟಿಸಿದ್ದಾರೆ. ಪ್ರವಾಸೋದ್ಯಮ ಕಾರ್ಯಕ್ರಮದಲ್ಲಿ ನೀಡಿದ ಈ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕೊಪ್ಪಳ: ವಿದೇಶಿ ಮಹಿಳೆಯ ಮೇಲಿನ ಅತ್ಯಾ*ಚಾರ ಮತ್ತು ಕೊಲೆ ಪ್ರಕರಣವನ್ನು “ಸಣ್ಣ ಘಟನೆ” ಎಂದು ಕರೆದ ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ ಅವರ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಾಣಾಪೂರ ಸಮೀಪ ಕಳೆದ ವರ್ಷ ನಡೆದಿದ್ದ ಈ ಅಮಾನುಷ ಘಟನೆಯನ್ನು ಲಘುವಾಗಿ ವರ್ಣಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ನಡೆದ ಪ್ರವಾಸೋದ್ಯಮ ಅನ್ವೇಷಣೆ ಕಾರ್ಯಕ್ರಮದಲ್ಲಿ ಸಂಸದ ಹಿಟ್ನಾಳ ಈ ವಿವಾದಾತ್ಮಕ ಮಾತುಗಳನ್ನು ಆಡಿದ್ದಾರೆ. ಈ ಕಾರ್ಯಕ್ರಮವನ್ನು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ (ಬೆಂಗಳೂರು ಘಟಕ) ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಮಿತಿ, ಕೊಪ್ಪಳ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

ಎರಡು ಬಾರಿ ಪುನರಾವರ್ತಿಸಿದ ಸಂಸದ

ಸಮಾರಂಭದಲ್ಲಿ ಮಾತನಾಡಿದ ಹಿಟ್ನಾಳ, “ನಮ್ಮ ಜಿಲ್ಲೆಯಲ್ಲಿ ಒಂದು ಸಣ್ಣ ಘಟನೆ ನಡೆದಿದೆ. ರೇ*ಪ್ ಮತ್ತು ಮರ್ಡರ್ ಆಯಿತು, ಅದು ಸಣ್ಣ ಘಟನೆ” ಎಂದು ಹೇಳಿದ್ದು, ಈ ಮಾತನ್ನು ಅವರು ಎರಡು ಬಾರಿ ಪುನರಾವರ್ತಿಸಿದರು. ಈ ಹೇಳಿಕೆಗಳು ಅಲ್ಲಿದ್ದವರಲ್ಲಿ ಅಸಹಜತೆಯನ್ನುಂಟುಮಾಡಿದವು.

ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ ಸಂಸದ

ಆದರೆ ನಂತರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ ಸಂಸದರು, “ಅದು ದೊಡ್ಡ ಘಟನೆ. ಆ ಘಟನೆ ಆಗಬಾರದಿತ್ತು. ಅದು ತುಂಬಾ ನೋವಿನ ಸಂಗತಿ” ಎಂದು ಹೇಳಿದರು. ಜೊತೆಗೆ, ಆ ಪ್ರಕರಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ಪ್ರಚಾರ ಪಡೆದಿದ್ದು, ಅದರ ಪರಿಣಾಮ ಜಿಲ್ಲೆಗೆ ಗಂಭೀರವಾಗಿಯೇ ತಟ್ಟಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಘಟನೆಯಿಂದಾಗಿ ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಶೇಕಡಾ 50ರಷ್ಟು ಇಳಿಕೆ ಕಂಡುಬಂದಿದೆ ಎಂದು ಹಿಟ್ನಾಳ ಹೇಳಿದರು. “ನಮ್ಮಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಆದರೆ ಅವುಗಳಿಗೆ ಸೂಕ್ತ ಪ್ರಚಾರ ಸಿಗುತ್ತಿಲ್ಲ. ಒಂದು ಘಟನೆ ನಡೆದರೆ ಮಾತ್ರ ನೆಗೆಟಿವ್ ಆಗಿ ಪ್ರಚಾರವಾಗುತ್ತದೆ” ಎಂದು ಅವರು ಬೇಸರ ವ್ಯಕ್ತಪಡಿಸಿದರು.

ವಿದೇಶಿ ಮಹಿಳೆಯ ಮೇಲಿನ ಅತ್ಯಾ*ಚಾರಮತ್ತು ಕೊಲೆ ಪ್ರಕರಣದಂತಹ ಗಂಭೀರ ಅಪರಾಧವನ್ನು ಸಣ್ಣ ಘಟನೆ ಎಂದು ಉಲ್ಲೇಖಿಸಿರುವುದು ಸಂಸದ ಸ್ಥಾನಕ್ಕೆ ತಕ್ಕದ್ದಲ್ಲ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಹಿಳಾ ಸಂಘಟನೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಈ ಹೇಳಿಕೆಯನ್ನು ಖಂಡಿಸಿದ್ದು, ಸಂಸದರಿಂದ ಸ್ಪಷ್ಟ ಕ್ಷಮಾಪಣೆ ಬರಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ.

ಒಟ್ಟಾರೆ, ಪ್ರವಾಸೋದ್ಯಮ ಉತ್ತೇಜನದ ಕುರಿತು ಚರ್ಚಿಸಬೇಕಿದ್ದ ವೇದಿಕೆಯಲ್ಲಿ ನಡೆದ ಈ ವಿವಾದಾತ್ಮಕ ಹೇಳಿಕೆ, ಸಂಸದ ರಾಜಶೇಖರ್ ಹಿಟ್ನಾಳ ಅವರನ್ನು ಮತ್ತೊಂದು ದೊಡ್ಡ ವಿವಾದದ ಕೇಂದ್ರಬಿಂದುವಾಗಿಸಿದೆ.

PREV
Read more Articles on
click me!

Recommended Stories

ಮೈಸೂರು ಸಿಲ್ಕ್ ಸ್ಯಾರಿಗೆ ಮುಂಜಾನೆ 5 ಗಂಟೆಯಿಂದಲೇ ಕ್ಯೂ : ತಾಯಿಗೆ ಸೀರೆ ಖರೀದಿಸಿದ ಶಾಸಕ ರಾಜೇಂದ್ರ
ಒಂದೇ ದಿನದಲ್ಲಿ ₹3.12 ಕೋಟಿ ದಾಖಲೆಯ ತೆರಿಗೆ ಸಂಗ್ರಹಿಸಿದ ಕರ್ನಾಟಕದ ಗ್ರಾಮ ಪಂಚಾಯಿತಿ