ಗ್ರಾಮದೇವಿ ಜಾತ್ರಾ ಉತ್ಸವಕ್ಕೆ 2 ದಿನದಲ್ಲಿ 50 ಟನ್ ಭಂಡಾರ ಪೂರೈಕೆ; ಇಡೀ ಊರು ಭಂಡಾರಮಯ

Published : May 07, 2026, 07:24 AM IST
Savadatti Jatre

ಸಾರಾಂಶ

ಸವದತ್ತಿ ಪಟ್ಟಣದಲ್ಲಿ ಗ್ರಾಮದೇವಿ ಜಾತ್ರೆಯ ಸಂಭ್ರಮ ಹೆಚ್ಚಾಗಿದ್ದು, ದೇವಿಯರನ್ನು ಕಟ್ಟೆಯ ಮೇಲೆ ಪ್ರತಿಷ್ಠಾಪಿಸಿದ ನಂತರ ಸಾಂಪ್ರದಾಯಿಕ ಪೂಜೆಗಳು ಆರಂಭವಾಗಿವೆ. ಮಂಗಳವಾರ, ದೇವಿಯರು ಗೌಡರು, ಕುಲಕರ್ಣಿಗಳು ಸೇರಿದಂತೆ 16 ಮನೆತನಗಳಿಂದ ಉಡಿ ತುಂಬಿಸಿಕೊಂಡಿದ್ದು, ಊರೆಲ್ಲಾ 50 ಟನ್‌ಗೂ ಅಧಿಕ ಭಂಡಾರದಿಂದ ಹಳದಿಮಯವಾಗಿದೆ.

ಬೆಳಗಾವಿ: ಸವದತ್ತಿ ಪಟ್ಟಣದಲ್ಲಿ ಗ್ರಾಮದೇವಿಯ ಜಾತ್ರೆಯ ದಿನದಿಂದ ದಿನಕ್ಕೆ ಸಂಭ್ರಮ ಜೋರಾಗಿದೆ. ದೇವಿಯರ ಪುರಪ್ರವೇಶ ಹಾಗೂ ಗ್ರಾಮದೇವಿಯರನ್ನು ಕಟ್ಟೆಯ ಮೇಲೆ ಪ್ರತಿಷ್ಠಾಪಿಸಿದ ನಂತರ ಮಂಗಳವಾರ ಸಾಂಪ್ರದಾಯಿಕ ಪೂಜಾ ಪದ್ಧತಿಗಳು ಪ್ರಾರಂಭಗೊಂಡಿವೆ.

ದೇವಿಯ ಪ್ರತಿಷ್ಠಾಪಣೆಯ ಮಾರನೇ ದಿನ ಗ್ರಾಮ ದೇವಿಯರು ಊರಿನ ಗೌಡರು, ಕುಲಕರ್ಣಿಯರು ಸೇರಿದಂತೆ 16 ಮನೆಯ ರೈತರ ಮನೆಗಳಿಗೆ ಹೋಗಿ ಉಡಿ ತುಂಬಿಸಿಕೊಳ್ಳುವ ಕಾರ್ಯ ಮಂಗಳವಾರ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಮಂಗಳವಾರ ಬೆಳಿಗ್ಗೆ5 ಗಂಟೆಗೆಯಿಂದ ದೇವಿಯ ಕಟ್ಟಿಯ ಮುಂದೆ ಹೋಮ ಹವನ ಸೇರಿದಂತೆ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು.

ಪಲ್ಲಕ್ಕಿಯ ಆಗಮನ

ಉಭಯ ಗ್ರಾಮದೇವಿಯರ ಪಲ್ಲಕ್ಕಿಗಳು ಊರಿನ ಗೌಡರಾದ ಶಂಕರಗೌಡ ಪಾಟೀಲ, ಕಮತಮನಿ, ಕುಲಕರ್ಣಿ, ಶಾನಬೋಗ, ಮೇಟಿಯವರ ಮನೆಗೆ ಹೋಗಿ ಉಡಿ ತುಂಬಿಸಿಕೊಂಡು ಆನಿ ಅಗಸಿ ಮುಖಾಂತರ ಗ್ರಾಮದ ಬಂಡಿ ಓಣಿಯ ಪ್ರಮುಖ ರೈತರಾದ ವಿರುಪಾಕ್ಷ ಕರಬಸಪ್ಪ ಮಾಮನಿ, ಅಡಿವೆಪ್ಪ ಗಂಗಪ್ಪ ಬೀಳಗಿ, ವಿರುಪಾಕ್ಷಪ್ಪ ಹೆರಕಲ್, ಅಶೋಕ ಹೊಂಗಲ, ಗೂಳಪ್ಪ ರುದ್ರಾಪುರ, ಅಜ್ಜಪ್ಪ ಕೊಣ್ಣೂರ, ವೀರಭದ್ರಪ್ಪ ತುಪ್ಪದರವ ಮನೆಗೆ ಹೋಗಿ ಆರತಿಯೊಂದಿಗೆ ದೇವಿಯರಿಗೆ ಉಡಿ ತುಂಬಲಾಯಿತು. ನಂತರ ಪ್ರಭುನವರ ಮತ್ತು ಒಕ್ಕಲತನ ಓಣಿಯ ರೈತರ ಮಹಾದೇವಪ್ಪ ದೊಡ್ಡಹುಬ್ಬಳ್ಳಿ, ಸತ್ಯಪ್ಪ ಸೋಮಣ್ಣವರ, ಭರಮಪ್ಪ ಅಣ್ಣಿಗೇರಿ, ನಿಂಗಪ್ಪ ಮೊರಬದ(ಶಿರಹಟ್ಟಿ), ಜೀವಪ್ಪ ಮಜ್ಜಗಿ (ಮಡ್ಲಿ), ಸಂತೋಷ ಗೋಡಿ (ಮುತಗೊಂಡ), ಚನಬಸಪ್ಪ ನವಲಗುಂದ, ಮಲ್ಲಿಕಾರ್ಜುನ ಹನಸಿ, ಗದಿಗೆಪ್ಪ ದಾನಗೊಂಡರವರ ಮನೆಗಳಲ್ಲಿ ಉಡಿ ತುಂಬಿದ ಬಳಿಕ ಮತ್ತೆ ಗ್ರಾಮದೇವಿಯರು ಕಟ್ಟಿಗೆ ಪಲ್ಲಕ್ಕಿಗಳು ಆಗಮಿಸಿದವು.

ಭಂಡಾರಮಯ

ಜಾತ್ರೆ ಪ್ರಾರಂಭಗೊಂಡ ಎರಡೇ ದಿನದಲ್ಲಿ 50 ಟನ್‌ಗೂ ಅಧಿಕ ಭಂಡಾರವನ್ನು ಗ್ರಾಮದೇವಿ ಜಾತ್ರಾ ಉತ್ಸವ ಸಮಿತಿ ಜಾತ್ರೆಗೆ ಮೆರವಣಿಗೆಗೆ ಪೂರೈಕೆ ಮಾಡಿದ್ದಾರೆ. ಪಟ್ಟಣವೆಲ್ಲ ಹಳದಿವರ್ಣದಿಂದ ರಂಗೇರಿದ್ದು, ಎಲ್ಲ ಭಂಡಾರಮಯವಾಗಿದೆ. ಯುವಕರು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಸರ್ವರೂ ಭಂಡಾರ ಎರಚುತ್ತ ಶ್ರೀದೇವಿಯ ಕೃಪೆಗೆ ಪಾತ್ರರಾದರು.

ಸಾರ್ವಜನಿಕರಿಂದ ಉಡಿ ತುಂಬಿಸುವ ಕಾರ್ಯಕ್ರಮ ಗುರುವಾರ ಮತ್ತೆ ಪ್ರಾರಂಭವಾಗಲಿದ್ದು, ಮೇ.7ರಂದು ಗೃಹ ಮಂಡಳಿ ಭಾಗ, ಮೇಗಿನಗೇರಿ ಓಣಿ (ಜನತಾಪ್ಲಾಟ್), ಇನಾಮತಿ ಪ್ಲಾಟ್, ಛತ್ರಪತಿ ಶಿವಾಜಿ ಮಹಾರಾಜ ಸರ್ಕಲ್ ಭಾಗ, ಆಶೀರ್ವಾದ ನಗರ, ಹಣಗಮೇರಿ ಓಣಿ, ಗಡೇಕಾರ ಪ್ಲಾಟ್, ಬಸವೇಶ್ವರ ಸರ್ಕಲ್‌ದಿಂದ ಬೀರದೇವರ ದೇವಸ್ಥಾನದ ಮಾರ್ಗವಾಗಿ ಹೆಡ್ ಪೋಸ್ಟ್ ಆಫೀಸ್‌ವರೆಗೆ, ಹುಡೇದ ಓಣಿ, ಬೇವಿನಕಟ್ಟಿ ಓಣಿ, ದೇಸಾಯಿ ಓಣಿ, ಕಟ್ಟಿ ಓಣಿ, ಬೆಣ್ಣಿ ಕಟ್ಟಿ ಓಣಿಯ ನಾಗರಿಕರಿಗೆ ಉಡಿ ತುಂಬಲು ಅವಕಾಶ ಕಲ್ಪಿಸಲಾಗಿದೆ.

PREV
Read more Articles on
click me!

Recommended Stories

ಪಿಯು ಪರೀಕ್ಷಾ ವೆಚ್ಚ ಪಾವತಿಗೆ ಸರ್ಕಾರ 81.20 ಕೋಟಿ ರು. ಬಿಡುಗಡೆ | ಪ್ರೌಢಶಾಲಾ ಶಿಕ್ಷಕರ ಬಡ್ತಿಗಾಗಿ ಅರ್ಹತಾ ಪರೀಕ್ಷೆಯ ವೇಳಾಪಟ್ಟಿ ಪ್ರಕಟ
Bengaluru shock: ಪಕ್ಕದ ಮನೆ ಮಹಿಳೆ ಸ್ನಾನ ಮಾಡುವಾಗ ವಿಡಿಯೋ ಮಾಡಿದ್ದ ಕಿಡಿಗೇಡಿ ಅರೆಸ್ಟ್, ನಡೆದಿದ್ದೇನು?