* ಕನ್ನಡನಾಡಿಗೆ ದ್ರೋಹ ಬಗೆದ ಪಾಲಿಕೆ ನಿವೃತ್ತ ನೌಕರ
* ಜೈ ಮಹಾರಾಷ್ಟ್ರ ಎಂದು ಘೋಷಣೆ ಹಾಕಿದ ಮಹಾರಾಷ್ಟ್ರ ಪ್ರೇಮ ಮೆರೆದ ಕಳಸೇಕರ
* ನನ್ನಿಂದ ಆದ ಪ್ರಮಾದಕ್ಕೆ ಕ್ಷಮೆ ನೀಡಬೇಕು ಎಂದ ಶಿವಾಜಿ
ಬೆಳಗಾವಿ(ಜೂ.02): ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 33 ವರ್ಷ ಸೇವೆ ಸಲ್ಲಿಸಿ ಮೇ.31 ರಂದು ನಿವೃತ್ತಿಯಾದ ದ್ವಿತೀಯ ದರ್ಜೆ ಸಹಾಯಕ ಶಿವಾಜಿ ಕಳಸೇಕರ ಬೀಳ್ಕೊಡುಗೆ ಭಾಷಣ ಮಾಡಿ, ಕೊನೆಗೂ ಜೈ ಮಹಾರಾಷ್ಟ್ರ ಎಂದು ಘೋಷಣೆ ಹಾಕಿದ ಮಹಾರಾಷ್ಟ್ರ ಪ್ರೇಮ ಮೆರೆದಿರುವ ಪ್ರಸಂಗ ನಡೆದಿದೆ. ಇದು ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮೇ. 31 ರಂದು ಈ ಘಟನೆ ನಡೆದಿದೆ. 33 ವರ್ಷಗಳ ಸೇವೆಯ ನಂತರ ನಿವೃತ್ತಿಯಾದ ಶಿವಾಜಿ ಕಳಸೇಕರ ಅವರನ್ನು ಪಾಲಿಕೆಯ ಆಯುಕ್ತರ ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಳಸೇಕರ ಅವರು ಕೊನೆಗೆ ಜೈ ಮಹಾರಾಷ್ಟ್ರ ಎಂದು ಘೋಷಣೆ ಹಾಕಿದರು. ಅಲ್ಲಿದ್ದ ಎಲ್ಲರಿಗೂ ಮುಜುಗರವಾಯಿತು. ಆದರೆ ಯಾರೂ ಅವರನ್ನು ಪ್ರಶ್ನಿಸಲಿಲ್ಲ. ಆಕ್ಷೇಪವೆತ್ತಲಿಲ್ಲ. ನಿವೃತ್ತಿಯಾಗುವವರೆಗೂ ಕರ್ನಾಟಕದ ಹಾಗೂ ಕನ್ನಡಿಗರ ಅನ್ನ ಉಂಡ ಈ ನಾಡದ್ರೋಹಿ ನೌಕರನು ಕೊನೆಗೆ ತನ್ನೊಳಗಿನ ಮಹಾರಾಷ್ಟ್ರ ಪರವಾದ ಮನೋ ಇಂಗಿತವನ್ನು ಹೊರಗೆಡಹಿದ್ದಾನೆ.
Belagavi: ಶಾಸಕ ಅಭಯ್ ಪಾಟೀಲ್ ವಿರುದ್ಧ ಮುಗಿಬಿದ್ದ ಮುಸ್ಲಿಂ ಮುಖಂಡರು!
ಘಟನೆಯನ್ನು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತೀವ್ರವಾಗಿ ಖಂಡಿಸಿದ್ದಾರೆ. ಕನ್ನಡಿಗರ ಅನ್ನ ಉಂಡ ಈ ನಾಡದ್ರೋಹಿ ನೌಕರನ ಪಿಂಚಣಿ ತಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಕ್ಷಮೆಕೋರಿದ ಕಳಸೇಕರ
ಕನ್ನಡಪರ ಸಂಘಟನೆಗಳು ಈ ಘಟನೆಯನ್ನು ತೀವ್ರವಾಗಿ ಖಂಡಿಸಿ, ಪಿಂಚಣಿ ತಡೆಯುವಂತೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಕೊನೆಗೂ ತನ್ನ ಪ್ರಮಾದಕ್ಕಾಗಿ ನಿವೃತ್ತ ನೌಕರ ಶಿವಾಜಿ ಕಳಸೇಕರ ಕ್ಷಮೆಕೋರಿದ್ದಾರೆ. ನನಗೆ ಅರಿವಿಲ್ಲದೇ ಬಾಯ್ತಪ್ಪಿನಿಂದ ಜೈ ಮಹಾರಾಷ್ಟ್ರ ಘೋಷಣೆ ಬಾಯ್ತಪ್ಪಿನಿಂದ ಹಾಗೆ ಬಂತು. ನನ್ನಿಂದಾಗಿ ಪಾಲಿಕೆಗೆ ಕೆಟ್ಟಹೆಸರು ಬರಬಹುದಾಗಿದ್ದು, ನನ್ನಿಂದ ಆದ ಪ್ರಮಾದಕ್ಕೆ ಕ್ಷಮೆ ನೀಡಬೇಕು ಎಂದು ಪಾಲಿಕೆ ಆಯುಕ್ತರಿಗೆ ಲಿಖಿತ ಪತ್ರ ಬರೆದು ಕ್ಷಮೆಕೋರಿದ್ದಾನೆ.