
ಬೆಂಗಳೂರು(ಜೂ.02): ನಗರದ ಎಲ್ಲ ರಸ್ತೆಗಳ ಗುಂಡಿಗಳನ್ನು ಜೂನ್ 6ರೊಳಗೆ ಮುಚ್ಚುವುದಾಗಿ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಮೇ ತಿಂಗಳಲ್ಲಿ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಗುಂಡಿ ಮುಚ್ಚಲು ಸಾಧ್ಯವಾಗಲಿಲ್ಲ. ಕಳೆದ ಒಂದು ವಾರದಿಂದ ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಿದ್ದು, ಸುಮಾರು 5,500 ಗುಂಡಿ ಮುಚ್ಚಿದ್ದೇವೆ. ಜೂನ್ 6ರ ಒಳಗೆ ನಗರದ ರಸ್ತೆಗಳನ್ನು ಗುಂಡಿ ಮುಕ್ತವಾಗಿಸುತ್ತೇವೆ ಎಂದು ಭರವಸೆ ನೀಡಿದರು.
ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಚಿಕ್ಕದಾಗಿದ್ದ ರಸ್ತೆ ಗುಂಡಿಗಳು ಈಗ ಎರಡು ಪಟ್ಟು ದೊಡ್ಡದಾಗಿವೆ. ಆರಂಭದಲ್ಲಿ 60 ಲೋಡ್ ಬಿಟುಮಿನ್‌ನಲ್ಲಿ ನಗರದ ಎಲ್ಲ ರಸ್ತೆಗಳನ್ನು ಗುಂಡಿ ಮುಕ್ತವಾಗಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈಗ 250 ಲೋಡ್ ಬಿಟುಮಿನ್ ಪೂರೈಕೆ ಮಾಡಿದರೂ ಸಾಕಾಗದ ಸ್ಥಿತಿ ನಿರ್ಮಾಣಗೊಂಡಿದೆ.
Potholes: ಬೆಂಗ್ಳೂರಿನ ಗುಂಡಿ ಮುಚ್ಚುವ ಆದೇಶಕ್ಕೆ ಇಂದೇ ಡೆಡ್‌ಲೈನ್..!
ಪೂರ್ವ ಮುಂಗಾರು ಅವಧಿಯಲ್ಲಿ ಉತ್ತಮ ಮಳೆ ಆಗಿರುವುದರಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿದೆ. ಹೀಗಾಗಿ, ರಾತ್ರಿ ವೇಳೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಸಾಧ್ಯವಾದಷ್ಟುಹಗಲು ವೇಳೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದೇವೆ. ಸದ್ಯ17ರಿಂದ 20 ಲೋಡ್ ಬಿಟುಮಿನ್ ಪೂರೈಕೆ ಆಗುತ್ತಿದೆ ಎಂದು ಅವರು ತಿಳಿಸಿದರು.
BBMP: ಹೈಕೋರ್ಟ್ ತರಾಟೆಗೆ ತೆಗೆದುಕೊಂಡ್ರೂ ರಸ್ತೆ ದುರಸ್ತಿಗೆ ಬಿಬಿಎಂಪಿ ನಕಾರ..!
ಫೈಥಾನ್ ಯಂತ್ರ ನಿರ್ವಹಣೆ ಹೊಣೆ ಲೋಕೇಶ್ ಹೆಗಲಿಗೆ
ಪಾಲಿಕೆಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರು ರಸ್ತೆ ಗುಂಡಿ ಮುಚ್ಚುವ ಪೈಥಾನ್ ಯಂತ್ರ ನಿರ್ವಹಣೆ ಮಾಡುತ್ತಿದ್ದರು. ಪೈಥಾನ್ ಯಂತ್ರ ನೀಡಿದ ಸಂಸ್ಥೆಯ ನಿರ್ದೇಶಕರ ಮೇಲೆ ಹಲ್ಲೆ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪೈಥಾನ್ ಯಂತ್ರದ ನಿರ್ವಹಣೆಯ ಜವಾಬ್ದಾರಿಯನ್ನು ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್ ಅವರಿಗೆ ವಹಿಸಲಾಗಿದೆ ಎಂದು ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.
ಹೈಕೋರ್ಟ್ ಸಹ ಮುಂದಿನ ವಿಚಾರಣೆ ವೇಳೆ ಹಲ್ಲೆ ಸಂಬಂಧ ನೀಡಿದ ಪ್ರಹ್ಲಾದ್ ವಿರುದ್ಧ ನೀಡಿದ ದೂರಿನ ಮೇರೆಗೆ ಕೈಗೊಂಡ ಕ್ರಮದ ಕುರಿತು ಮಾಹಿತಿ ನೀಡುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಯೋಜನಾ ವಿಭಾಗದ ವಿಶೇಷ ಆಯುಕ್ತ ರವೀಂದ್ರ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದರು.
ಕಾವೇರಿ 5ನೇ ಹಂತ ಕಾಮಗಾರಿ ಸ್ಥಗಿತ
ಮಳೆಗಾಲ ಮುಗಿಯುವವರೆಗೆ ಜಲಮಂಡಳಿಯ ಕಾವೇರಿ 5ನೇ ಹಂತದ ಕಾಮಗಾರಿ ಸೇರಿ ಇನ್ನಿತರ ಇಲಾಖೆಗಳ ಕಾಮಗಾರಿ ನಡೆಸದಂತೆ ಸೂಚಿಸಲಾಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಕಾಮಗಾರಿಯ ಸ್ಥಳದಲ್ಲಿನ ನಿರ್ಮಾಣ ಪರಿಕರಗಳನ್ನು ತೆರವುಗೊಳಿಸುವಂತೆಯೂ ತಿಳಿಸಲಾಗಿದೆ ಎಂದು ತುಷಾರ್ ಗಿರಿನಾಥ್ ಹೇಳಿದರು.