ಬೆಳಗಾವಿ ಗಡಿ ವಿವಾದ ಹಳೇ ವಿವಾದಕ್ಕೆ ಮರುಜೀವ, ನಿಪ್ಪಾಣಿ ನಗರಸಭೆ ಮೇಲಿನ ಭಗವಾ ಧ್ವಜ ತೆರವಿಗೆ ಆಗ್ರಹ

By Suvarna News  |  First Published Dec 11, 2022, 7:35 PM IST


 3 ದಶಕಗಳಿಂದ ನಿಪ್ಪಾಣಿ ನಗರ ಸಭೆ ಕಟ್ಟಡ ಮೇಲೆ ಹಾರಾಡುತ್ತಿದೆ ಭಗವಾ ಧ್ವಜ. ಮಹಾರಾಷ್ಟ್ರ ಸೇರ್ಪಡೆ ಬಯಕೆ ಪ್ರಸ್ತಾಪಿಸಿ 1990ರಲ್ಲಿ ನಿಪ್ಪಾಣಿ ನಗರಸಭೆ ಹೊರಡಿಸಿದ್ದ ಠರಾವು ಏನು? ಭಗವಾ ಧ್ವಜ ತೆರವಿಗೆ ಒತ್ತಾಯ ಬೆನ್ನಲ್ಲೇ ನಿಪ್ಪಾಣಿ ನಗರಸಭೆಗೆ ಬಿಗಿ ಭದ್ರತೆ


ವರದಿ: ಮಹಾಂತೇಶ ಕುರಬೇಟ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ (ಡಿ.11): ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ಮಧ್ಯೆಯೇ ಮೂರು ದಶಕಗಳ ಹಳೆಯ ವಿವಾದ ಮರುಜೀವ ಪಡೆದಿದೆ. ನಿಪ್ಪಾಣಿ ನಗರ ಸಭೆ ಕಟ್ಟಡ ಮೇಲೆ 31 ವರ್ಷಗಳಿಂದ ಹಾರಾಡುತ್ತಿರುವ ಭಗವಾ ಧ್ವಜ ತೆರವಿಗೆ ಇದೀಗ ಆಗ್ರಹ ಕೇಳಿ ಬರುತ್ತಿದೆ.  ಬೆಳಗಾವಿ ಜಿಲ್ಲೆಯ ಗಡಿಯಲ್ಲಿರುವ ನಗರ ಅಂದ್ರೆ ಅದು ನಿಪ್ಪಾಣಿ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ನಿಪ್ಪಾಣಿಯ ನಗರಸಭೆ ಕಟ್ಟಡ ಮೇಲೆ ಕಳೆದ ಮೂರು ದಶಕಗಳಿಂದ ಭಗವಾ ಧ್ವಜ ಹಾರಾಡುತ್ತಿದೆ. ಈ ಭಗವಾ ಧ್ವಜ ತೆರವಿಗೆ ಹಲವು ವರ್ಷಗಳಿಂದ ಕನ್ನಡಪರ ಸಂಘಟನೆಗಳು ಹೋರಾಟ ನಡೆದಿದ್ದರೂ ಫಲ ಮಾತ್ರ ಸಿಕ್ಕಿಲ್ಲ.

Tap to resize

Latest Videos

ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಇದೀಗ ಈ ವಿವಾದ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ನಿಪ್ಪಾಣಿ ನಗರಸಭೆ ಕಟ್ಟಡದ ಮೇಲಿನ ಭಗವಾ ಧ್ವಜ ತೆರವಿಗೆ ಆಗ್ರಹಗಳು ಕೇಳಿ ಬರುತ್ತಿವೆ. ಇದರಿಂದ ಹಳೇ ವಿವಾದಕ್ಕೆ ಮರು ಜೀವ ಬಂದಂತಾಗಿದೆ. ನಾಡದ್ರೋಹಿ ‌ಎಂಇಎಸ್ ಆಡಳಿತ ‌ಅವಧಿಯಲ್ಲಿ ನಗರ ಸಭೆ ಮೇಲೆ ಈ ಭಗವಾ ಧ್ವಜ ಅಳವಡಿಸಲಾಗಿದೆ. 1990 ರ ಮೇ 29ರಂದು ನಿಪ್ಪಾಣಿ ನಗರಸಭೆ ಠರಾವು ಒಂದನ್ನು ಪಾಸ್ ಮಾಡಿತ್ತು. ನಿಪ್ಪಾಣಿ ನಗರಸಭೆ ಕಟ್ಟಡ ಮೇಲೆ ಭಗವಾ ಧ್ವಜ ಹಾರಿಸಬೇಕು. ಇದು ನಿಪ್ಪಾಣಿಯ ಬಹುತೇಕ ಮರಾಠಿ ಭಾಷಿಕರ ಆಸೆಯಾಗಿದೆ. ನಿಪ್ಪಾಣಿ ಮರಾಠಿ ಭಾಷಿಕರು ಮಹಾರಾಷ್ಟ್ರ ಸೇರಲು ಕಷ್ಟಪಡುತ್ತಿದ್ದಾರೆ. ಗಡಿವಿವಾದ ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ. ನಿಪ್ಪಾಣಿ ನಗರಸಭೆ ಕಟ್ಟಡ ಮೇಲೆ ಭಗವಾ ಧ್ವಜ ಹಾರಿಸಿದ ಬಳಿಕವೇ ನಾವು ಅಧಿಕಾರ ಸ್ವೀಕರಿಸುತ್ತೇವೆ. ಎಲ್ಲರ ಒಪ್ಪಿಗೆ ಮೇರೆಗೆ ನಿಪ್ಪಾಣಿ ನಗರಸಭೆ ಕಟ್ಟಡ ಮೇಲೆ ಭಗವಾ ಧ್ವಜ ಹಾರಿಸಲಾಗುತ್ತಿದೆ. ನಗರಸಭೆ ಆಯುಕ್ತರು ಭಗವಾ ಧ್ವಜದ ರಕ್ಷಣೆ ಮಾಡಬೇಕು ಎಂದು ನಿಪ್ಪಾಣಿ ನಗರಸಭೆ ನಿರ್ಣಯ ತಗೆದುಕೊಂಡಿತ್ತು.

ಈ ಹಿಂದೆ ಬೆಳಗಾವಿ ‌ಮಹಾನಗರ ಪಾಲಿಕೆಯ ಕಚೇರಿ ಮೇಲೆಯೂ ಭಗವಾ ಧ್ವಜ ಹಾರಾಡುತ್ತಿತ್ತು. ಆಗಲೂ ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಕಾನೂನು ಹೋರಾಟ ನಡೆಸಿ ಬೆಳಗಾವಿ ಮಹಾನಗರ ಪಾಲಿಕೆ ಮೇಲಿನ ಭಗವಾ ಧ್ವಜ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ನಿಪ್ಪಾಣಿ ನಗರ ಸಭೆ ಮೇಲಿನ ಭಗವಾ ಧ್ವಜ ತೆರವಿಗೆ ಭೀಮಪ್ಪ ಗಡಾದ್ ಕಳೆದೊಂದು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಗಡಿ ವಿಚಾರ ತಾರಕಕ್ಕೇರುತ್ತಿದ್ದಂತೆ ಹಳೆ ವಿವಾದಕ್ಕೆ ಮರುಜೀವ ಪಡೆದುಕೊಂಡಿದೆ. ನಿಪ್ಪಾಣಿ ನಗರಸಭೆ ಕಟ್ಟಡ ಮೇಲಿನ ಭಗವಾ ಧ್ವಜ ತೆರವಿಗೆ ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಒತ್ತಾಯಿಸಿದ್ದಾರೆ. 

ನಿಪ್ಪಾಣಿ ನಗರಸಭೆ ಕಟ್ಟಡ ಮೇಲಿನ ಭಗವಾ ಧ್ವಜ ತೆರವಿಗೆ ಆಗ್ರಹಿಸಿ ಬೆಳಗಾವಿ ಡಿಸಿ, ಎಸ್‌ಪಿಗೆ ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಪತ್ರ ಮೂಲಕ ಮನವಿ ಮಾಡಿದ್ದಾರೆ. ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ ಭೀಮಪ್ಪ ಗಡಾದ್, 'ಕಾನೂನು ಬಾಹಿರವಾಗಿ ಹಾರಾಡುತ್ತಿರುವ ಎಂಇಎಸ್ ಭಗವಾ ಧ್ವಜ ತೆರವುಗೊಳಿಸಬೇಕು. ಬೆಳಗಾವಿ ಜಿಲ್ಲಾಧಿಕಾರಿ, ಎಸ್‌ಪಿಗೆ ಮನವಿ ಸಲ್ಲಿಸಿದ್ದೇನೆ. ನಿಪ್ಪಾಣಿ ನಗರಸಭೆ ಮೇಲೆ 31 ವರ್ಷಗಳಿಂದ ನಾಡದ್ರೋಹಿ ಎಂಇಎಸ್‌ನ ಧ್ವಜ ಹಾರಾಡುತ್ತಿದೆ. ಕಳೆದ ವರ್ಷ ಡಿಸೆಂಬರ್ 22ರಂದು ಸಿಎಂ, ಪೌರಾಡಳಿತ ಸಚಿವರಿಗೆ ಪತ್ರ ಬರೆದಿದ್ದೆ. ದೂರು ನೀಡಿ ಒಂದು ವರ್ಷವಾದರೂ ಕ್ರಮ ಕೈಗೊಳ್ಳುತ್ತಿಲ್ಲ.‌ ಈ ಸರ್ಕಾರ ಕನ್ನಡಪರ ಇದೆಯೋ ಇಲ್ವೋ ಎಂಬ ಅನುಮಾನ ಕಾಡುತ್ತಿದೆ.

ಕಚೇರಿಗಳ ಮೇಲೆ ರಾಷ್ಟ್ರೀಯ ಬಾವುಟ ಹಾಗೂ ಸರ್ಕಾರದಿಂದ ಅನುಮೋದಿತ ಬಾವುಟ ಮಾತ್ರ ಹಾರಿಸಬೇಕು. 1964ರ ಕರ್ನಾಟಕ ಪೌರಸಭೆಗಳ ಅಧಿನಿಯಮ ಸೆಕ್ಷನ್ 372ಎ ರಲ್ಲಿ ಇದನ್ನು ವಿವರಿಸಲಾಗಿದೆ. ಈ ನಿಯಮ ಉಲ್ಲಂಘಿಸಿದ ವ್ಯಕ್ತಿಗೆ 3 ತಿಂಗಳ ಜೈಲು ಶಿಕ್ಷೆ ಇದೆ. ಪ್ರತಿಯೊಂದು ದಿನಕ್ಕೆ 500 ರೂ. ದಂಡ ವಿಧಿಸುವ ಬಗ್ಗೆಯೂ ಉಲ್ಲೇಖವಿದೆ. ಹೀಗಾಗಿ ನಿಪ್ಪಾಣಿ ನಗರಸಭೆ ಕಟ್ಟಡ ಮೇಲಿನ ಭಗವಾ ಧ್ವಜ ಕೂಡಲೇ ತೆರವುಗೊಳಿಸಿ. ಇಲ್ಲವಾದ್ರೆ ಬೆಳಗಾವಿ ಅಧಿವೇಶನ ವೇಳೆ ನಾವೇ ಎಂಇಎಸ್ ಭಗವಾ ಧ್ವಜ ಕಿತ್ತು ಕನ್ನಡ ಬಾವುಟ ಹಾರಿಸುತ್ತೇವೆ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಜಿಲ್ಲಾಡಳಿತ, ರಾಜ್ಯ ಸರ್ಕಾರವೇ ಹೊಣೆ ಆಗುತ್ತದೆ. ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಸಹ ಮೌನವಹಿಸಿದ್ದಾರೆ. ಕಳೆದ ವರ್ಷ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಎಂಟಿಬಿ ನಾಗರಾಜ್‌ಗೆ ಮ‌ನವಿ ಸಲ್ಲಿಸಿದ್ದೆ. ಮನವಿ ಸಲ್ಲಿಸಿ ಒಂದು ವರ್ಷವದರೂ ಕ್ರಮ ಕೈಗೊಂಡಿಲ್ಲ' ಎಂದು ಆಕ್ರೋಶ ಹೊರಹಾಕಿದ್ದಾರೆ.

ಲೋಕಸಭೆಯಲ್ಲಿ ಪ್ರಸ್ತಾಪವಾದ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ

ನಿಪ್ಪಾಣಿ ನಗರಸಭೆ ಕಟ್ಟಡಕ್ಕೆ ಬಿಗಿ ಭದ್ರತೆ: ಇನ್ನು ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಮುನ್ನಲೆಗೆ ಬರುತ್ತಿದ್ದಂತೆ ಎಲ್ಲಾ ಸೂಕ್ಷ್ಮ ಸ್ಥಳಗಳಲ್ಲಿ ಬಿಗಿ ಭದ್ರತೆಗೆ ಎಸ್‌ಪಿ ಡಾ.ಸಂಜೀವ್ ಪಾಟೀಲ್ ಸೂಚನೆ ನೀಡಿದ್ದಾರೆ. ಗಡಿ ಭಾಗದ 21 ಚೆಕ್‌ಪೋಸ್ಟ್‌ಗಳಲ್ಲಿ ಭದ್ರತೆ ಮುಂದುವರಿಸಿದ್ದಾರೆ. ಅದೇ ರೀತಿ ನಿಪ್ಪಾಣಿ ನಗರಸಭೆ ಕಟ್ಟಡ ಎದುರು ಒಂದು ಡಿಎಆರ್ ವಾಹನ ನಿಯೋಜಿಸಿ 20ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದ ರೀತಿ ಬೆಳಗಾವಿ ಎಸ್‌ಪಿ ಡಾ.ಸಂಜೀವ್ ಪಾಟೀಲ್ ಕ್ರಮ ವಹಿಸಿದ್ದಾರೆ.

Border Dispute: ಬೆಳಗಾವಿ ಗಡಿ ಸಂಘರ್ಷಕ್ಕೆ ಕೇಂದ್ರ ಮಧ್ಯಪ್ರವೇಶ: ಅಮಿತ್‌ ಶಾ ಭೇಟಿಯಾಗಲಿರುವ ಸಂಸದರು

ಇನ್ನು ಮತ್ತೊಂದೆಡೆ ಸುವರ್ಣಸೌಧದಲ್ಲಿ ಡಿಸೆಂಬರ್ 19ರಿಂದ ಚಳಿಗಾಲ ‌ಅಧಿವೇಶನ ಆರಂಭವಾಗಲಿದ್ದು ದಿನಗಣನೇ ಆರಂಭವಾಗಿದೆ. ಅಧಿವೇಶನ ಯಶಸ್ವಿಗೊಳಿಸಲು ಬೆಳಗಾವಿ ಜಿಲ್ಲಾಡಳಿತವೂ ಅಣಿಯಾಗಿದೆ. ಇದರ ಮಧ್ಯೆಯೇ ನಿಪ್ಪಾಣಿ ನಗರಸಭೆ ಕಟ್ಟಡ ಮೇಲಿನ ಭಗವಾ ಧ್ವಜ ಹಾರಾಟ ವಿವಾದ ಮರುಜೀವ ಪಡೆದುಕೊಂಡಿದ್ದು ಬೆಳಗಾವಿ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಂತೂ ಸುಳ್ಳಲ್ಲ.

click me!