ಕಾಡು ಮಲ್ಲಿಗೆ ದಟ್ಟವಾಗಿ ಬೆಳೆದರೂ ಪೂಜೆಗೂ ಬಳಸೋಲ್ಲ, ಹೆಣ್ಣುಮಕ್ಕಳು ಮುಡಿಯೊಲ್ಲ
ಮಲೆನಾಡಿನ ಕಾಡುಮಲ್ಲಿಗೆ ನಿತ್ಯ ಬಳಕೆಯ ಪುಪ್ಪಗಳಂತಲ್ಲ
ಯಾವುದೇ ಅಲಂಕಾರಕ್ಕೆ ಬಳಸೋಲ್ಲ , ಬೆಳಗ್ಗೆ ಅರಳಿ ಸಂಜೆ ಬಾಡೋ ಮಲ್ಲಿಗೆ
ಕಾಡುಮಲ್ಲಿಗೆಯ ಜೀವಿತಾವಧಿ ಒಂದೇ ಒಂದು ದಿನಮಾತ್ರ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಡಿ.11) : ಕಾಫಿನಾಡನ್ನು ಭೂಲೋಕದ ತೋಟವೆಂದರೆ ತಪ್ಪಲ್ಲ. ನಯನ ಮನೋಹರವಾದ ಈ ತೋಟದಲ್ಲಿ ಕಣ್ಣಿಗೆ ಕಂಡಿದ್ದೆಲ್ಲವೂ ಸುಂದರ. ಇವುಗಳಲ್ಲಿ ಕಾಡುಮಲ್ಲಿಗೆಯೂ ಒಂದಾಗಿದೆ.
ಕಾಫಿನಾಡಿನಲ್ಲಿ ಚಳಿಗಾಲದ ವಿಶೇಷ ಅತಿಥಿ ಅಂದರೆ ಅದುವೇ ಕಾಡುಮಲ್ಲಿಗೆ. ಇತರೆ ಪುಷ್ಪಗಳಿಗಿಂತ ತಾನೇನೂ ಕಮ್ಮಿಯಿಲ್ಲವೆಂಬಂತೆ ಇದು ಕೂಡ ತನ್ನ ಸೊಬಗಿನ ಸುವಾಸನೆಯನ್ನ ಸೂಸುತ್ತದೆ. ಅದರಲ್ಲಿಯೂ ಕೆರೆ-ಹಳ್ಳದ ಅಕ್ಕ ಪಕ್ಕ ಮುಗಿಲೆತ್ತರಕ್ಕೆ ಬೆಳೆದು ನಿಂತ ಈ ಕಾಡುಮಲ್ಲಿಗೆಯ ಹೂವಿನ ರಾಶಿ ನೋಡಲು ಮನಸಿಗೆ ಮುದ ನೀಡುತ್ತೆ. ಕಾಡು ಮಲ್ಲಿಗೆಯ ರಾಶಿ ರಾಶಿ ಹೂಗಳು ತೋಟಗಳಲ್ಲಿ ಅರಳಿದ ಪುಷ್ಪಲತೆಗಳಿಗಿಂತ ಭಿನ್ನ ವಿಭಿನ್ನ. ಹಾಲಿನ ನೊರೆಯಂತೆ ಹೊಳೆಯುವ ಈ ಹೂವು ವರ್ಷದ ಒಂದು ತಿಂಗಳು ಮಾತ್ರ ಕಾಣಲು ಸಾಧ್ಯ.
ಚಳಿಗಾಲದಲ್ಲಿ ಮಾತ್ರ ಅರಳುವ ಹೂವು: ಹೂವೆಂದರೆ ಸೌಂದರ್ಯದ ಕಲಶವಿದ್ದಂತೆ. ಭೇದ-ಭಾವವಿಲ್ಲದ ಸುಂದರ ಲತೆಯಲ್ಲಿ ಸೌಂದರ್ಯ ಮನೆಮಾಡಿರುತ್ತೆ. ಯಾವುದೇ ಹೂವಾದರೂ ತನ್ನ ವಿಭಿನ್ನವಾದ ಸುಂದರ ತಂಪು-ಕಂಪಿನಿಂದ ವಿಶೇಷತೆ ಗಳಿಸಿರುತ್ತೆ. ದಿನಂಪ್ರತಿ ನೀರಾಯಿಸಿ ಪೋಷಿಸೋ ಹೂವಿಗಿಂತ ಈ ಕಾಡುಮಲ್ಲಿಗೆ ಸುಂದರ ಅಂದ್ರೆ ತಪ್ಪಿಲ್ಲ. ಮಲೆನಾಡಿನ ದಟ್ಟಾರಣ್ಯದಲ್ಲಿ ಸಿಗೋ ಈ ಬಿಳಿಯ ಕಾಡುಮಲ್ಲಿಗೆ ಚಳಿಗಾಲದಲ್ಲಿ ಮಾತ್ರ ಅರಳಿ ಜನರನ್ನು ಆಕರ್ಷಿಸುತ್ತೆ. ಕಾಫಿ ತೋಟಗಳ ನಡುವೆ ಅರಳೋ ಈ ಕಾಡುಮಲ್ಲಿಗೆ ಎಲ್ಲಾ ಋತುವಿನಲ್ಲೂ ಅರಳೋಲ್ಲ. ಡಿಸೆಂಬರ್ ತಿಂಗಳಲ್ಲಿ ಮಾತ್ರ ಇದರ ಜನನ. ಪ್ರವಾಸಿಗರಿಗೆ, ದಾರಿಹೋಕರಿಗೆ, ಸೌಂದರ್ಯ ಪ್ರಿಯರ ಮನಸ್ಸಿಗೆ ಈ ಕಾಡುಮಲ್ಲಿಗೆ ಮುದ ನೀಡುತ್ತೆ. ಈ ಹೂವನ್ನ ಮದ್ರಾಸಿ ಹೂವು ಅಂತಲೂ ಕೆಲವರು ಕರೆಯುತ್ತಾರೆ.
Chikkamagaluru: ಹಸಿರು ಪರ್ವತಕ್ಕೆ ನೀಲಿ ಹೊದಿಕೆ; ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸಿದ ಕುರಂಜಿ ಹೂ
ಒಂದು ದಿನ ಮಾತ್ರ ಜೀವಿತಾವಧಿ: ಚಿಕ್ಕಮಗಳೂರಿನ ಹಿರೇಕೊಳಲೆ, ಕೈಮರ, ಮಲ್ಲೇನಹಳ್ಳಿ ಭಾಗದಲ್ಲಿ ಯತ್ತೆಚ್ಚವಾಗಿ ಕಾಣಲಿರೋ ಈ ಕಾಡುಮಲ್ಲಿಗೆ ಹಾಲ್ನೋರೆಯ ಬೆಳ್ಳನೆ ರಾಶಿಯಂತಿದೆ. ಈ ಹೂ ಮಲ್ಲಿಗೆಯಂತೆ ಕಂಡ ಬಂದ್ರೂ ಕೂಡ ಇದು ಮಲ್ಲಿಗೆಯಲ್ಲ. ಸಾವಿರಾರು ಸಂಖ್ಯೆಯಲ್ಲಿ ದಟ್ಟವಾಗಿ ಬೆಳೆದು ನಿಂತಿದ್ರೂ ಪೂಜೆಗೂ ಬಳಸೋಲ್ಲ. ರಸ್ತೆಬದಿಯಲ್ಲಿ ಅಲ್ಲಲ್ಲೇ ಸಾಲಾಗಿ ಅರಳಿ ನಿಂತು ಕಣ್ಣು ಹಾಯಿಸಿದಲ್ಲೆಲ್ಲಾ ಬಿಳಿಯ ಬಣ್ಣ ಚೆಲ್ಲಿದಂತ್ತಿದೆ. ಈ ಕಾಡು ಮಲ್ಲಿಗೆ ನಿತ್ಯ ಬಳಕೆಯ ಪುಪ್ಪಗಳಂತಲ್ಲ. ಈ ಹೂವನ್ನು ಯಾವುದೇ ಅಲಂಕಾರಕ್ಕೆ ಬಳಸೋಲ್ಲ. ಹೆಣ್ಣುಮಕ್ಕಳು ಮುಡಿಯೋದು ಇಲ್ಲ. ಬೆಳಗ್ಗೆ ಅರಳಿ ಸಂಜೆ ಬಾಡೋ ಈ ಕಾಡುಮಲ್ಲಿಗೆಯ ಜೀವಿತಾವಧಿ ಒಂದೇ ಒಂದು ದಿನಮಾತ್ರವಾಗಿದ್ದು, ಇರುವಷ್ಟು ದಿನ ಜನಮಾನಸದಲ್ಲಿ ಉಳಿಯುವಂತ್ತಾಗಿದೆ ಎನ್ನುವುದು ಸ್ಥಳೀಯರಾದ ಶಿವಕುಮಾರ್ ಅಭಿಪ್ರಾಯಿಸುತ್ತಾರೆ.
ಅಲ್ಪಾವಧಿಯಲ್ಲೆ ಮಸಣ ಸೇರೋ ಈ ಮಲ್ಲಿಗೆ ಸ್ವರೂಪದ ಲತೆಯು ತನ್ನ ಕಂಪನ್ನು ಸೂಸಿ ಮಿಂಚಿ ಮರೆಯಾದ್ರೂ ಸದಾ ಕಾಲ ಅದರ ಸೌಂದರ್ಯವನ್ನಂತೂ ಇಲ್ಲಿನೋರು ಮರೆಯೋಲ್ಲ. ಪ್ರಕೃತಿ ತಾನು ನೀಡಿದ ಅನೇಕ ವೈಶಿಷ್ಟ್ಯಗಳಲ್ಲಿ ಇದಕ್ಕೂ ತನ್ನದೇ ಆದ ಸ್ಥಾನವನ್ನು ನೀಡಿದೆ ಅನ್ನೋದಂತೂ ಸತ್ಯ.