ಬಿಸಿಲಿನಿಂದ ರಕ್ಷಣೆಗಾಗಿ ಸವಾರರಿಗೆ ಬಂತು ಟ್ರಾಫಿಕ್‌ ಸಿಗ್ನಲ್‌ನಲ್ಲಿ ನೆರಳಿನ ಟೆಂಟ್‌

Published : May 06, 2026, 10:23 AM IST
Belagavi

ಸಾರಾಂಶ

ಬೆಳಗಾವಿಯಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ವಾಹನ ಸವಾರರನ್ನು ರಕ್ಷಿಸಲು, ರಾಣಿ ಚನ್ನಮ್ಮ ವೃತ್ತದ ಸಿಗ್ನಲ್‌ನಲ್ಲಿ ನೆರಳಿನ ಟೆಂಟ್‌ಗಳನ್ನು ಅಳವಡಿಸಲಾಗಿದೆ. ಮಹಾನಗರ ಪಾಲಿಕೆ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಈ ಜಂಟಿ ಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಗರದ ಇತರ ಭಾಗಗಳಿಗೂ ವಿಸ್ತರಿಸಲು ಬೇಡಿಕೆ ಹೆಚ್ಚಿದೆ.

ಬೆಳಗಾವಿ: ಬೆಳಗಾವಿ ನಗರದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು, ಸದ್ಯ ನಿತ್ಯ 36ರಿಂದ 38 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುತ್ತಿದೆ. ಮಧ್ಯಾಹ್ನದ ವೇಳೆ ಬಿಸಿಲಿನ ತೀವ್ರತೆ ಹೆಚ್ಚಾಗಿ, ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಸಂಚಾರ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಣಿ ಚನ್ನಮ್ಮ ವೃತ್ತದ ಸಿಗ್ನಲ್‌ ಪಾಯಿಂಟ್‌ನಲ್ಲಿ ವಾಹನ ಸವಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಟೆಂಟ್‌ಗಳನ್ನು (ನೆರಳಿನ ಪರದೆಗಳನ್ನು) ಅಳವಡಿಸಲಾಗಿದೆ.

ತಾತ್ಕಾಲಿಕ ಶೆಡ್‌ ನಿರ್ಮಾಣ

ನಗರದಲ್ಲಿ ಇದೇ ಮೊದಲ ಬಾರಿಗೆ ಕೈಗೊಳ್ಳಲಾದ ಈ ಕ್ರಮವನ್ನು ಬೆಳಗಾವಿ ಮಹಾನಗರ ಪಾಲಿಕೆ, ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಸಂಯುಕ್ತವಾಗಿ ಜಾರಿಗೊಳಿಸಿವೆ. ಸಿಗ್ನಲ್‌ಗಾಗಿ ಕಾಯುವ ವೇಳೆ ಬಿಸಿಲಿನ ತಾಪದಿಂದ ಬಳಲುತ್ತಿದ್ದ ವಾಹನ ಸವಾರರಿಗೆ ತಾತ್ಕಾಲಿಕ ಶೆಡ್‌ಗಳ ಮೂಲಕ ಕೆಲ ಸಮಯದವರೆಗೆ ರಕ್ಷಣೆ ಒದಗಿಸಲಿದೆ. ಕಾಕತಿವೇಸ್‌ ರಸ್ತೆಯ ಭಾಗದಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದೆ.

ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು, ಹಿರಿಯ ನಾಗರಿಕರು ಮತ್ತು ಮಹಿಳೆಯರು ಈ ನೆರಳಿನ ವ್ಯವಸ್ಥೆಯಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ. ತೀವ್ರ ಬಿಸಿಲಿನಲ್ಲಿ ನಿಲ್ಲುವುದು ಕಷ್ಟವಾಗುತ್ತಿದ್ದಾಗ ಈ ಟೆಂಟ್‌ಗಳು ಅವರಿಗೆ ತಾತ್ಕಾಲಿಕ ವಿಶ್ರಾಂತಿ ನೀಡುವಂತಾಗಿವೆ. ಸಿಗ್ನಲ್‌ನಲ್ಲಿ ಕೆಲವು ನಿಮಿಷಗಳಾದರೂ ತಂಪಿನ ಅನುಭವ ಸಿಗುತ್ತಿರುವುದರಿಂದ ಸಾರ್ವಜನಿಕರಿಂದ ಈ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿಜಯಪುರದಲ್ಲಿ ಯಶಸ್ವಿ

ಈ ಯೋಜನೆ ಈಗಾಗಲೇ ವಿಜಯಪುರದಲ್ಲಿ ಯಶಸ್ವಿಯಾಗಿ ಜಾರಿಗೊಂಡಿದ್ದು, ಅದನ್ನು ಆಧರಿಸಿ ಅದೇ ಮಾದರಿಯಾಗಿ ತೆಗೆದುಕೊಂಡು ಬೆಳಗಾವಿಯಲ್ಲಿಯೂ ಅನುಷ್ಠಾನಗೊಳಿಸಲಾಗಿದೆ. ನಗರದಲ್ಲಿ ಉಷ್ಣಾಂಶ ಏರಿಕೆಯಿಂದ ಜನಜೀವನದ ಮೇಲೆ ಪರಿಣಾಮ ಬೀರುತ್ತಿರುವಾಗ ಇಂತಹ ಸಣ್ಣದಾದರೂ ಪರಿಣಾಮಕಾರಿ ಕ್ರಮಗಳು ಜನರಿಗೆ ಬಹಳ ನೆರವಾಗುತ್ತಿವೆ ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಈ ವ್ಯವಸ್ಥೆ ಒಂದು ಭಾಗದಲ್ಲಷ್ಟೇ ಕಲ್ಪಿಸಲಾಗಿದೆ. ಇದರಿಂದ ನಗರದ ನಾಲ್ಕೂ ದಿಕ್ಕಿನ ರಸ್ತೆ ಮಾರ್ಗಗಳಲ್ಲಿಯೂ ಇದೇ ರೀತಿಯ ನೆರಳಿನ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಜನನಿಬಿಡ ಪ್ರದೇಶಗಳಲ್ಲಿ ಈ ಕ್ರಮವನ್ನು ವಿಸ್ತರಿಸಿದರೆ ಹೆಚ್ಚಿನ ಜನರಿಗೆ ಉಪಯೋಗವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ನಗರದ ಇತರೆ ಪ್ರಮುಖ ವೃತ್ತಗಳು ಮತ್ತು ಟ್ರಾಫಿಕ್‌ ಸಿಗ್ನಲ್‌ಗಳಲ್ಲಿಯೂ ಈ ಮಾದರಿಯ ತಾತ್ಕಾಲಿಕ ಶೆಡ್‌ಗಳನ್ನು ಅಳವಡಿಸುವ ಕುರಿತು ಅಧಿಕಾರಿಗಳು ಚಿಂತನೆ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ.

PREV
Read more Articles on
click me!

Recommended Stories

ಬೆಳಗಾವಿಯ ಅಥಣಿಯಿಂದ ಮಹಾರಾಷ್ಟ್ರ, ಆಂಧ್ರಕ್ಕೆ ಹೊಸ ಸಾರಿಗೆ ಬಸ್ ಆರಂಭ, ಅಂತಾರಾಜ್ಯ ಬಸ್ ಸೇವೆಯ ಸಮಯ ಹೀಗಿದೆ
ಬೆಂಗಳೂರಿಗೆ ಆಲಿಕಲ್ಲು ಮಳೆ ಎಚ್ಚರಿಕೆ, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಚಿಕ್ಕಮಗಳೂರಿನಲ್ಲಿ ಬೆಳಗ್ಗಿನಿಂದಲೇ ಮಳೆ