
ಮೂಡಲಗಿ(ಆ.26): ಪಟಾಕಿ ಸದ್ದಿಗೆ ಬೆದರಿ ಕಾಲುವೆಗೆ ಹಾರಿ 80 ಕುರಿಗಳು ದಾರುಣ ಅಂತ್ಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದಿದೆ.
ಶ್ರಾವಣ ಮಾಸದ ಪ್ರಯುಕ್ತ ಭಾನುವಾರ ರಾತ್ರಿ ಪ್ರತಿವರ್ಷದಂತೆ ಈ ವರ್ಷವೂ ಕುರಿಗಾಹಿಗಳು ಒಟ್ಟಾಗಿ ಸೇರಿ ಶ್ರೀ ಕುರಿ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಿದ್ದರು.ಜಾತ್ರೆಯ ಸಂದರ್ಭದಲ್ಲಿ ಕುರಿಗಾಹಿಗಳು ತಮ್ಮ ಕುರಿಗಳನ್ನು ಒಟ್ಟಿಗೆ ಸೇರಿಸಿಕೊಂಡಿದ್ದರು. ಈ ವೇಳೆ ಪಟಾಕಿ ಸಿಡಿಸಿದ ಪರಿಣಾಮ ಕುರಿಗಳು ಭಯಭೀತಗೊಂಡು ದಿಕ್ಕಾಪಾಲಾಗಿ ಓಡಿದವು. ಅಲ್ಲದೆ, ಸಮೀಪದಲ್ಲಿದ್ದ ಕಾಲುವೆಗೆ ಕುರಿಗಳು ಬಿದ್ದು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ. ಸುಮಾರು ₹20 ಲಕ್ಷ ಮೌಲ್ಯದ 75 ಕುರಿಗಳು ಹಾಗೂ 5 ಕುರಿಮರಿ ಮೃತಪಟ್ಟಿವೆ ಎನ್ನಲಾಗಿದೆ.
ನೋಡ ನೋಡುತ್ತಿದ್ದಂತೆ ನಡೆದ ಈ ದುರಂತ ಘಟನೆಯಲ್ಲಿ ಕುರಿಗಾಹಿಗಳು ಆಘಾತಕ್ಕೊಳಗಾಗಿದ್ದಾರೆ. ಈ ಹಿಂದೆ ಎಂದೂ ಈ ರೀತಿ ಆಗಿರಲಿಲ್ಲ. ಪಟಾಕಿ ಸದ್ದಿ ಕುರಿಗಳು ಹೆದರಿ ಕಾಲುವೆಗೆ ಹಾರಿ ಮೃತಪಟ್ಟಿರುವುದು ಕುರಿಗಾಹಿಗಳಿಗೆ ಅಪಾರ ನಷ್ಟ ಸಂಭವಿಸಿದೆ.