ಕರಾವಳಿಯಲ್ಲಿ ಇಂದಿನಿಂದಲೇ ಮಾಸಾಚರಣೆ ಆರಂಭ| ಈ ನಡುವೆ, ರಂಜಾನ್ ಮಾಸದ ಉಪವಾಸ ಪ್ರಾರಂಭ ಹಿನ್ನೆಲೆಯಲ್ಲಿ ಪ್ರಾರ್ಥನೆಗೆಂದು ಮಸೀದಿಗಳಿಗೆ ಹೋಗದ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ|
ಬೆಂಗಳೂರು(ಏ.24): ಕರಾವಳಿ ಜಿಲ್ಲೆಗಳು ಹೊರತು ಪಡಿಸಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಶನಿವಾರ (ಏ.25)ದಿಂದ ಪವಿತ್ರ ರಂಜಾನ್ ಮಾಸದ ಉಪವಾಸ ಆರಂಭವಾಗುವ ಸಾಧ್ಯತೆಯಿದೆ. ಬೆಂಗಳೂರಿನ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ವಕ್ಫ್ಬೋರ್ಡ್ ಕಚೇರಿಯಲ್ಲಿ ಶುಕ್ರವಾರ ರಾಜ್ಯ ಚಂದ್ರ ದರ್ಶನ ಸಮಿತಿಯ ಸಭೆ ನಡೆಯಲಿದ್ದು, ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಬೀಳಲಿದೆ.
ಕರಾವಳಿಯಲ್ಲಿ ಶುಕ್ರವಾರದಿಂದಲೇ ಮಾಸಾಚರಣೆ ಆರಂಭವಾಗಲಿದೆ. ಈ ನಡುವೆ, ರಂಜಾನ್ ಮಾಸದ ಉಪವಾಸ ಪ್ರಾರಂಭ ಹಿನ್ನೆಲೆಯಲ್ಲಿ ಪ್ರಾರ್ಥನೆಗೆಂದು ಮಸೀದಿಗಳಿಗೆ ಹೋಗದ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಲಾಕ್‌ಡೌನ್: 'ರಂಜಾನ್, ಬಸವ ಜಯಂತಿಗೆ ಆಚರಣೆಗೆ ಅವಕಾಶವಿಲ್ಲ'
ಮೇ 3ರವರೆಗೆ ಕೋವಿಡ್ 19ರ ಲಾಕ್‌ಡೌನ್ ಇರಲಿದ್ದು, ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಮಸೀದಿಗಳನ್ನು ಬಂದ್ ಮಾಡಲಾಗಿದೆ. ಸಾಮೂಹಿಕ ಪ್ರಾರ್ಥನೆ, ಇಫ್ತಾರ್ ಕೂಟಗಳ ಆಯೋಜನೆಯನ್ನು ನಿಷೇಧಿಸಲಾಗಿದೆ. ಹೀಗಾಗಿ ಸರಳವಾಗಿ ಮನೆಯಲ್ಲೇ ರಂಜಾನ್ ಆಚರಣೆ ಮಾಡಿ, ಯಾರೂ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಬೇಡಿ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೂಚನೆ ನೀಡಿದೆ.