
ಬೆಂಗಳೂರು(ಏ.24): ಸಾರ್ವಜನಿಕ ಸಾರಿಗೆಗೆ ನಿರ್ಬಂಧ, ಕೆಲವು ಖಾಸಗಿ ಆಸ್ಪತ್ರೆಗಳ ಸೇವೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಕೊರೋನಾ ಸೋಂಕು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಲು ಬಿಬಿಎಂಪಿ ‘ಟೆಲಿ ಹೆಲ್ತ್‌ಲೈನ್’ ಸೇವೆ ಆರಂಭಿಸಿದೆ.
ಸಾರ್ವಜನಿಕರು ಆರೋಗ್ಯವಾಣಿ ಸಂಖ್ಯೆ 07447118949ಗೆ ಕರೆ ಮಾಡಿ ಅಗತ್ಯ ಆರೋಗ್ಯದ ಬಗ್ಗೆ ಸಲಹೆ ಪಡೆಯಬಹುದಾಗಿದೆ. ಕರೆ ಸಂಪೂರ್ಣವಾಗಿ ಉಚಿತವಾಗಿದ್ದು, ಪಾಲಿಕೆಯ 42 ವೈದ್ಯರು ಅಗತ್ಯ ಸಲಹೆ, ಸೂಚನೆ, ಮಾಹಿತಿ ನೀಡಲಿದ್ದಾರೆ. ಹೆಲ್ತ್‌ಲೈನ್ ನಿತ್ಯ ಬೆಳಗ್ಗೆ 8ರಿಂದ ರಾತ್ರಿ 8 ಗಂಟೆವರೆಗೆ ಕಾರ್ಯ ನಿರ್ವಹಿಸಲಿದೆ. ಜ್ವರ, ಶೀತ, ಕೆಮ್ಮು, ಗಂಟಲು ನೋವು, ಉಸಿರಾಟ ತೊಂದರೆ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಸಲಹೆಗಳನ್ನು ವೈದ್ಯರು ನೀಡಲಿದ್ದಾರೆ.
ಕೊರೋನಾ ಆತಂಕ: ಎಂತಹ ಸಂದಿಗ್ಧ ಪರಿಸ್ಥಿತಿ ಎದುರಿಸಲು ಸಜ್ಜಾಗಿ, ಡಿಸಿಎಂ
ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮೇಯರ್ ಗೌತಮ್ ಕುಮಾರ್ ಅವರು ‘ಟೆಲಿ ಹೆಲ್ತ್‌ಲೈನ್ (ಆರೋಗ್ಯ ಸಹಾಯವಾಣಿ)’ ಸೇವೆಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಹೆಲ್ತ್‌ಲೈನ್‌ಗೆ ಕರೆಮಾಡಿದ ತಕ್ಷಣ ಕಾಲ್ ಸೆಂಟರ್‌ಗೆ ಕರೆಗಳನ್ನು ವೈದ್ಯರಿಗೆ ವರ್ಗಾಯಿಸಲಾಗುತ್ತದೆ. ಕರೆ ಮಾಡಿದ ಪ್ರತಿಯೊಬ್ಬರಿಗೂ ಪ್ರತ್ಯೇಕ ಗುರುತಿನ ಸಂಖ್ಯೆ ನೀಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯಿದ್ದರೆ, ವೈದ್ಯರ ಜೊತೆ ಸಮಾಲೋಚನೆ ನಡೆಸಲು ವಿಡಿಯೋ ಕಾನ್ಫರೆಸ್ಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಬ್ಲೂಮ್ ಬರ್ಗ್ ಫಿಲಾಂಥ್ರಪಿಸ್ ಹಾಗೂ ವೈಟಲ್ ಸ್ಟ್ರಾಟಜೀಸ್ ಸಂಸ್ಥೆಗಳ ಸಹಯೋಗದಲ್ಲಿ ಬಿಬಿಎಂಪಿ ಕೋವಿಡ್-19 ಹಾಗೂ ಇತರೆ ರೋಗಗಳ ಬಗ್ಗೆ ನಾಗರಿಕರಿಗೆ ಸಲಹೆ ಸೂಚನೆ ನೀಡಲು ಟೆಲಿ ಹೆಲ್ತ್ ಲೈನ್ ಆರಂಭಿಸಲಾಗಿದೆ ಎಂದು ಹೇಳಿದರು.
ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಮಾತನಾಡಿ, ಎಲ್ಲ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂಗಳಿಗೆ ಕೊರೋನಾ ಹೊರತುಪಡಿಸಿ ರಕ್ತದೊತ್ತಡ, ಡಯಾಬಿಟಿಸ್, ಹೃದಯ, ಕಿಡ್ನಿ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಜತೆಗೆ ಸಾರ್ವಜನಿಕರು ಫೀವರ್ ಕ್ಲಿನಿಕ್‌ಗಳಿಗೆ ತೆರಳಲು ಹಿಂಜರಿಯುತ್ತಿರುವ ಹಿನ್ನೆಲೆಯಲ್ಲಿ ಟೆಲಿ ಹೆಲ್ತ್ ಲೈನ್ ಮೂಲಕ ವೈದ್ಯರನ್ನು ಸಂಪರ್ಕಿಸಿ, ರೋಗಗಳಿಗೆ ಸೂಕ್ತ ಔಷಧ ಪಡೆಯಬಹುದು. ಇ-ಮೇಲ್ ಅಥವಾ ವಾಟ್ಸಾಪ್ ಮೂಲಕ ವೈದ್ಯರು ಔಷಧದ ವಿವರಗಳನ್ನು ನೀಡಲಿದ್ದಾರೆ ಎಂದು ವಿವರಿಸಿದರು.