ಬನ್ನೇರುಘಟ್ಟ: ಚಾಲಕನ ಕಿವಿ ಕಚ್ಚಿ ಕರಡಿ ಪರಾರಿ

By Kannadaprabha NewsFirst Published Mar 29, 2021, 7:37 AM IST
Highlights

ವಾಹನ ಚಾಲಕ ಜಯಶಂಕರ್‌ ಅವರ ಕಿವಿ, ಕೆನ್ನೆ ಹಾಗೂ ತಲೆ ಭಾಗದಲ್ಲಿ ಗಾಯ| ನುರಿತ ಸಿಬ್ಬಂದಿ ಕರಡಿ ಪತ್ತೆ  ಕಾರ್ಯದಲ್ಲಿ ತೊಡಗಿದ್ದು ಶೀಘ್ರವೇ ಪುನರ್ವಸತಿ ಕೇಂದ್ರಕ್ಕೆ ತರಲಾಗುವುದು: ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್‌ ಸಿಂಗ್‌| 

ಆನೇಕಲ್‌(ಮಾ.29):  ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕರಡಿ ಪುನರ್ವಸತಿ ಕೇಂದ್ರದಿಂದ 8 ವರ್ಷ ವಯೋಮಾನದ ಗಂಡು ಕರಡಿಯೊಂದು ತಪ್ಪಿಸಿಕೊಂಡು ಪರಾರಿಯಾಗಿದೆ. ತಪ್ಪಿಸಿಕೊಳ್ಳುವ ಭರದಲ್ಲಿ ಎದುರಿಗೆ ಬಂದ ವೈದ್ಯರ ವಾಹನ ಚಾಲಕನ ಮೇಲೆ ದಾಳಿ ಮಾಡಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್‌ ಸಿಂಗ್‌ ತಿಳಿಸಿದ್ದಾರೆ.

ಕರಡಿಯನ್ನು ತುಮಕೂರಿನಿಂದ ರಕ್ಷಿಸಿ ವಾಹನದಲ್ಲಿ ತರಲಾಗಿತ್ತು. ವಾಹನದಿಂದ ಕೇಜ್‌ಗೆ ಸ್ಥಳಾಂತರಿಸುವ ವೇಳೆ ಬೋನಿನ ತಳಭಾಗವನ್ನು ಮುರಿದು ಹೊರಬಂದಿದೆ. ಕಾಡಿನಲ್ಲಿ ಬೆಳೆದ ಕರಡಿ ತುಂಬಾ ಕ್ರೂರವಾಗಿ ವರ್ತಿಸುತ್ತದೆ. ಅದನ್ನು ಬೋನಿನಲ್ಲಿ ತಂದಾಗಲಿಂದಲೇ ಗುಟುರು ಹಾಕುತ್ತಿತ್ತು. ಎಲ್ಲ ಎಚ್ಚರಿಕೆ ನಡುವೆಯೂ ಅವಘಡ ನಡೆದಿದ್ದು, ಹುಚ್ಚನ ಕೆರೆ ವ್ಯಾಪ್ತಿಯಲ್ಲಿ ಅಡಗಿರಬಹುದು. ನಮ್ಮ ನುರಿತ ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ತೊಡಗಿದ್ದು ಶೀಘ್ರವೇ ಪುನರ್ವಸತಿ ಕೇಂದ್ರಕ್ಕೆ ತರಲಾಗುವುದು ಎಂದು ಹೇಳಿದರು.

ಸಫಾರಿ ವಾಹನ ಎಳೆದಾಡಿದ ಹುಲಿ: ವಿಡಿಯೋ ವೈರಲ್‌

ದಾಳಿಯಲ್ಲಿ ವಾಹನ ಚಾಲಕ ಜಯಶಂಕರ್‌ ಅವರ ಕಿವಿ, ಕೆನ್ನೆ ಹಾಗೂ ತಲೆ ಭಾಗದಲ್ಲಿ ಗಾಯಗಳಾಗಿವೆ. ಪ್ರಾಣಾಪಾಯದಿಂದ ಪಾರಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ತುಮಕೂರಿನ ಸಿದ್ಧಗಂಗಾಮಠ ಹಾಗೂ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಈ ಕರಡಿ ಅಡ್ಡಾಡುತ್ತಿತ್ತು. ದೇಗುಲ ಮತ್ತು ಹಳ್ಳಿಯ ಹೊರವಲಯದಲ್ಲಿ ರಾತ್ರಿ ವೇಳೆ ಠಿಕಾಣಿ ಹೂಡುತ್ತಿತ್ತು. ಭಯಭೀತರಾದ ಗ್ರಾಮಸ್ಥರು ನೀಡಿದ ದೂರಿನ ಅನ್ವಯ ಕರಡಿಗೆ ಬೋನಿನಲ್ಲಿ ಹಲಸು, ಜೇನುಗಳನ್ನಿಡಲಾಗಿತ್ತು ಎಂದು ತುಮಕೂರಿನ ಜಿಲ್ಲಾ ಅರಣ್ಯಾಧಿಕಾರಿ ಗಿರಿಶ್‌ ತಿಳಿಸಿದರು.
 

click me!