ಬಿಡಿಎ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮನೆಗಳ ಸಕ್ರಮ

Kannadaprabha News   | Asianet News
Published : Dec 19, 2020, 08:30 AM IST
ಬಿಡಿಎ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮನೆಗಳ ಸಕ್ರಮ

ಸಾರಾಂಶ

ಮಾರುಕಟ್ಟೆ ದರ ಶೇ.25ರಷ್ಟು ಹಣ ಪಾವತಿಸಿಕೊಂಡು ಸಕ್ರಮಗೊಳಿಸಲು ನಿರ್ಧಾರ| ಬೆಂಗಳೂರಲ್ಲಿ ಸುಮಾರು 90ರಿಂದ 95 ಸಾವಿರ ಮನೆಗಳು ಬಿಡಿಎ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ12 ವರ್ಷಗಳ ಹಿಂದೆ ನಿರ್ಮಿಸಿದ ಮನೆಗಳಿಗೆ ಮಾತ್ರ ಅನ್ವಯ: ಅಧ್ಯಕ್ಷ ವಿಶ್ವನಾಥ್‌| 

ಬೆಂಗಳೂರು(ಡಿ.19):  ಬಿಡಿಎ ಸ್ವಾಧೀನದ ನಿವೇಶನಗಳಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರುವ ನಿವಾಸಿಗಳಿಗೆ ಸಿಹಿ ಸುದ್ದಿ! ಬಿಡಿಎ ಸ್ವಾಧೀನದ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿರುವವರಿಗೆ ಮಾರುಕಟ್ಟೆ ದರದ ಶೇ.25 ಹಣವನ್ನು ಕಟ್ಟಿಸಿಕೊಂಡು ಅದೇ ಜಾಗವನ್ನು ಸಕ್ರಮ ಮಾಡಿ ದಾಖಲೆಗಳನ್ನು ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ.

ಶುಕ್ರವಾರ ಈ ಕುರಿತು ಮಾಹಿತಿ ನೀಡಿದ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌, ಈ ಹಿಂದೆ ಸರ್ಕಾರ ನಿರ್ಧಾರ ಮಾಡಿರುವಂತೆ 12 ವರ್ಷಗಳ ಹಿಂದಿಗಿಂತಲೂ ಮುನ್ನ ನಿರ್ಮಾಣ ಮಾಡಿಕೊಂಡಿರುವ ಮನೆಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. 30/40 ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿಕೊಂಡವರು ಮಾರ್ಗದರ್ಶಿ ದರದ ಶೇ.25ರಷ್ಟು ಪಾವತಿ ಮಾಡಿದರೆ ಆ ಜಾಗವನ್ನು ಅವರಿಗೆ ವರ್ಗಾಯಿಸಲಾಗುತ್ತದೆ ಎಂದು ತಿಳಿಸಿದರು.

ಅದೇ ರೀತಿ 20/30, 60/40 ಮತ್ತು 50/80 ಚದರ ಅಡಿ ವಿಸ್ತೀರ್ಣದ ಮನೆಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಆಯಾ ಅಳತೆಗೆ ತಕ್ಕಂತೆ ಶೇಕಡಾವಾರು ಹಣವನ್ನು ನಿಗದಿ ಮಾಡಲಾಗುವುದು. ನಗರದಲ್ಲಿ ಸುಮಾರು 90ರಿಂದ 95 ಸಾವಿರ ಮನೆಗಳು ಬಿಡಿಎ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣವಾಗಿವೆ ಎಂದು ಅಂದಾಜಿಸಲಾಗಿದೆ. ಇಂತಹ ಮನೆಗಳನ್ನು ಪತ್ತೆ ಮಾಡಲೆಂದು ಸಮೀಕ್ಷೆ ನಡೆಸಲು ಏಜೆನ್ಸಿ ನೇಮಕಕ್ಕೆ ನಿರ್ಧರಿಸಲಾಗಿದೆ ಎಂದು ಹೇಳಿದರು.

ಬಿಡಿಎ ಕಾರ್ನರ್ ಸೈಟ್: 54 ಲಕ್ಷದ ಸೈಟ್ 1.89 ಕೋಟಿ ರುಪಾಯಿಗೆ ಸೇಲ್‌

ಎನ್‌ಜಿಟಿ ತೀರ್ಪು ವಿನಾಯ್ತಿಗೆ ಮನವಿ:

ಬಫರ್‌ ವಲಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಪೀಠ ನೀಡಿರುವ ತೀರ್ಪಿನಿಂದಾಗಿ ಸಾವಿರಾರು ಮನೆಗಳಿಗೆ ಸಂಕಷ್ಟಎದುರಾಗಿದೆ. ಇದರಿಂದ ಮನೆಗಳ ಮಾಲಿಕರನ್ನು ಪಾರು ಮಾಡುವ ಉದ್ದೇಶದಿಂದ ಎನ್‌ಜಿಟಿ ತೀರ್ಪು ನೀಡುವ ಮುನ್ನ ನಿರ್ಮಾಣ ಮಾಡಿರುವ ಮನೆಗಳಿಗೆ ವಿನಾಯ್ತಿ ನೀಡುವಂತೆ ಕಾನೂನು ಕ್ರಮಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪಾರ್ಕ್ ಬದಲು ಕಿರು ಅರಣ್ಯ

ಮಿಷನ್‌ 2022ಗೆ ಪೂರಕವಾಗಿ ಬಿಡಿಎ ತನ್ನ ಸ್ವಂತ ಬಡಾವಣೆಗಳು ಮತ್ತು ಬಿಡಿಎ ಅನುಮೋದಿತ ಬಡಾವಣೆಗಳಲ್ಲಿ ಕಿರು ಅರಣ್ಯ ಬೆಳೆಸುವುದನ್ನು ಕಡ್ಡಾಯಗೊಳಿಸುವ ನಿರ್ಧಾರ ಕೈಗೊಂಡಿದೆ. ಇದುವರೆಗೆ ಬಡಾವಣೆಗಳಲ್ಲಿ ಉದ್ಯಾನಗಳನ್ನು ನಿರ್ಮಿಸಿ ಅದರ ನಿರ್ವಹಣೆಗೆಂದು ಪ್ರತಿ ವರ್ಷ ಪ್ರತ್ಯೇಕ ಸಿಬ್ಬಂದಿ ಮತ್ತು ಹಣವನ್ನು ವೆಚ್ಚ ಮಾಡಬೇಕಿತ್ತು. ಉದ್ಯಾನಗಳಿಗೆ ಲಾನ್‌, ಅಲಂಕಾರಿಕ ಗಿಡಗಳಿಗೆ ಹೆಚ್ಚಿನ ಹಣ ಭರಿಸಬೇಕಿತ್ತು. ಜತೆಗೆ ಪ್ರತಿದಿನ ನೀರು, ಗೊಬ್ಬರ ಆರೈಕೆ ಮಾಡಲೆಂದು ಲಕ್ಷಾಂತರ ರುಪಾಯಿ ಖರ್ಚಾಗುತ್ತಿತ್ತು. ಇದನ್ನು ತಪ್ಪಿಸಲು ಮತ್ತು ಸಾರ್ವಜನರಿಗೆ ಪರಿಸರ ಕಾಳಜಿ ಮೂಡಿಸಲು ಕಿರು ಅರಣ್ಯ ಅಭಿವೃದ್ಧಿಗೆ ನಿರ್ಧರಿಸಲಾಗಿದೆ ಎಂದರು.

ಕಿರಿ ಅರಣ್ಯ ಯೋಜನೆಯಲ್ಲಿ ಬಿಡಿಎ ಸಿಬ್ಬಂದಿ ಒಂದೆರಡು ವರ್ಷ ಗಿಡಗಳಿಗೆ ನೀರು, ಗೊಬ್ಬರ ಪೂರೈಕೆ ಮಾಡಿದರೆ ಸಾಕು. ನಂತರ ಆ ಗಿಡಗಳು ಮರಗಳಾಗಿ ನೈಸರ್ಗಿಕವಾಗಿಯೇ ಬೆಳವಣಿಗೆ ಹೊಂದುತ್ತವೆ. ಇದರಿಂದ ಉದ್ಯಾನಕ್ಕೆಂದು ನಿರಂತರವಾಗಿ ಖರ್ಚಾಗುತ್ತಿದ್ದ ಹಣವನ್ನು ಉಳಿತಾಯ ಮಾಡಬಹುದು ಎಂದು ತಿಳಿಸಿದರು.
 

PREV
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!