ಕೇಂದ್ರದ ನಡೆಗೆ ವ್ಯಾಪಕ ವಿರೋಧ: ನಾಡಿದ್ದು ಎಪಿಎಂಸಿ ಬಂದ್‌?

By Kannadaprabha NewsFirst Published Dec 19, 2020, 8:19 AM IST
Highlights

ಎಪಿಎಂಸಿ ಕಾಯ್ದೆ ವಿರೋಧಿಸಿ, ತಮಗೂ ನಿಗಮ ರಚಿಸಲು ಒತ್ತಾಯ| ಬೆಳಗ್ಗೆ 11ರಿಂದ 2 ಗಂಟೆಯವರೆಗೆ ಯಶವಂತಪುರ ಎಪಿಎಂಸಿ ಯಾರ್ಡ್‌ ಬಂದ್| ಕೆಲಸ ಸ್ಥಗಿತಗೊಳಿಸಿ ಎಪಿಎಂಸಿ 4ನೇ ಗೇಟ್‌ನಿಂದ ಕೃಷಿ ಉತ್ಪನ್ನ ಮಾರುಕಟ್ಟೆವರೆಗೆ ರ‍್ಯಾಲಿ| 

ಬೆಂಗಳೂರು(ಡಿ.19): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಾಗೂ ತಮಗೂ ಒಂದು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವಂತೆ ಒತ್ತಾಯಿಸಿ ರಾಜ್ಯ ಎಪಿಎಂಸಿ ಯಾರ್ಡ್‌ ಕಾರ್ಮಿಕರ ಒಕ್ಕೂಟವು ಸೋಮವಾರ (ಡಿ.21) ಬೆಳಗ್ಗೆ 11ರಿಂದ 2 ಗಂಟೆಯವರೆಗೆ ಯಶವಂತಪುರ ಎಪಿಎಂಸಿ ಯಾರ್ಡ್‌ ಬಂದ್‌ಗೆ ಕರೆ ನೀಡಿದೆ.

ಎಪಿಎಂಸಿಯಲ್ಲಿ ಕಾರ್ಯ ನಿರ್ವಹಿಸುವ ಕೂಲಿ ಕಾರ್ಮಿಕರು, ಹಮಾಲಿಗಳು ತಮ್ಮ ಕೂಲಿ ಕೆಲಸವನ್ನು ಸ್ಥಗಿತಗೊಳಿಸಿ ಎಪಿಎಂಸಿ 4ನೇ ಗೇಟ್‌ನಿಂದ ಕೃಷಿ ಉತ್ಪನ್ನ ಮಾರುಕಟ್ಟೆವರೆಗೆ ರ‍್ಯಾಲಿ ನಡೆಸುತ್ತಿದೆ. ಎಪಿಎಂಸಿಯಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಎಲ್ಲಾ ಕಾರ್ಮಿಕರು, ವರ್ತಕರು ಹಾಗೂ ಅಂಗಡಿ ಮಾಲೀಕರು ಪಾಲ್ಗೊಳ್ಳಲಿದ್ದು, ಎಪಿಎಂಸಿ ಸಂಪೂರ್ಣವಾಗಿ ಬಂದ್‌ ಆಗಲಿದೆ ಎಂದು ತಿಳಿಸಿದೆ.

APMC ತಿದ್ದುಪಡಿ ಮಸೂದೆ ಎರಡೂ ಸದನದಲ್ಲಿ ಪಾಸ್‌: ಎಸ್‌.ಟಿ.ಸೋಮಶೇಖರ್‌

ಬಂದ್‌ ಕುರಿತು ಮಾತನಾಡಿದ ಒಕ್ಕೂಟದ ಅಧ್ಯಕ್ಷ ಅರುಣ್‌ ಪರಮೇಶ್ವರ್‌, ಎಪಿಎಂಸಿ ಕಾಯ್ದೆ ಜಾರಿಯಿಂದ ಕಾರ್ಮಿಕರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ರೈತರಿಗೂ ತೊಂದರೆಯಾಗಲಿದೆ. ಅಲ್ಲದೆ, ಇಷ್ಟುವರ್ಷಗಳ ಕಾಲ ಎಪಿಎಂಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಅಸಂಘಟಿತ ಕಾರ್ಮಿಕರು ಎಂದು ಪರಿಗಣಿಸದ ಕಾರಣ ಅಧಿಕಾರಿಗಳ ವಿರುದ್ಧವೂ ಪ್ರತಿಭಟನೆ ಮಾಡಲಾಗುತ್ತಿದೆ. ಆದ್ದರಿಂದ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಸಹಕಾರ ಸಚಿವರಾದ ಎಸ್‌.ಟಿ. ಸೋಮಶೇಖರ್‌ ಅವರು ಆಗಮಿಸಿ ನಮ್ಮ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಹೋರಾಟಕ್ಕೂ ಕರೆ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
 

click me!