Latest Videos

ಬೆಂಗಳೂರು: ಬಿಡಿಎ ಫ್ಲ್ಯಾಟ್‌ ದರ ಶೇ.10-20 ಹೆಚ್ಚಳ..!

By Kannadaprabha NewsFirst Published May 23, 2024, 12:16 PM IST
Highlights

ಬಿಡಿಎ ಶೇ.10ರಿಂದ 20ರಷ್ಟು ದರ ಹೆಚ್ಚಳ ಮಾಡಿದರೆ ಕೋನದಾಸನಪುರದಲ್ಲಿ ನಿರ್ಮಿಸಲಾಗಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಖಾಲಿಯಿರುವ ಫ್ಲ್ಯಾಟ್‌ಗಳ ಬೆಲೆ 45ರಿಂದ 50 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಕಣಿಮಿಣಿಕೆಯಲ್ಲೂ 38ರಿಂದ 43 ಲಕ್ಷ ರು.ಗೆ ಏರಿಕೆಯಾಗಲಿದೆ. 

ಬೆಂಗಳೂರು(ಮೇ.23):  ಬಿಡಿಎ ವಿವಿಧ ಬಡಾವಣೆಗಳಲ್ಲಿ ನಿರ್ಮಿಸಿರುವ ಮತ್ತು ನಿರ್ಮಾಣ ಹಂತದಲ್ಲಿರುವ ಫ್ಲ್ಯಾಟ್‌ಗಳ ದರವನ್ನು ಖರ್ಚು-ವೆಚ್ಚಗಳ ಆಧಾರದಡಿ ಶೇಕಡ 10ರಿಂದ 20ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಿದೆ. ಈ ಕುರಿತು ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದ್ದು, ಲೋಕಸಭೆ ಚುನಾವಣಾ ನೀತಿ ಸಂಹಿತೆ ತೆರವಾದ ನಂತರ ಪರಿಷ್ಕೃತ ದರ ಪಟ್ಟಿ ಜಾರಿಗೆ ತರಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಿದ್ಧತೆ ನಡೆಸಿದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಕಳೆದ ವರ್ಷ ರಾಜ್ಯ ಸರ್ಕಾರ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಏರಿಕೆ ಮಾಡಿತ್ತು. ಜೊತೆಗೆ ಸ್ಟ್ಯಾಂಪ್‌ಡ್ಯೂಟಿ ದರವೂ ಹೆಚ್ಚಳವಾಗಿದೆ. ಈ ನಡುವೆ ಕಟ್ಟಡ ನಿರ್ಮಾಣ ಪರಿಕರಗಳ ಬೆಲೆಯೂ ಗಗನಕ್ಕೇರಿದೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಬಿಡಿಎ ನಿರ್ಮಿಸಿರುವ ಯಾವುದೇ ಬಡಾವಣೆಯಲ್ಲಿ ಫ್ಲ್ಯಾಟ್‌ ಅಥವಾ ಮನೆಗಳ ಮಾರಾಟವೂ ಆಗಿಲ್ಲ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಿಡಿಎ ಫ್ಲ್ಯಾಟ್‌ಗಳ ದರ ಏರಿಕೆಯ ಚಿಂತನೆಯಲ್ಲಿದೆ. ಇದು ಹೊಸದಾಗಿ ಫ್ಲ್ಯಾಟ್‌ ಖರೀದಿ ಮಾಡಲು ಮುಂದಾಗುವ ಗ್ರಾಹಕರ ಜೇಬಿಗೆ ದರ ಏರಿಕೆಯ ಬಿಸಿ ತಟ್ಟಲಿದೆ.

ಬೆಂಗಳೂರು: ಕೆಂಪೇಗೌಡ ಲೇಔಟಲ್ಲಿ ಮನೆ ಕಟ್ಟುವಾಗ ಬಿಡಿಎಯಿಂದ 30 ಸಾವಿರ ವಸೂಲಿಗೆ ಆಕ್ರೋಶ

ಮಾರ್ಚ್‌ನಲ್ಲಿ ಬಿಡಿಎ ಅಪಾರ್ಟ್‌ಮೆಂಟ್‌ಗಳಲ್ಲೇ ಗ್ರಾಹಕರಿಗೆ ಫ್ಲ್ಯಾಟ್‌ ಮೇಳ ಮಾಡಲಾಗಿತ್ತು. ಕೊಮ್ಮಘಟ್ಟ, ಕಣಿಮಿಣಿಕೆ, ಕೋನದಾಸಪುರ, ನಾಗರಬಾವಿಗಳಲ್ಲಿ ಫ್ಲ್ಯಾಟ್‌ಗಳು ನಿರೀಕ್ಷಿತ ಮಟ್ಟದಲ್ಲಿ ಮಾರಾಟವಾಗಲಿಲ್ಲ. ಇದರಿಂದ 1,050ಕ್ಕೂ ಹೆಚ್ಚು ಫ್ಲ್ಯಾಟ್‌ಗಳು ಮಾರಾಟವಾಗದೇ ಉಳಿದಿದ್ದು, ಇವುಗಳ ದರವನ್ನೂ ಕೂಡ ಹೆಚ್ಚಳ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಲ್ಲಘಟ್ಟ ಮೆಟ್ರೋ ನಿಲ್ದಾಣದಿಂದ 2.5 ಕಿ.ಮೀ. ದೂರದಲ್ಲಿರುವ ಕಣಿಮಿಣಿಕೆ 2ರಿಂದ 4ನೇ ಹಂತದವರೆಗೆ 2, 3 ಮತ್ತು 4ನೇ ಹಂತದಲ್ಲಿ ನಿರ್ಮಾಣಗೊಂಡಿರುವ 900 ಫ್ಲ್ಯಾಟ್‍ಗಳ ಪೈಕಿ ಸುಮಾರು 600- 700 ಫ್ಲ್ಯಾಟ್‍ಗಳು ಉಳಿದಿವೆ. ಅದೇ ರೀತಿ ಕೊಮ್ಮಘಟ್ಟ ಫೇಸ್ 1 ಮತ್ತು 2ನಲ್ಲಿ 15 ಹಾಗೂ ಕೋನದಾಸಪುರ 2ನೇ ಹಂತದಲ್ಲಿ 2 ಬಿಎಚ್‍ಕೆಯ ಒಂದು ಸಾವಿರಕ್ಕೂ ಹೆಚ್ಚು ಫ್ಲ್ಯಾಟ್‍ಗಳನ್ನು ನಿರ್ಮಿಸಲಾಗಿದ್ದು, ಇದರಲ್ಲಿ ಸುಮಾರು 280-300ಕ್ಕೂ ಹೆಚ್ಚು ಫ್ಲ್ಯಾಟ್‍ಗಳು ಉಳಿದಿವೆ.ನಾಗರಬಾವಿಯಲ್ಲಿ 3 ಬಿಎಚ್‍ಕೆಯ 115ಕ್ಕೂ ಹೆಚ್ಚು ಫ್ಲ್ಯಾಟ್‍ಗಳನ್ನು ನಿರ್ಮಿಸಿದ್ದು, 17ರಿಂದ 18 ಫ್ಲ್ಯಾಟ್‌ಗಳು ಮಾರಾಟವಾಗಿಲ್ಲ. ಫ್ಲ್ಯಾಟ್‍ಗಳ ಪ್ರಸ್ತುತ ದರ (2 ಬಿಎಚ್‍ಕೆ) 25 ರಿಂದ 48 ಲಕ್ಷ ರು.ವರೆಗೆ ದರವಿದೆ. ಚಂದ್ರಲೇಔಟ್‌ನಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ ಫ್ಲ್ಯಾಟ್‌ ದರ 1.10 ಕೋಟಿ ರು.ಗಳಿಗೂ ಹೆಚ್ಚಿದೆ.

ಬಿಡಿಎ ಕಾಂಪ್ಲೆಕ್ಸ್ ಲೀಸ್‌ಗೆ ನೀಡಲು 200 ಕೋಟಿ ಕಿಕ್‌ ಬ್ಯಾಕ್: ಆರ್‌.ಅಶೋಕ್

ಬಿಡಿಎ ಶೇ.10ರಿಂದ 20ರಷ್ಟು ದರ ಹೆಚ್ಚಳ ಮಾಡಿದರೆ ಕೋನದಾಸನಪುರದಲ್ಲಿ ನಿರ್ಮಿಸಲಾಗಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಖಾಲಿಯಿರುವ ಫ್ಲ್ಯಾಟ್‌ಗಳ ಬೆಲೆ 45ರಿಂದ 50 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಕಣಿಮಿಣಿಕೆಯಲ್ಲೂ 38ರಿಂದ 43 ಲಕ್ಷ ರು.ಗೆ ಏರಿಕೆಯಾಗಲಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ

ಹುಣ್ಣಿಗೆರೆ ವಿಲ್ಲಾ ದರವೂ ಗಗನಕ್ಕೆ

ಕಾಮಗಾರಿ ಪೂರ್ಣಗೊಂಡು ಮಾರಾಟಕ್ಕೆ ಸಿದ್ಧಗೊಂಡಿರುವ ಹುಣ್ಣಿಗೆರೆಯ ವಿಲ್ಲಾಗಳ ದರ ಕೂಡ ಹೆಚ್ಚಳವಾಗುವ ಸಾಧ್ಯತೆ ಇದೆ. 3 ಬಿಎಚ್‍ಕೆ ಮನೆಗಳ ದರ 75 ಲಕ್ಷ ರು.ನಿಂದ 85 ಲಕ್ಷ ರು.ಗೆ ಹಾಗೂ 4 ಬಿಎಚ್‍ಕೆ ಮನೆಗಳು 1.10 ಕೋಟಿ ರು.ನಿಂದ 1.13 ಕೋಟಿ ರು. ಬೆಲೆ ನಿಗದಿಪಡಿಸುವ ಕುರಿತು ಬಿಡಿಎ ಚಿಂತನೆ ನಡೆಸಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

click me!