ಕೊರೋನಾ ಪರೀಕ್ಷೆಗೆ ಒಪ್ಪದವನ ಬಟ್ಟೆಹರಿದು, ಹಲ್ಲೆ ಮಾಡಿದರು

By Kannadaprabha NewsFirst Published Oct 12, 2020, 9:46 AM IST
Highlights

ಕೊರೋನಾ ಪರೀಕ್ಷೆಗೆ ಒಳಪಡಲು ನಿರಾಕರಿಸಿದ ವ್ಯಕ್ತಿಯೋರ್ವನ ಮೇಲೆ ಹಲ್ಲೆ ಮಾಡಿ ಬಟ್ಟೆ ಹರಿದು ಅಮಾನವೀಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು (ಅ.12): ಕೊರೋನಾ ಸೋಂಕು ದೃಢಪಟ್ಟು ಸ್ವಯಂ ಕ್ವಾರಂಟೈನ್‌ ಮುಗಿಸಿದ ವ್ಯಕ್ತಿಗೆ ಮತ್ತೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ ಹಾಗೂ ನಿರಾಕರಿಸಿದ್ದಕ್ಕೆ ಬಿಬಿಎಂಪಿ ಸಿಬ್ಬಂದಿ ಹಲ್ಲೆ ನಡೆಸಲು ಮುಂದಾದ ಘಟನೆ ನಗರದಲ್ಲಿ ಭಾನುವಾರ ನಡೆದಿದೆ.

ನಗರದ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಶನಿವಾರ ದ್ವಿ ಚಕ್ರವಾಹನದಲ್ಲಿ ಹೋಗುತ್ತಿದ್ದ ಪೃಥ್ವಿ ಎಂಬ ವ್ಯಕ್ತಿಯನ್ನು ಅಡ್ಡಗಟ್ಟಿದ ಬಿಬಿಎಂಪಿ ಆರೋಗ್ಯ ವಿಭಾಗದ ಸಿಬ್ಬಂದಿ ಕೊರೋನಾ ಪರೀಕ್ಷೆಗೆ ಒಳಗಾಗುವಂತೆ ಕೇಳಿದ್ದಾರೆ. ಈ ವೇಳೆ ಈಗಾಗಲೇ ಸೋಂಕು ತಗುಲಿದ್ದು, ಮನೆಯಲ್ಲಿ ಕ್ವಾರಂಟೈನ್‌ ಮುಗಿಸಿದ್ದೇನೆ. ಅಲ್ಲದೆ, ಶುಕ್ರವಾರ ಆ್ಯಂಟೆಜೆನ್‌ ಪರೀಕ್ಷೆ ಮಾಡಿಸಿದ್ದು ನೆಗೆಟಿವ್‌ ವರದಿ ಬಂದಿದೆ. ಮತ್ತೊಮ್ಮೆ ಪರೀಕ್ಷೆಗೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ವಿವರಿಸಿದ್ದಾರೆ.

ಕರ್ನಾಟಕದಲ್ಲಿ ಭಾನುವಾರ ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚು ...

ಇದಕ್ಕೆ ವಿರೋಧ ವ್ಯಕ್ತ ಪಡಿಸಿದ ಬಿಬಿಎಂಪಿ ಸಿಬ್ಬಂದಿ, ದ್ವಿ ಚಕ್ರವಾಹನದ ಕೀ ತೆಗೆದುಕೊಂಡಿದ್ದಾರೆ. ಅಲ್ಲದೆ ತಕ್ಷಣ ಪರೀಕ್ಷೆಗೆ ಒಳಗಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಸಮ್ಮತಿಸಿದ ಯುವಕ ಈವರೆಗೂ ತಿಂಡಿ ಮಾಡಿಲ್ಲ. ತಿಂಡಿ ಮುಗಿಸಿ ಮತ್ತೆ ಬಂದು ಪರೀಕ್ಷೆಗೆ ಒಳಗಾಗುವುದಾಗಿ ತಿಳಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಪಾಲಿಕೆ ಸಿಬ್ಬಂದಿ ಯುವಕನ ಬಟ್ಟೆಹರಿದು ರಸ್ತೆ ಮಧ್ಯದಲ್ಲಿಯೇ ಅವಮಾನ ಮಾಡಿದ್ದಾರೆ. ಈ ಸಂಬಂಧ ಸ್ಥಳೀಯ ಮನೆಯೊಂದರ ಸಿಸಿಟಿವಿಯಲ್ಲಿ ಘಟನೆ ದೃಶ್ಯಗಳು ದಾಖಲಾಗಿದ್ದು, ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್‌ ಆಗಿವೆ.

ನನಗಾದ ಅವಘಟನೆ ಕುರಿತು ಮಾತನಾಡಿದ ಪೃಥ್ವಿ, ಕೊರೋನಾ ದೃಢಪಟ್ಟು ಗುಣಮುಖರಾದವರಿಗೆ ಮತ್ತೊಮ್ಮೆ ಪರೀಕ್ಷೆ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸುತ್ತಾರೆ. ಆದರೆ, ಪಾಲಿಕೆ ಸಿಬ್ಬಂದಿಗೆ ಈ ಅಂಶ ವಿವರಿಸಿದರೂ, ಒಪ್ಪಿಲ್ಲ. ರಸ್ತೆ ಬದಿಯಲ್ಲಿ ಬಟ್ಟೆಹರಿದು ಹಾಕಿ ಅವಮಾನ ಮಾಡಿದ್ದಾರೆ. ಈ ಬಗ್ಗೆ ಯಾರಿಗೆ ದೂರು ನೀಡಬೇಕು ಎಂಬುದು ಗೊತ್ತಿಲ್ಲ. ನನಗೆ ಆಗಿರುವ ಅವಮಾನ ಮತ್ತೆ ಯಾರಿಗೂ ಆಗಬಾರದು ಎಂದು ತಮ್ಮ ನೋವು ತೋಡಿಕೊಂಡರು.

click me!