'ಹತ್ರಾಸ್ ಪ್ರಕರಣ : ಯುವತಿ ಕುಟುಂಬಕ್ಕೆ ಅಧಿಕಾರಗಳ ಬೆದರಿಕೆ'

Kannadaprabha News   | Asianet News
Published : Oct 12, 2020, 09:07 AM IST
'ಹತ್ರಾಸ್ ಪ್ರಕರಣ : ಯುವತಿ ಕುಟುಂಬಕ್ಕೆ ಅಧಿಕಾರಗಳ ಬೆದರಿಕೆ'

ಸಾರಾಂಶ

ಹತ್ರಾಸ್ ಘಟನೆ ನಡೆದು ದೇಶವನ್ನೇ ಸಂಚಲನಗೊಳಿಸುತ್ತಿರುವಾಗ ಅಧಿಕಾರಗಳು ನೊಂದ ಕುಟುಂಬಕ್ಕೆ ಬೆದರಿಕೆ ಒಡ್ಡುತ್ತಿದ್ದಾರೆ ಎನ್ನಲಾಗಿದೆ. 

ಬೆಂಗಳೂರು (ಅ.12):  ಹತ್ರಾಸ್‌ ಘಟನೆಯಲ್ಲಿ ಸಂತ್ರಸ್ತೆಯ ಚಾರಿತ್ರ್ಯವಧೆ ಮಾಡುವ ಮೂಲಕ ಪ್ರಕರಣದ ದಿಕ್ಕನ್ನು ತಪ್ಪಿಸುವ ಜತೆಗೆ ಅಧಿಕಾರಿಗಳೇ ನೊಂದ ಕುಟುಂಬಸ್ಥರಿಗೆ ಬೆದರಿಕೆಯೊಡ್ಡುತ್ತಿರುವುದು ಅತ್ಯಂತ ಖಂಡನಾರ್ಹ ಎಂದು ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌ ಹೇಳಿದರು.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯು(ಎಐಎಂಎಸ್‌ಎಸ್‌) ಏರ್ಪಡಿಸಿದ್ದ ‘ಹತ್ರಾಸ್‌ ಪ್ರಕರಣ: ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯಗಳು’ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

ಉತ್ತರ ಪ್ರದೇಶದ ಹತ್ರಾಸ್‌ ಘಟನೆ ದೇಶದ ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದೆ. ಜನತೆಯ ಆಕ್ರೋಶದ ನಂತರವಷ್ಟೇ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೇಲ್ಜಾತಿಗೆ ಸೇರಿದ ಯುವಕರಿಂದ ಅತ್ಯಾಚಾರಕ್ಕೊಳಗಾದ ಯುವತಿಯು ಸಾವನ್ನಪ್ಪಿದಾಗ ಶವವನ್ನು ಕೂಡ ಕುಟುಂಬಕ್ಕೆ ನೀಡದೆ ಗುಟ್ಟುಗುಟ್ಟಾಗಿ ರಾತ್ರೋರಾತ್ರಿ ಅದನ್ನು ಸುಟ್ಟುಹಾಕಿದ್ದಾರೆ. ಅದನ್ನು ಪ್ರತಿಭಟಿಸಿದವರ ಮೇಲೆ ಹಲ್ಲೆ ನಡೆಸಿದ್ದಾರೆ. ಸಂತ್ರಸ್ತೆಯ ಕುಟುಂಬವನ್ನು ಯಾರೂ ಭೇಟಿಯಾಗದಂತೆ ತಡೆಯೊಡ್ಡಿದ್ದಾರೆ. ಇದನ್ನು ಸಹಿಸಲು ಸಾಧ್ಯವೇ ಇಲ್ಲ. ಇವೆಲ್ಲವೂ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಪ್ರಕರಣವನ್ನು ಮುಚ್ಚಲು ಮಾಡುತ್ತಿರುವ ತಂತ್ರಗಳು ಎಂದು ದೂರಿದರು.

ಹೆಣ್ಣು ಮಕ್ಕಳಿಗೆ ಮುಖ್ಯವಾಗಿ ಆಧುನಿಕ ಶಿಕ್ಷಣ ಸಿಗಬೇಕು. ಉದ್ಯೋಗಾವಕಾಶಗಳು ಸಿಗುವಂತಾಗಬೇಕು. ಶೇ.50ರಷ್ಟುಇರುವ ಹೆಣ್ಣುಮಕ್ಕಳು ಒಗ್ಗಟ್ಟಾಗಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು.ಸಮಾಜದಲ್ಲಿ ಪಿತೃಪ್ರಧಾನ ಧೋರಣೆ ತೊಲಗಬೇಕು. ಬಲಿಪಶುವನ್ನೇ ಬಲಿಯಾಗಿಸುವ ಸಂಸ್ಕೃತಿ ತೊಲಗಬೇಕು ಎಂದರು.

ಹಾಥ್ರಸ್ ರೇಪ್ ಪ್ರಕರಣ ಬೆನ್ನಲ್ಲೇ ಮಹತ್ವದ ಆದೇಶ ಹೊರಡಿಸಿದ ಕೇಂದ್ರ! ...

ಸಾಹಿತಿ ರೇಣುಕಾ ನಿಡಗುಂದಿ ಮಾತನಾಡಿ, ನಿರ್ಭಯಾ ಘಟನೆಯ ನಂತರ ದೇಶದಾದ್ಯಂತ ಹೋರಾಟಗಳು ನಡೆದಾಗ ಅತ್ಯಾಚಾರಿಗಳಿಗೆ ಕೂಡಲೇ ಶಿಕ್ಷೆಯಾಗಬಹುದು ಎಂಬ ಭರವಸೆ ಇತ್ತು. ಆದರೆ ಆಕೆಗೆ ನ್ಯಾಯ ಸಿಗಲು ಏಳೆಂಟು ವರ್ಷಗಳೇ ಬೇಕಾಯಿತು. ಹತ್ರಾಸ್‌ ಪ್ರಕರಣದಲ್ಲಿ ದುಷ್ಕರ್ಮಿಗಳನ್ನು ರಕ್ಷಿಸುವ ಎಲ್ಲಾ ಹುನ್ನಾರಗಳೂ ನಡೆಯುತ್ತಿವೆ. ಈ ರೀತಿ ಇರುವಾಗ ಸರ್ಕಾರದ ಮೇಲೆ ನಂಬಿಕೆ ಇಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಮತ್ತೋರ್ವ ಅತಿಥಿ ಸುನಂದಾ ಕಡಮೆ ಮಾತನಾಡುತ್ತಾ, ಸಾಮಾಜಿಕ ವ್ಯವಸ್ಥೆಯಲ್ಲಿ ನಾವು ಸಂಘಟಿತರಾದಾಗ ಮಾತ್ರ ಇಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ಸಾಧ್ಯ ಎಂದು ಹೇಳಿದರು.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ರಾಜ್ಯ ಕಾರ್ಯದರ್ಶಿ ಎಸ್‌.ಶೋಭಾ, ಎ.ಶಾಂತ ಇನ್ನಿತರರು ಇದ್ದರು.

PREV
click me!

Recommended Stories

ಕರಾವಳಿಗೆ ಕೇಂದ್ರದ ಬಲ, ಹಂಗಾರಕಟ್ಟೆ ಸೇರಿ ಕರಾವಳಿಯ ಹಲವು ಬಂದರುಗಳ ಅಭಿವೃದ್ಧಿಗೆ ನೂರಾರು ಕೋಟಿ ಮಂಜೂರು
ಶಾಕಿಂಗ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಧಗಧಗನೆ ಹೊತ್ತಿ ಉರಿದ 40 ಎಕರೆ ಕಬ್ಬಿನ ಗದ್ದೆ!