Bengaluru: ಪಾಲಿಕೆ ವಾರ್ಡ್‌ ಮರು ವಿಂಗಡಣೆ ವರದಿ ಕೊನೆಗೂ ಸರ್ಕಾರಕ್ಕೆ ಸಲ್ಲಿಕೆ

By Govindaraj SFirst Published Jun 10, 2022, 3:20 AM IST
Highlights

ವಾರ್ಡ್‌ ಮರು ವಿಂಗಡಣೆ ಕರಡು ವರದಿ ಸಲ್ಲಿಕೆ ಆಗಿದೆಯೋ ಅಥವಾ ಇಲ್ಲವೋ ಎಂಬ ಗೊಂದಲಕ್ಕೆ ತೆರೆ ಬಿದ್ದಿದ್ದು, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅವರಿಗೆ ಅಧಿಕೃತವಾಗಿ ವರದಿಯನ್ನು ಸಲ್ಲಿಸಿರುವುದಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸ್ಪಷ್ಟಪಡಿಸಿದೆ.

ಬೆಂಗಳೂರು (ಜೂ.10): ವಾರ್ಡ್‌ ಮರು ವಿಂಗಡಣೆ ಕರಡು ವರದಿ ಸಲ್ಲಿಕೆ ಆಗಿದೆಯೋ ಅಥವಾ ಇಲ್ಲವೋ ಎಂಬ ಗೊಂದಲಕ್ಕೆ ತೆರೆ ಬಿದ್ದಿದ್ದು, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅವರಿಗೆ ಅಧಿಕೃತವಾಗಿ ವರದಿಯನ್ನು ಸಲ್ಲಿಸಿರುವುದಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸ್ಪಷ್ಟಪಡಿಸಿದೆ. ಬಿಬಿಎಂಪಿಯ 198 ವಾರ್ಡ್‌ಗಳನ್ನು 243 ವಾರ್ಡ್‌ಗಳನ್ನಾಗಿ ಪರಿವರ್ತಿಸಲಾಗಿದ್ದು, ಕೆಲ ವಾರ್ಡ್‌ಗಳ ಗಡಿ ಗುರುತಿಸುವಲ್ಲಿ ಈ ಹಿಂದೆ ಕಂಡು ಬಂದಿದ್ದ ಕೆಲವು ಲೋಪದೋಷಗಳನ್ನು ಸರಿಪಡಿಸಿ ಕರಡು ವರದಿಯನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗಿದೆ. 

ಗುರುವಾರ ಬೆಳಗ್ಗೆ 9.30ರ ಸುಮಾರಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ನೇತೃತ್ವದಲ್ಲಿ ಕಂದಾಯ ವಿಭಾಗದ ವಿಶೇಷ ಆಯುಕ್ತ ದೀಪಕ್‌, ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಬಿಡಿಎ ಆಯುಕ್ತ ರಾಜೇಶ್‌ಗೌಡ ಅವರನ್ನೊಳಗೊಂಡ ಸಮಿತಿ ಕರಡು ವರದಿಯನ್ನು ನಗರಾಭಿವೃದ್ಧಿ ಇಲಾಖೆಗೆ ಹಸ್ತಾಂತರಿಸಿದೆ. ವಾರ್ಡ್‌ ಮರು ವಿಂಗಡಣೆ ಕರಡು ಪ್ರತಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಇನ್ನೆರಡು ದಿನಗಳಲ್ಲಿ ನಗರಾಭಿವೃದ್ಧಿ ಇಲಾಖೆ ಕರ್ನಾಟಕ ರಾಜ್ಯಪತ್ರ ಹೊರಡಿಸಿ 15 ದಿನದಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆ ಪಡೆಯುವ ನಿರೀಕ್ಷೆ ಇದೆ. ಬಳಿಕ ಅಂತಿಮ ರೂಪುರೇಷೆ ನೀಡುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಮೂಲಗಳಿಂದ ತಿಳಿದುಬಂದಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 1.81 ಲಕ್ಷ ಅನಧಿಕೃತ ಕಟ್ಟಡಗಳು!

ವಾರ್ಡ್‌ ಮರು ವಿಂಗಡಣಾ ಸಮಿತಿಯು ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಕಳೆದೊಂದು ವರ್ಷದಿಂದ ಈವರೆಗೆ ವಾರ್ಡ್‌ ಮರು ವಿಂಗಡಣೆ ಕುರಿತು ವರದಿ ಸಿದ್ಧಪಡಿಸಿದೆ. ಸುಪ್ರೀಂಕೋರ್ಟ್‌ ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆಗೆ ಎಂಟು ವಾರ ಗಡುವು ನೀಡಿರುವ ಹಿನ್ನೆಲೆಯಲ್ಲಿ ವಾರ್ಡ್‌ಗಳ ಮರು ವಿಂಗಡಣಾ ಸಮಿತಿ ಈ ಹಿಂದೆ ಸಲ್ಲಿಸಿದ್ದ ಕರಡು ವರದಿಯಲ್ಲಿ ಕೆಲವೊಂದು ಲೋಪಗಳು ಇರುವುದನ್ನು ನಗರಾಭಿವೃದ್ಧಿ ಇಲಾಖೆ ಗುರುತಿಸಿ ಅದನ್ನು ಸರಿಪಡಿಸಿ ಮತ್ತೊಮ್ಮ ವರದಿ ಸಲ್ಲಿಸುವಂತೆ ನಿರ್ದೇಶಿಸಿತ್ತು.

2011ರ ಜನಗಣತಿ ಆಧಾರದಲ್ಲಿ 84.43 ಲಕ್ಷ ಜನಸಂಖ್ಯೆಯಿದ್ದು, ಅದನ್ನು 243 ವಾರ್ಡ್‌ಗಳಿಗೆ ಸರಾಸರಿ 35 ಸಾವಿರ ಜನಸಂಖ್ಯೆ ಹಂಚಿಕೆ ಮಾಡಬೇಕಿತ್ತು. ವಾರ್ಡ್‌ಗಳ ಸಂಖ್ಯೆ 198ರಿಂದ 243ಕ್ಕೆ ಹೆಚ್ಚಾಗುವುದರಿಂದ ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಕೆಲವು ಕ್ಷೇತ್ರಗಳಲ್ಲಿ ವಾರ್ಡ್‌ ಸಂಖ್ಯೆ ಹೆಚ್ಚು, ಕೆಲವು ಕ್ಷೇತ್ರದಲ್ಲಿ ಕಡಿಮೆ ಆಗಲಿದೆ. ನಗರ ಕೇಂದ್ರ ಭಾಗದಲ್ಲಿರುವ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆ ಇರುವುದಿಲ್ಲ ಎಂದು ತಿಳಿದು ಬಂದಿದೆ.

ಬೊಮ್ಮನಹಳ್ಳಿಯಲ್ಲಿ ಅತೀ ಹೆಚ್ಚು ವಾರ್ಡ್‌: ಕೇಂದ್ರ ಭಾಗದ ವಿಧಾನಸಭಾ ಕ್ಷೇತ್ರಗಳಾದ ಚಾಮರಾಜಪೇಟೆ, ಮಲ್ಲೇಶ್ವರ, ಶಾಂತಿನಗರ, ರಾಜಾಜಿನಗರ, ಚಿಕ್ಕಪೇಟೆ, ಗಾಂಧಿನಗರ, ಜಯನಗರ ಸೇರಿದಂತೆ 10 ವಿಧಾನಸಭಾ ಕ್ಷೇತ್ರಗಳ ವಾರ್ಡ್‌ಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳ ಪೈಕಿ ಒಂದು ವಾರ್ಡ್‌ ಕಡಿತಗೊಳಿಸಲಾಗಿದೆ. ಇದರಲ್ಲಿ ಕಾಂಗ್ರೆಸ್‌ ಶಾಸಕರ ಇರುವ 7 ಕ್ಷೇತ್ರಗಳು, ಬಿಜೆಪಿ ಶಾಸಕರ ಇರುವ 3 ಕ್ಷೇತ್ರಗಳಿವೆ. ಬೊಮ್ಮನಹಳ್ಳಿಯಲ್ಲಿ ಈ ಹಿಂದಿಗಿಂತ 6 ವಾರ್ಡ್‌ಗಳನ್ನು ಹೆಚ್ಚಿಗೆ ಸೃಷ್ಟಿಸಲಾಗಿದ್ದು, ಕ್ಷೇತ್ರದ ವಾರ್ಡ್‌ ಸಂಖ್ಯೆ 14ಕ್ಕೆ ಏರಿಕೆಯಾಗಲಿದೆ.

Bengaluru: ಈ ರಸ್ತೆಯಲ್ಲಿ ಒಂದೇ ಒಂದು ಗುಂಡಿಯೂ ಇಲ್ಲ ಅಂದ್ರೆ ನೀವ್ ನಂಬ್ತೀರಾ!

ಉಳಿದಂತೆ ಬೆಂಗಳೂರು ದಕ್ಷಿಣ, ದಾಸರಹಳ್ಳಿ, ಆರ್‌ಆರ್‌ ನಗರ ಕ್ಷೇತ್ರದಲ್ಲಿ ವಾರ್ಡ್‌ ಸಂಖ್ಯೆ 13ಕ್ಕೆ ಹೆಚ್ಚಾಗಲಿದೆ. ಮಹದೇವಪುರದಲ್ಲಿ 12 ಹಾಗೂ ಬ್ಯಾಟರಾಯನಪುರದಲ್ಲಿ ವಾರ್ಡ್‌ ಸಂಖ್ಯೆ 11ಕ್ಕೆ ಹೆಚ್ಚಾಗಲಿದೆ. ಹೀಗೆ 28 ವಿಧಾನಸಭಾ ಕ್ಷೇತ್ರಗಳಲ್ಲಿ 198 ಇದ್ದ ವಾರ್ಡ್‌ಗಳ ಸಂಖ್ಯೆಯನ್ನು 243 ವಾರ್ಡ್‌ಗಳಾಗಿ ವಿಂಗಡಿಸಲಾಗಿದ್ದು, ಹಿಂದಿಗಿಂತ 45 ವಾರ್ಡ್‌ ಹೆಚ್ಚಿಗೆ ಸೃಷ್ಟಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

click me!